

ಮುಂಬೈ: ರಾಷ್ಟ್ರಪ್ರಶಸ್ತಿ ವಿಜೇತ ನಟಿ, ಬಾಲಿವುಡ್ ಬೆಡಗಿ ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷಿತ 'ಚಂದ್ರಮುಖಿ 2' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಇದೀಗ ಚಿತ್ರತಂಡ ಅಧಿಕೃತವಾಗಿ ಅನಾವರಣಗೊಳಿಸಿದೆ.
'ಚಂದ್ರಮುಖಿ 2' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿದ್ದು, ಚಿತ್ರದಲ್ಲಿ ಕಂಗನಾ ಅವರ ಪಾತ್ರ ಹೇಗಿರಲಿದೆ ಎಂಬುದರ ಕುರಿತು ಅಭಿಮಾನಿಗಳಲ್ಲಿ ಈ ಹಿಂದಿನಿಂದಲೂ ಭಾರೀ ಕುತೂಹಲ ಮೂಡಿತ್ತು. ಸದ್ಯ ಇದೀಗ ಚಿತ್ರತಂಡ ಕಂಗನಾ ರಣಾವತ್ ಅವರ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ಮುಖೇನ ಸಿನಿಪ್ರಿಯರಿಗೆ ಚಿತ್ರದ ಬಗ್ಗೆ ಮಾಹಿತಿ ನೀಡಿದೆ. ಸಿನಿಮಾದಲ್ಲಿ ರಾಘವ ಲಾರೆನ್ಸ್ ಮತ್ತು ಕಂಗನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಹಾರರ್ ಥ್ರಿಲ್ಲರ್ ಜಾನರ್ನಲ್ಲಿ ಮೂಡಿಬಂದಿರುವ ಈ ಚಿತ್ರ, ಚಂದ್ರಮುಖಿ ಚಿತ್ರದ ಮುಂದಿನ ಭಾಗವಾಗಿದೆ. ಪೋಸ್ಟರ್‌ನಲ್ಲಿ ಕಂಗನಾ ಆಕರ್ಷಕವಾಗಿ ಕಾಣಿಸಿಕೊಂಡಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಪೋಸ್ಟರ್ ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಿ.ವಾಸು ನಿರ್ದೇಶನದ ಚಂದ್ರಮುಖಿ-2 ಚಿತ್ರವನ್ನು ಗಣೇಶ ಹಬ್ಬಕ್ಕೆ ಬಿಡುಗಡೆಗೊಳಿಸಲು ಚಿತ್ರ ತಯಾರಕರು ಯೋಜಿಸಿದ್ದಾರೆ ಎನ್ನಲಾಗಿದೆ.
ಬಿಗ್ ಬಜೆಟ್ ಚಿತ್ರವನ್ನು ತಮಿಳಿನ ಪ್ರಮುಖ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ವಡಿವೇಲು, ರಾವ್ ರಮೇಶ್, ಸೃಷ್ಟಿ ಡಾಂಗೆ, ಲಕ್ಷ್ಮಿ ಮೆನನ್, ರಾಧಿಕಾ ಶರತ್‌ಕುಮಾರ್ ಮತ್ತು ಮಹಿಮಾ ನಂಬಿಯಾರ್ ಸೇರಿದಂತೆ ಇತರ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).