ಚಿತ್ರ : ತೋತಾಪುರಿ 2
ನಿರ್ದೇಶನ : ವಿಜಯ್ ಪ್ರಸಾದ್
ನಿರ್ಮಾಣ : ಕೆ.ಎ. ಸುರೇಶ್
ತಾರಾಗಣ : ಜಗ್ಗೇಶ್, ಡಾಲಿ ಧನಂಜಯ, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾ ದತ್ತ, ದತ್ತಣ್ಣ ಮುಂದಾದವರು.
‘ಮ್ಯಾರೇಜಸ್ ಆರ್ ಮೇಡ್ ಇನ್ ಹೆವೆನ್ ಅಂತಾರೆ. ಆದರೆ, ಪ್ರೀತಿ, ಪ್ರೇಮ, ಕಾಮ ನಡೆಯೋದು ಭೂಮಿ ಮೇಲೇ…’ ಎಂಬ ಸಾಲುಗಳು ‘ತೋತಾಪುರಿ 2’ ಚಿತ್ರದ ಕೊನೆಯಲ್ಲಿ ತೆರೆಯ ಮೇಲೆ ಮೂಡುತ್ತವೆ. ಈ ಪ್ರೀತಿ, ಪ್ರೇಮ, ಕಾಮಗಳು ಜಾತಿ, ಧರ್ಮವನ್ನೂ ಮೀರಿದ್ದು ಎಂಬ ಭಾವೈಕ್ಯತೆಯ ಸಂದೇಶ ಚಿತ್ರದಲ್ಲಿದೆ.
‘ತೋತಾಪುರಿ’ ಮೊದಲ ಭಾಗ ಒಂದೇ ಟ್ರ್ಯಾಕ್‌ನಲ್ಲಿತ್ತು. ಅದರಲ್ಲಿ ಈರೇಗೌಡ (ಜಗ್ಗೇಶ್), ಶಕೀಲಾ ಬಾನು (ಅದಿತಿ) ಸುತ್ತ ಕಥೆ ಸಾಗಿತ್ತು. ಚಿತ್ರದಂತ್ಯಕ್ಕೆ ಧನಂಜಯ (ನಾರಾಯಣ ಪಿಳ್ಳೈ) ಪರಿಚಯಿಸಿ, ಎರಡನೇ ಭಾಗಕ್ಕೆ ಮುನ್ನುಡಿ ಬರೆಯಲಾಗಿತ್ತು. ಈ ಸೀಕ್ವಲ್‌ನಲ್ಲಿ ಎರಡು ಟ್ರ್ಯಾಕ್‌ಗಳಿವೆ. ಒಂದೆಡೆ ಈರೇಗೌಡ ಮತ್ತು ಶಕೀಲಾ ಪ್ರೀತಿ, ಪ್ರೇಮ, ‘ಪ್ರಯಾಣ’ ಹಾಗೂ ನಾರಾಯಣ ಪಿಳ್ಳೈ ಮತ್ತು ಸಿಸ್ಟರ್ ವಿಕ್ಟೋರಿಯಾ (ಸುಮನ್ ರಂಗನಾಥ್) ಹುಡುಗಾಟ ಮತ್ತು ಹುಡು‘ಕಾಟ’! ಧನಂಜಯ ಮತ್ತು ಸುಮನ್ ರಂಗನಾಥ್ ಲವ್‌ಸ್ಟೋರಿ ಈ ಚಿತ್ರಕ್ಕೆ ಹೊಸತನ ನೀಡಿದೆ. ಅದರ ನಡುವೆ ಆಗಾಗ ಚೇಷ್ಟೆ ಮಾಡಿ ನಗಿಸುತ್ತಾ, ಅಲ್ಲಲ್ಲಿ ಭಾವೈಕ್ಯತೆಯ, ಮಾನವೀಯ ಮೌಲ್ಯಗಳ ಕುರಿತ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್. ಧಾರ್ಮಿಕ ಸೂಕ್ಷ್ಮ ವಿಷಯಗಳನ್ನು ಹಾಸ್ಯದ ಮೂಲಕ ಹೇಳುವುದು ಕಷ್ಟ. ಆದರೆ, ಆ ಪ್ರಯತ್ನದಲ್ಲಿ ವಿಜಯ್ ಪ್ರಸಾದ್ ಅಲ್ಲಲ್ಲಿ ಎಡವುತ್ತಾ, ಬೀಳುತ್ತಾ ಗುರಿ ತಲುಪಿದ್ದಾರೆ!
ಜಗ್ಗೇಶ್ ಮೊದಲ ಭಾಗದಂತೆಯೇ ಸೀಕ್ವಲ್‌ನಲ್ಲೂ ಲೀಲಾಜಾಲವಾಗಿದ್ದಾರೆ. ಈರೇಗೌಡ ಮತ್ತು ಶಕೀಲಾ ನಡುವಿನ ಕೆಮಿಸ್ಟ್ರಿಗಿಂತ, ಈರೇಗೌಡ ಮತ್ತು ದೊನ್ನೆ ರಂಗಮ್ಮ (ವೀಣಾ ಸುಂದರ್) ನಡುವಿನ ಕೆ‘ಮಿಸ್ಟ್ರಿ’ ಪ್ರೇಕ್ಷಕರಿಗೆ ಶಾಕ್ ನೀಡಿದರೂ ಆಶ್ಚರ್ಯವಿಲ್ಲ. ಆದರೆ, ವೀಣಾ ಸುಂದರ್ ಒಬ್ಬ ಕಲಾವಿದೆಯಾಗಿ ಪಾತ್ರವನ್ನು ಅಪ್ಪಿಕೊಂಡಿದ್ದಾರೆ. ನಂಜಮ್ಮ ಪಾತ್ರದಲ್ಲಿ ಹೇಮಾ ದತ್ ವಿಭಿನ್ನ ಬಾಡಿ ಲಾಂಗ್ವೇಜ್ ಮೂಲಕವೇ ನಗಿಸುತ್ತಾರೆ. ಮೂರು ಲುಕ್‌ಗಳಲ್ಲಿ ಡಾಲಿ ಧನಂಜಯ ಕಾಣಿಸಿಕೊಂಡಿದ್ದು, ಪ್ರೇಮದಾಸನಾಗಿ, ದೇವದಾಸನಾಗಿ ಇಷ್ಟವಾಗುತ್ತಾರೆ.
‘ತೋತಾಪುರಿ 2’ ಕೇವಲ ಎರಡು ತಾಸಿನ ಸಿನಿಮಾ. ಚೇಷ್ಟೆ, ಕುಚೇಷ್ಟೆಗಳ ನಡುವೆ ಬೋರ್ ಅನ್ನಿಸದೇ ನೋಡಿಸಿಕೊಂಡು ಹೋಗುತ್ತದೆ. ಮೊದಲ ಭಾಗಕ್ಕಿಂತ ಈ ಸೀಕ್ವಲ್ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗಲಿದೆ. ಚಿತ್ರದಲ್ಲಿ ‘ಮಸೀದಿ, ಮಂದಿರಗಳನ್ನು ಕಟ್ಟೋಕೂ ಮುನ್ನ ಮನಸ್ಸುಗಳನ್ನು ಕಟ್ಟಬೇಕು’ ಎಂಬ ಭಾವೈಕ್ಯತೆಯ ಸಂದೇಶವೂ ಇದೆ, ಕಾಮಕ್ಕೆ ಕಣ್ಣಿಲ್ಲ ಎಂಬ ಕುಚೇಷ್ಟೆಯೂ ಇದೆ.