ಸಿನಿವಾಣಿ

ಡಾಲಿಗೆ ಸುಮನ್​ ಜೋಡಿ : ಕುತೂಹಲ ಮೂಡಿಸಿದ "ತೋತಾಪುರಿ 2' ಚಿತ್ರದಲ್ಲಿ ಧನಂಜಯ ಲುಕ್

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸಾಮಾನ್ಯವಾಗಿ ನಾಯಕ ಮತ್ತು ನಾಯಕಿಯ ನಡುವಿನ ವಯಸ್ಸಿನ ಅಂತರದ ಬಗ್ಗೆ ಆಗಾಗ ಮಾತುಗಳು ಕೇಳಿಬರುತ್ತಿರುತ್ತವೆ. 50, 60 ವರ್ಷ ದಾಟಿದ ಹೀರೋಗಳಿಗೆ 25, 30 ವರ್ಷ ಮೀರದ ನಾಯಕಿಯರನ್ನು ಆಯ್ಕೆ ಮಾಡಿಕೊಳ್ಳಬೇಕಾ? ಅಷ್ಟೊಂದು ವಯಸ್ಸಿನ ಅಂತರವೇಕೆ? ಅಂತೆಲ್ಲ ಕೆಲವೊಮ್ಮೆ ಪ್ರಶ್ನೆಗಳು ಮೂಡುವುದುಂಟು. ಆದರೆ, ಅಪರೂಪಕ್ಕೊಮ್ಮೆ ಕಡಿಮೆ ವಯಸ್ಸಿನ ನಾಯಕನಿಗೆ, ಆತನಿಗಿಂತ ಹಿರಿಯ ವಯಸ್ಸಿನ ನಾಯಕಿಯನ್ನು ಜೋಡಿ ಮಾಡಿರುವುದುಂಟು. ಅದಕ್ಕೆ ಇತ್ತೀಚಿನ ಉದಾಹರಣೆ "ತೋತಾಪುರಿ 2'. ಹೌದು, ಈ ಚಿತ್ರದಲ್ಲಿ 36 ವರ್ಷದ ಡಾಲಿ ಧನಂಜಯಗೆ 49 ವರ್ಷದ ಸುಮನ್​ ರಂಗನಾಥ್​ ಜೋಡಿಯಾಗಿದ್ದಾರೆ. ಇಬ್ಬರ ನಡುವೆ 13 ವರ್ಷಗಳ ಅಂತರವಿದೆ. ಈಗಾಗಲೇ ಈ ಜೋಡಿಯ "ಮೊದಲ ಮಳೆ..' ಎಂಬ ಹಾಡು ರಿಲೀಸ್​ ಆಗಿದ್ದು, ಜಾಲತಾಣದಲ್ಲಿ ವೈರಲ್​ ಆಗಿದೆ. ಸದ್ಯದಲ್ಲೇ "ಲಾಂಗ್​ ಡೆವ್​ ಹೋಗೋಣ' ಎಂಬ ಮತ್ತೊಂದು ಸಾಂಗ್​ ರಿಲೀಸ್​ ಮಾಡುವ ಆಲೋಚನೆ ಚಿತ್ರತಂಡದ್ದು. ಇದೊಂದು ರೊಮ್ಯಾಂಟಿಕ್​ ಕಾಮಿಡಿ ಚಿತ್ರವಾಗಿದ್ದು, ವಿಜಯ್​ ಪ್ರಸಾದ್​ ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ಜಗ್ಗೇಶ್​ ಮತ್ತು ಡಾಲಿ ಧನಂಜಯ ಒಟ್ಟಿಗೆ ನಟಿಸಿರುವುದು ಸಿನಿಮಾದ ವಿಶೇಷತೆಗಳಲ್ಲೊಂದು. ಡಾಲಿ ಧನಂಜಯ, ಜಗ್ಗೇಶ್​, ಸುಮನ್​ ರಂಗನಾಥ್​ ಜತೆ ಮೊದಲ ಭಾಗದಲ್ಲಿ ನಟಿಸಿದ್ದ ದತ್ತಣ್ಣ, ವೀಣಾ ಸುಂದರ್​, ಹೇಮಾದತ್​ ಪ್ರಮುಖ ತಾರಾಗಣದಲ್ಲಿದ್ದಾರೆ.

ಕುತೂಹಲ ಮೂಡಿಸಿದೆ ಧನು ಲುಕ್​
"ತೋತಾಪುರಿ' ಚಿತ್ರದಲ್ಲಿ ಧನಂಜಯ ಪಾತ್ರ ಪರಿಚಯ ಮಾಡಿತ್ತಾದರೂ, ಹೆಚ್ಚು ಮಾಹಿತಿ ಇರಲಿಲ್ಲ. ಆದರೆ, "ತೋತಾಪುರಿ 2' ಚಿತ್ರ ಅವರ ಮತ್ತು ಜಗ್ಗೇಶ್​ ನಡುವಿನ ಜುಗಲ್​ಬಂದಿಯಲ್ಲಿ ಸಾಗಲಿದೆ ಎನ್ನಲಾಗಿದೆ. ಧನಂಜಯ ನಾರಾಯಣ ಪಿಳ್ಳೈ ಎಂಬ ಶ್ರೀಮಂತ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲ್​ೈಸ್ಟೆಲ್​, ಲವ್​ಸ್ಟೋರಿ ಸೇರಿ ಇನ್ನಿತರ ವಿಷಯಗಳನ್ನು ಈ ಸೀಕ್ವಲ್​ನಲ್ಲಿ ನೋಡಬಹುದಾಗಿದೆ. ಜತೆಗೆ ಡಾಲಿ ಧನಂಜಯ ಈ ಚಿತ್ರದಲ್ಲಿ ವಿಭಿನ್ನ ಶೇಡ್​ನಲ್ಲಿ ಮೂರ್ನಾಲ್ಕು ಗೆಟಪ್​ಗಳಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ. ಮೈಸೂರು, ಕೊಡಗು, ಕೇರಳದ ರಮಣೀಯ ಸ್ಥಳಗಳಲ್ಲಿ ಧನಂಜಯ, ಸುಮನ್​ ಭಾಗದ ಚಿತ್ರೀಕರಣ ಮಾಡಲಾಗಿದೆ.