ಸಿನಿವಾಣಿ

ಚಿರುಗೆ ಧ್ರುವ ಸರ್ಜಾ ಧ್ವನಿ; ರಾಜ ಮಾರ್ತಾಂಡಕ್ಕಾಗಿ ಡಬ್ಬಿಂಗ್ ಶುರು

ಬೆಂಗಳೂರು: ಅಣ್ಣ ಡಬ್ಬಿಂಗ್ ಮುಗಿಸಿದ್ದರಾ?

ಎರಡು ವರ್ಷಗಳ ಹಿಂದೆ ನಿಧನರಾದ ಚಿರಂಜೀವಿ ಸರ್ಜಾ ಅವರ ಪಾರ್ಥಿವ ಶರೀರ ನೋಡುವುದಕ್ಕೆ ‘ರಾಜ ಮಾರ್ತಾಂಡ’ ಚಿತ್ರದ ನಿರ್ದೇಶಕ ರಾಮ್ ನಾರಾಯಣ್​ ಹೋದಾಗ, ಧ್ರುವ ಈ ಮಾತು ಕೇಳಿದ್ದರಂತೆ. ಆಗ ನಿರ್ದೇಶಕರು ಇಲ್ಲ ಎಂದಾಗ, ಡಬ್ಬಿಂಗ್ ಮಾಡಿಕೊಡುವುದಾಗಿ ಧ್ರುವ ಆಶ್ವಾಸನೆ ನೀಡಿದ್ದರಂತೆ. ಅದರಂತೆ, ಈಗಾಗಲೇ ಅವರು ಟೀಸರ್​ನಲ್ಲಿ ಚಿರುಗೆ ಧ್ವನಿ ನೀಡಿದ್ದರು. ಇನ್ನು ಒಟ್ಟಾರೆ ಚಿತ್ರಕ್ಕೆ ಧ್ರುವ ಡಬ್ಬಿಂಗ್ ಮಾಡುವುದು ಬಾಕಿ ಇತ್ತು. ಆ ಕೆಲಸವೂ ಸೋಮವಾರದಿಂದ ಶುರುವಾಗಿದೆ.

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಿರ್ದೇಶಕ ರಾಮ್ ನಾರಾಯಣ್​, ‘ಡಬ್ಬಿಂಗ್ ಹೊರತುಪಡಿಸಿದರೆ ಮಿಕ್ಕೆಲ್ಲ ಕೆಲಸಗಳು ಮುಗಿದಿತ್ತು. ಸೋಮವಾರದಿಂದ ಧ್ರುವ ಡಬ್ಬಿಂಗ್ ಪ್ರಾರಂಭಿಸಿದ್ದು ಮೂರ್ನಾಲ್ಕು ದಿನಗಳ ಕಾಲ ನಡೆಯಲಿದೆ. ಚಿತ್ರದಲ್ಲಿ ಉದ್ದುದ್ದ ಸಂಭಾಷಣೆಗಳಿವೆ. ಆ ಸಂಭಾಷಣೆಗಳು ಬೇಸ್ ವಾಯ್ಸ್​​ನಲ್ಲಿ ಮೂಡಿಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾವು ಮಾತಾಡಿಕೊಂಡಿದ್ದೆವು. ಧ್ರುವ ಅವರದ್ದು ಬೇಸ್ ವಾಯ್ಸ್​​ ಆಗಿರುವುದರಿಂದ, ನಾವು ಏನು ಅಂದುಕೊಂಡಿದ್ದೆವೋ, ಅದಕ್ಕಿಂತ ಎರಡು ಪಟ್ಟು ಬೇರೆ ಚೆನ್ನಾಗಿ ಬಂದಿದೆ. ಪ್ರೇಕ್ಷಕರು ಸಹ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.

‘ರಾಜ ಮಾರ್ತಾಂಡ’ ಚಿತ್ರವನ್ನು ಶಿವಕುಮಾರ್ ನಿರ್ವಿುಸಿದ್ದು, ಅರ್ಜುನ್ ಜನ್ಯ ಮತ್ತು ಧರ್ಮ ವಿಶ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಚಿರುಗೆ ನಾಯಕಿಯಾಗಿ ದೀಪ್ತಿ ಸಾಥಿ ನಟಿಸಿದ್ದು, ತ್ರಿವೇಣಿ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.