

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಾಮಾನ್ಯವಾಗಿ ಪ್ರತಿ ಶುಕ್ರವಾರ ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ, ಈ ವಾರ ಒಂದು ದಿನ ಮುನ್ನ ಇಂದೇ ಚಿತ್ರಗಳು ತೆರೆಗೆ ಬರಲು ಅಣಿಯಾಗಿವೆ. ಅದಕ್ಕೆ ಕಾರಣ ಈದ್ ಮಿಲಾದ್ ಹಬ್ಬದ ರಜೆ ಹಾಗೂ ಒಂದು ದಿನ ಹೆಚ್ಚುವರಿ ಸಿಗುವ ವೀಕೆಂಡ್. ಪ್ರಶಾಂತ್ ನೀಲ್ ನಿರ್ದೇಶನದ, ಈ ಹಿಂದೆ ಪ್ರಭಾಸ್ ನಾಯಕನಾಗಿರುವ ‘ಸಲಾರ್’ ಸೆ. 28ರಂದು ರಿಲೀಸ್ ಅಂತ ಘೋಷಿಸಿದ್ದ ಕಾರಣ, ಬಹುತೇಕ ಚಿತ್ರಗಳು ಈ ದಿನದಿಂದ ದೂರ ಉಳಿದಿದ್ದವು. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ‘ಸಲಾರ್’ ಪೋಸ್ಟ್ಪೋನ್ ಮಾಡಿದ್ದು ತಿಳಿಯುತ್ತಲೇ, ಕನ್ನಡ ಸೇರಿ ಹಲವು ಪರಭಾಷಾ ಸಿನಿಮಾಗಳೂ ಇಂದು ತೆರೆಗೆ ಬರುವ ಬಗ್ಗೆ ರಿಲೀಸ್ ದಿನಾಂಕ ಘೋಷಿಸಿಕೊಂಡಿದ್ದವು.
ಬಾನದಾರಿಯಲ್ಲಿ ಗಣೇಶ್
ಪ್ರೀತಂ ಗುಬ್ಬಿ ನಿರ್ದೇಶನದ ಗಣೇಶ್ ನಾಯಕನಾಗಿರುವ ಚಿತ್ರ ‘ಬಾನದಾರಿಯಲಲ್ಲಿ’. ಈ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾದಲ್ಲಿ ಗಣೇಶ್ಗೆ ಇಬ್ಬರು ನಾಯಕಿಯರಿದ್ದು, ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಜತೆಗೆ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿದ್ದಾರೆ. ಗಣೇಶ್ ಕ್ರಿಕೆಟರ್ ಪಾತ್ರದಲ್ಲಿ ನಟಿಸಿದ್ದು, ಸರ್ಫರ್ ಆಗಿ ರುಕ್ಮಿಣಿ ಹಾಗೂ ವೈಲ್ಡ್ಲೈಫ್ ಫೋಟೋಗ್ರರ್ ಆಗಿ ರೀಷ್ಮಾ ನಟಿಸಿದ್ದಾರೆ.
ಡಾಲಿ, ಜಗ್ಗೇಶ್ ಜುಗಲ್ಬಂದಿ
ಕಳೆದ ಸೆ. 30ರಂದು ತೆರೆಗೆ ಬಂದ ‘ತೋತಾಪುರಿ’ ಚಿತ್ರದ ಸೀಕ್ವಲ್ ‘ತೋತಾಪುರಿ 2’ ಕೂದ ಇವತ್ತು ರಿಲೀಸ್ ಆಗುತ್ತಿದೆ. ವಿಜಯ್ ಪ್ರಸಾದ್ ನಿರ್ದೇಶಿಸಿ ಜಗ್ಗೇಶ್, ಡಾಲಿ ಧನಂಜಯ, ಅದಿತಿ, ಸುಮನ್ ರಂಗನಾಥ್ ನಟಿಸಿರುವ ಚಿತ್ರವಿದು. ಒಟಿಟಿಯಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಅದೇ ಸಕ್ಸಸ್ ಇದೀಗ ಸೀಕ್ವಲ್ಗೂ ಸಿಗಲಿದೆ ಎಂಬ ಭರವಸೆ ಚಿತ್ರತಂಡದ್ದು. ಸಮಾನತೆ, ಮಾನವೀಯ ಮೌಲ್ಯಗಳು ಹಾಗೂ ಭಾವೈಕ್ಯತೆಯ ಸಾಮಾಜಿಕ ಸಂದೇಶ ಸಾರುವ ಚಿತ್ರವಿದು.
ಪರಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಅಬ್ಬರ
ಬಾಲಿವುಡ್ನಲ್ಲಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕನ್ನಡದ ಹುಡುಗಿ ಸಪ್ತಮಿ ಗೌಡ, ನಾನಾ ಪಾಟೇಕರ್, ಅನುಪಮ್ ಖೇರ್, ಪಲ್ಲವಿ ಜೋಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ‘ದಿ ವ್ಯಾಕ್ಸೀನ್ ವಾರ್’. ತಮಿಳಿನಲ್ಲಿ ರಾಘವ ಲಾರೆನ್ಸ್, ಕಂಗನಾ ರಣಾವತ್ ನಟಿಸಿರುವ ಪಿ.ವಾಸು ನಿರ್ದೇಶನದ ‘ಚಂದ್ರಮುಖಿ 2’, ಸಿದ್ಧಾರ್ಥ್ ನಟಿಸಿರುವ ‘ಚಿತ್ತ’ ಹಾಗೂ ತೆಲುಗಿನಲ್ಲಿ ರಾಮ್ ಪೋತಿನೇನಿ, ಶ್ರೀಲೀಲಾ ನಟಿಸಿ, ಬೋಯಪಾಟಿ ಶ್ರೀನು ನಿರ್ದೇಶಿಸಿರುವ ‘ಸ್ಕಂದ’ ಚಿತ್ರಗಳು ಪ್ಯಾನ್ ಇಂಡಿಯಾ ಬಹುಭಾಷೆಗಳಲ್ಲಿ ರಿಲೀಸ್ ಆಗಲಿವೆ. ಜತೆಗೆ ಕನ್ನಡದ ‘ಕ್ರಾಂತಿವೀರ’, ತೆಲುಗಿನ ‘ಪೆದ್ದ ಕಾಪು : ಭಾಗ 1’, ತಮಿಳಿನ ‘ಇರೈವಾನ್’, ಹಿಂದಿ ಚಿತ್ರ ‘ಫುಕ್ರೇ 3’, ಮಲಯಾಳಂನಲ್ಲಿ ‘ಕಣ್ಣೂರ್ ಸ್ಕ್ವಾಡ್’, ಹಾಲಿವುಡ್ನ ‘ಸಾ ಎಕ್ಸ್’ ಮತ್ತು ‘ದಿ ಕ್ರಿಯೇಟರ್’ ಚಿತ್ರಗಳು ರಿಲೀಸ್ ಆಗಲಿವೆ.