ಬೆಂಗಳೂರು: ‘ಹೆಡ್-ಬುಷ್’ ಚಿತ್ರದಲ್ಲಿ ವೀರಗಾಸೆ ನೃತ್ಯಕ್ಕೆ ಯಾವುದೇ ರೀತಿಯ ಅಪಮಾನ ಮಾಡಿಲ್ಲ ಎಂದು ಧನಂಜಯ್ ಹೇಳಿದ್ದಾರೆ.
ಧನಂಜಯ್ ಅಭಿನಯದ ‘ಹೆಡ್ ಬುಷ್’ ಚಿತ್ರವು ಕಳೆದ ವಾರವಷ್ಟೇ ಬಿಡುಗಡೆಯಾಗಿ ಎಲ್ಲೆಡೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮಧ್ಯೆ, ಚಿತ್ರತಂಡದವರು ವೀರಗಾಸೆ ನೃತ್ಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚಿತ್ರದಲ್ಲಿ ಕರಗ ನಡೆಯುವ ಸಂದರ್ಭದಲ್ಲಿ ಧನಂಜಯ್ ಮತ್ತು ಯೋಗಿ ನೃತ್ಯ ಮಾಡುತ್ತಿರುತ್ತಾರೆ ಈ ಸಂದರ್ಭದಲ್ಲಿ ಒಂದಿಷ್ಟು ರೌಡಿಗಳು ವೀರಗಾಸೆ ವೇಷ-ಭೂಷಣವನ್ನು ತೊಟ್ಟು ಬಂದು ಧನಂಜಯ ಮೇಲೆ ಅಟ್ಯಾಕ್ ಮಾಡುತ್ತಾರೆ. ಈ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಧನಂಜಯ್ ವೀರಗಾಸೆಯವರಿಗೆ ಹೊಡೆಯುತ್ತಾರೆ. ಹೀಗೆ ಹೊಡೆಯುವ ಮೂಲಕ ಧನಂಜಯ್ ಅವರು ವೀರಗಾಸೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಧನಂಜಯ್, ‘ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಜತೆಗೆ ಯಾವುದೇ ರೀತಿ ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ನಾನು ಚಿಕ್ಕವನಿಂದಲೂ ವೀರಗಾಸೆ ಕಲೆಯನ್ನು ನೋಡುತ್ತಾ ಬಂದಿದ್ದೇನೆ. ಆ ಕಲೆಯ ಮೇಲೆ ನನಗೆ ಅಪಾರವಾದ ಗೌರವ, ಅಭಿಮಾನ ಮತ್ತು ಹೆಮ್ಮೆ ಇದೆ. ಕರಗದ ಸಂದರ್ಭದಲ್ಲಿ ಜಯರಾಜ್ ಮೇಲೆ ಅಟ್ಯಾಕ್ ಮಾಡಲಾಗುತ್ತದೆ. ಇಲ್ಲಿ ಜಯರಾಜ್, ವೀರಗಾಸೆಯವರನ್ನು ಹೊಡೆಯುವುದಿಲ್ಲ. ಬದಲಿಗೆ ತಮ್ಮ ಮೇಲೆ ಅಟ್ಯಾಕ್ ಮಾಡಲು ಮಾಡಲು ಬಂದಿರುವ ರೌಡಿಗಳನ್ನು ಹೊಡೆಯುತ್ತಾನೆ’ ಎನ್ನುತ್ತಾರೆ.
ಫೈಟ್ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಸಾಕಷ್ಟು ಚರ್ಚೆ ಮಾಡಿಯೇ ಮಾಡಲಾಗಿದೆ ಎಂದಿರುವ ಅವರು, ‘ಈ ಫೈಟ್ ದೃಶ್ಯವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ನಿಜವಾದ ವೀರಗಾಸೆಯವರು ಹಿಂದೆ ನಿಂತಿರುತ್ತಾರೆ. ಅಟ್ಯಾಕ್ ಮಾಡಲು ಬಂದಿರುವುದು ಮಾತ್ರ ಫೈಟ್ ಮಾಡುತ್ತಾರೆ. ಇಲ್ಲಿ ನಕಲಿ ವೀರಗಾಸೆಯವರ ಜತೆಗೆ ಫೈಟ್ ಮಾಡುವ ಮೂಲಕ ಅಸಲಿ ವೀರಗಾಸೆಯವರಿಗೆ ಗೌರವ ನೀಡುತ್ತಾನೆ. ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿ ಚಿತ್ರೀಕರಣ ಮಾಡಿದ್ದೇವೆ. ನಮ್ಮ ನಾಡಿನ ಹೆಮ್ಮೆಯ ಕಲೆಗೆ ಚ್ಯುತಿ ತರುವ ಯಾವುದೇ ಉದ್ದೇಶವಿಲ್ಲ’ ಎಂದು ಧನಂಜಯ್ ಹೇಳಿದ್ದಾರೆ.