ಬೆಂಗಳೂರು: ಬಿಗ್ಬಾಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲವರು ನಟ ಸೃಜನ್ ಲೋಕೇಶ್ ಹೆಸರನ್ನು ತಳುಕು ಹಾಕುತ್ತಿದ್ದರೆ, ಇನ್ನು ಕೆಲವರು ಮಗು ಮಾಡಿಕೊಳ್ಳಲು ನಿವೇದಿತಾ ಒಪ್ಪಿಕೊಳ್ಳದಿದ್ದಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎನ್ನುತ್ತಿದ್ದಾರೆ. ಆದರೆ, ವೃತ್ತಿ ಬದುಕಿನಲ್ಲಿ ಮುನ್ನಡೆಯಲು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿರುವುದಾಗಿ ಚಂದನ್ ಮತ್ತು ನಿವೇದಿತಾ ಸ್ಪಷ್ಟನೆ ನೀಡಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ.
ಬಿಗ್ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದರು. ನಂತರ ಇಬ್ಬರ ಸ್ನೇಹ ಪ್ರೀತಿಯಾಗಿ ತಿರುಗಿ ಇಬ್ಬರು 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದರು. ಚಂದನ್ ಶೆಟ್ಟಿ ಸಿನಿಮಾ ಇಂಡಸ್ಟ್ರೀಯಲ್ಲಿ ಪತ್ನಿ ನಿವೇದಿತಾ ಗೌಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟೀವ್ ಆಗಿದ್ದರು. 20 ದಿನಗಳ ಹಿಂದಷ್ಟೇ ಪತ್ನಿ ನಿವೇದಿತಾಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಚಂದನ್ ಪೋಸ್ಟ್ ಮಾಡಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ ಗುರುವಾರ (ಜೂನ್ 6) ಡಿವೋರ್ಸ್ಗಾಗಿ ಶಾಂತಿನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಶುಕ್ರವಾರ ನ್ಯಾಯಾಲಯ ಇಬ್ಬರಿಗೂ ಡಿವೋರ್ಸ್ ಮಂಜೂರು ಮಾಡಿದೆ. ಚಂದನ್ ಮತ್ತು ನಿವೇದಿತಾ ಕಳೆದ ಒಂದು ವರ್ಷಗಳಿಂದ ಕಾಯ್ದುಕೊಂಡಿದ್ದರು. ಅಂತಿಮವಾಗಿ ಇಬ್ಬರು ಬೇರೆ ಬೇರೆಯಾಗಿ, ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಇಬ್ಬರ ಡಿವೋರ್ಸ್ ಸಂಬಂಧ ನಾನಾ ವದಂತಿಗಳು ಹರಿದಾಡುತ್ತಿವೆ. ನಿವೇದಿತಾರ ಅತಿಯಾದ ಸೋಶಿಯಲ್ ಮೀಡಿಯಾ ಕ್ರೇಜ್ ಚಂದನ್ಗೆ ಅಸಮಾಧಾನ ತರಿಸಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಅಲ್ಲದೆ, ನಿವೇದಿತಾ ಮಗು ಮಾಡಿಕೊಳ್ಳಲು ಒಪ್ಪದಿದ್ದಕ್ಕೆ ಚಂದನ್ ಬೇರೆಯಾಗಿದ್ದಾರೆ ಎನ್ನುತ್ತಿದ್ದಾರೆ. ಇದರ ನಡುವೆ ಸೃಜನ್ ಲೋಕೇಶ್ ಹೆಸರು ಸಹ ತಳುಕು ಹಾಕಿಕೊಂಡಿದೆ. ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಹರಿಬಿಟ್ಟು ಇದೇ ಡಿವೋರ್ಸ್ಗೆ ಕಾರಣ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಸೃಜನ್ ಈವರೆಗೂ ಪ್ರತಿಕ್ರಿಯಿಸಿಲ್ಲ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಂದನ್ ಶೆಟ್ಟಿ ಜತೆಗಿನ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿರುವ ನಿವೇದಿತಾ ಗೌಡ, ಈ ದಿನ, ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ ಎಂದಿದ್ದಾರೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು. ಇಂತಿ ನಿಮ್ಮ ನಿವೇದಿತಾ ಗೌಡ ಎಂದು ಬರೆದುಕೊಂಡಿದ್ದಾರೆ.
9 ಕೋಟಿ ರೂ. ಜೀವನಾಂಶ ಪಡೆದ್ರಾ?
ತಾರಾ ದಂಪತಿ ಯಾರೇ ಆಗಲಿ ಡಿವೋರ್ಸ್ ಆದಾಗ ಜೀವನಾಂಶ ವಿಚಾರ ಚರ್ಚೆಯಾಗುವುದು ಸಾಮಾನ್ಯ. ನಾಗಚೈತನ್ಯ ಹಾಗೂ ಸಮಂತಾ ಡಿವೋರ್ಸ್ ಆದಾಗಲೂ ಜೀವನಾಂಶ ವಿಚಾರ ಸಾಕಷ್ಟು ಚರ್ಚೆಯಾಗಿತ್ತು ಮತ್ತು ಅನೇಕ ವರದಿಗಳು ಪ್ರಕಟವಾಗಿದ್ದವು. ಆದರೆ, ಜೀವನಾಂಶ ವಿಚಾರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಇದೀಗ ಚಂದನ್ ಮತ್ತು ನಿವೇದಿತಾ ವಿಚಾರದಲ್ಲಿ ಜೀವನಾಂಶ ವಿಚಾರ ಸದ್ದು ಮಾಡುತ್ತಿದೆ. ಅದೇನೆಂದರೆ, ಚಂದನ್ ಅವರು ನಿವೇದಿತಾ ಗೌಡಗೆ ಬರೋಬ್ಬರಿ 9 ಕೋಟಿ ರೂಪಾಯಿ ಜೀವನಾಂಶವನ್ನು ನೀಡಿದ್ದಾರೆ ಎಂಬ ಸುಳ್ಳು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದರೆ, ವಕೀಲೆ ಅನಿತಾ ನೀಡಿರುವ ಹೇಳಿಕೆ ಪ್ರಕಾರ, ಯಾವುದೇ ಜೀವನಾಂಶ ನೀಡಿಲ್ಲ. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಬೇರೆಯಾಗಿದ್ದಾರೆ. ಅಲ್ಲದೆ, ನಿವೇದಿತಾ ಗೌಡ ಕೂಡ ಯಾವುದೇ ಜೀವನಾಂಶಕ್ಕೆ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಇಬ್ಬರು ಬಣ್ಣದ ಜಗತ್ತಿನಲ್ಲಿ ಸಕ್ರಿಯರಾಗಿದ್ದು, ಸಾಕಷ್ಟು ಶೋಗಳು ಮತ್ತು ಕೆಲ ಸಿನಿಮಾಗಳಲ್ಲಿ ಬಿಜಿಯಾಗಿರುವುದರಿಂದ ಇಬ್ಬರಿಗೂ ಯಾವುದೇ ಹಣದ ಅವಶ್ಯಕತೆ ಇಲ್ಲ. ಜೀವನಾಂಶವನ್ನು ಯಾರೂ ಕೇಳಿಲ್ಲ ಮತ್ತು ಯಾರೂ ಕೂಡ ಕೊಟ್ಟಿಲ್ಲ ಎಂದು ವಕೀಲೆ ಅನಿತಾ ಅವರು ಸ್ಪಷ್ಟನೆ ನೀಡಿದ್ದಾರೆ.
ಹೀಗಾಗಿ 9 ಕೋಟಿ ರೂ. ಜೀವನಾಂಶ ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು ಎಂಬುದು ಖಚಿತವಾಗಿದೆ.