ಚೆನ್ನೈ: ತಮಿಳು ನಟಿ ವನಿತಾ ವಿಜಯ್ಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಅವರ ಫೋಟೋವೊಂದು ಇಂಟರ್ನೆಟ್ನಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋ ಹಲವರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಫೋಟೋ ನೋಡಿ ಹಲವರು, ವನಿತಾ ಏನಾದರೂ ನಾಲ್ಕನೆಯ ಬಾರಿಗೆ ಮದುವೆಯಾಗಿದ್ದಾರಾ ಎಂದು ಕೇಳುತ್ತಿದ್ದಾರೆ.
ತಮಿಳಿನ ಖ್ಯಾತ ನಟ ವಿಜಯ್ಕುಮಾರ್ ಅವರ ಮಗಳಾಗಿರುವ ವನಿತಾ, ಇದುವರೆಗೂ ಮದುವೆಯಿಂದಲೇ ಹೆಚ್ಚು ಗುರುತಿಸಿಕೊಂಡಿದ್ದವರು. ಇದುವರೆಗೂ ಮೂರು ಬಾರಿಗೆ ವನಿತಾ ಮದುವೆಯಾಗಿದ್ದಾರೆ. ಈ ಹಿಂದೆ ಎರಡು ಮದುವೆಗಳು ಕಾರಣಾಂತರಗಳಿಂದ ವಿಫಲಗೊಂಡಿದ್ದವು. ಕಳೆದ ವರ್ಷ ಪೀಟರ್ ಪಾಲ್ ಎಂಬುವವರನ್ನು ಪ್ರೀತಿಸಿ ಮದುವೆಯಾದ ವನಿತಾ, ಮೂರೇ ತಿಂಗಳಲ್ಲಿ ಅವರಿಂದ ದೂರವಾಗಿದ್ದರು. ಪೀಟರ್ ಅತಿಯಾಗಿ ಕುಡಿಯುತ್ತಾರೆ ಮತ್ತು ಅವರು ತಮ್ಮ ಮೊದಲ ಪತ್ನಿಗೆ ವಿಚ್ಛೇಧನ ನೀಡಿಲ್ಲ ಎಂಬ ಕಾರಣಕ್ಕೆ ಪೀಟರ್ನಿಂದ ದೂರವಾಗಿದ್ದರು.
ಪೀಟರ್ನಿಂದ ದೂರವಾದ ಬಳಿಕ ವನಿತಾ ಅವರ ಸುದ್ದಿಯೇ ಇರಲಿಲ್ಲ. ಈಗ ನೋಡಿದರೆ, ಪವರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟ ಶ್ರೀನಿವಾಸ್ ಅವರ ಜತೆಗಿರುವ ಫೋಟೋವೊಂದನ್ನು ವನಿತಾ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ, ವನಿತಾ ನಾಲ್ಕನೆಯ ಬಾರಿಗೆ ಮದುವೆಯಾಗಿದ್ದಾರೆ ಎಂಬ ಸುದ್ದಿ ಒಂದು ಕಡೆಯಾದರೆ, ಇದೊಂದು ಗಿಮಿಕ್ ಅಷ್ಟೇ ಎಂಬ ಮಾತು ಸಹ ಕೇಳಿಬರುತ್ತಿದೆ.
ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಈಗ ‘ಕ್ಯಾಪ್ಟನ್ ಇಂಡಿಯಾ’ …
ಮೂಲಗಳ ಪ್ರಕಾರ, ವನಿತಾ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಆ ಚಿತ್ರದಲ್ಲಿ ಶ್ರೀನಿವಾಸನ್ ಸಹ ನಟಿಸುತ್ತಿದ್ದಾರಂತೆ. ಈ ಚಿತ್ರದಲ್ಲಿ ಅವರಿಬ್ಬರೂ ಮದುವೆಯಾಗುವ ದೃಶ್ಯವೊಂದಿದೆಯಂತೆ. ಪ್ರಚಾರಕ್ಕಾಗಿ ವನಿತಾ ಈ ಫೋಟೋ ಹಂಚಿಕೊಂಡಿದ್ದು, ಮದುವೆಯಾಗಿರುವುದು ಸುಳ್ಳು ಎಂದು ಹೇಳಲಾಗುತ್ತಿದೆ. ಆದರೆ, ವನಿತಾ ಮಾತ್ರ ಅದ್ಯಾಕೋ ಮೌನವಾಗಿದ್ದಾರೆ. ವನಿತಾ ಈ ವಿಷಯದಲ್ಲಿ ಮೌನವಹಿಸಿರುವುದೇಕೆ ಎಂದು ಕಾಲವೇ ಉತ್ತರಿಸಬೇಕು.