ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್್ಸ’ ಬಿಡುಗಡೆಯಾಗುವುದೇನೋ ಖಚಿತವಾಗಿದೆ. ಪುನೀತ್ ತಮ್ಮ ಕೆಲಸವನ್ನು ಪರಿಪೂರ್ಣವಾಗಿ ಮುಗಿಸಿಕೊಟ್ಟಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ನಿರ್ದೇಶಕ ಚೇತನ್ ಸ್ಪಷ್ಟಪಡಿಸಿದ್ದಾರೆ. ಆದರೆ, ಪುನೀತ್ ಅಭಿನಯದ ಇನ್ನಿತರ ಚಿತ್ರಗಳ ಕಥೆ ಏನು ಎಂಬ ಪ್ರಶ್ನೆ ಸಹಜವಾಗಿಯೇ ಇದೆ. ‘ಜೇಮ್್ಸ’ ಅಲ್ಲದೆ, ‘ದ್ವಿತ್ವ’ ಮತ್ತು ದಿನಕರ್ ತೂಗುದೀಪ ನಿರ್ದೇಶನದ ಇನ್ನೊಂದು ಚಿತ್ರವನ್ನು ಪುನೀತ್ ಒಪ್ಪಿಕೊಂಡಿದ್ದರು. ಈ ಪೈಕಿ, ‘ದ್ವಿತ್ವ’ ಇದೇ ತಿಂಗಳು ಪ್ರಾರಂಭವಾಗಬೇಕಿತ್ತು. ಸದ್ಯಕ್ಕೆ ಚಿತ್ರದ ಕುರಿತು ಯಾವುದೇ ನಿರ್ಧಾರವಾಗಿಲ್ಲ ಎಂದು ನಿರ್ದೇಶಕ ಪವನ್ ಕುಮಾರ್ ಹೇಳಿದ್ದಾರೆ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿರುವ ಅವರು, ‘ಸದ್ಯಕ್ಕೆ ಏನೂ ತೀರ್ವನವಾಗಿಲ್ಲ. ಪುನೀತ್ ಅವರ ನಿಧನದ ಶಾಕ್ನಿಂದ ಇನ್ನೂ ಯಾರೂ ಹೊರಬಂದಿಲ್ಲ. ಹೊಂಬಾಳೆ ಫಿಲಂಸ್ ಮತ್ತು ಪುನೀತ್ ಅವರ ಸ್ನೇಹ, ಸಂಬಂಧ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೇ. ಹಾಗಾಗಿ, ಇದುವರೆಗೂ ಚಿತ್ರದ ಕುರಿತು ಏನೂ ತೀರ್ವನವಾಗಿಲ್ಲ. 11 ದಿನಗಳ ನಂತರ ಯೋಚಿಸೋಣ ಎಂದು ಮಾತಾಡಿಕೊಂಡಿದ್ದೇವೆ’ ಎನ್ನುತ್ತಾರೆ. ‘ದ್ವಿತ್ವ’ ಚಿತ್ರದ ಚಿತ್ರೀಕರಣ ನವೆಂಬರ್ 25ರಿಂದ ಪ್ರಾರಂಭವಾಗಬೇಕಿತ್ತಂತೆ. ಬೆಂಗಳೂರಿನಲ್ಲಿ 15 ದಿನ, ಹೈದರಾಬಾದ್ನಲ್ಲಿ 10 ದಿನಗಳ ಚಿತ್ರೀಕರಣ ಪ್ಲಾನ್ ಆಗಿತ್ತಂತೆ. ಮುಂದೇನಾಗುತ್ತದೆ ಎಂದು ಇನ್ನಷ್ಟೇ ಕಾದು ನೋಡಬೇಕಿದೆ.
ಕನಸಾಗಿಯೇ ಉಳಿಯಿತು: ‘ದ್ವಿತ್ವ’ ಚಿತ್ರಕ್ಕೆ ನಾಯಕಿಯಾಗಿ ತ್ರಿಷಾ ಆಯ್ಕೆಯಾಗಿದ್ದರು. ಇನ್ನೊಬ್ಬ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆಯಾಗಿದ್ದರೂ, ಚಿತ್ರತಂಡ ಆ ವಿಷಯವನ್ನು ಬಹಿರಂಗಗೊಳಿಸಿರಲಿಲ್ಲ. ಸೂಕ್ತ ಸಮಯಕ್ಕಾಗಿ ಚಿತ್ರತಂಡ ಕಾದಿತ್ತು. ಆದರೆ, ಪುನೀತ್ ಜತೆಗೆ ನಟಿಸಬೇಕೆಂಬ ಕನಸು, ಕನಸಾಗಿಯೇ ಉಳಿಯಿತು ಎಂಬ ಬೇಸರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಶಿಕಾ ಪೋಸ್ಟ್ ಹಾಕಿದ್ದಾರೆ. ‘ನಾನು ‘ದ್ವಿತ್ವ’ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಾಗ, ಕನಸು ನನಸಾಯಿತು ಎಂದುಕೊಂಡಿದ್ದೆ. ಅದು ಈಡೇರಲಿಲ್ಲ’ ಎಂದಿದ್ದಾರೆ.