ಸಿನಿವಾಣಿ

ಡಾಲಿ ಧನಂಜಯ್ ಅವರ ನೆಚ್ಚಿನ ನಿರ್ದೇಶಕ ಯಾರು ಗೊತ್ತಾ? ಜಾಲಿ ರೆಡ್ಡಿಯ ಪೋಸ್ಟ್ ಸಖತ್ ವೈರಲ್!

ತೆಲುಗು ಚಲನಚಿತ್ರ ನಿರ್ದೇಶಕ ಸುಕುಮಾರ್ ಇಂದು ತಮ್ಮ 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ಸುಕುಮಾರ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. 'ಪುಷ್ಪ' ಚಿತ್ರದ ಭವ್ಯ ಯಶಸ್ಸನ್ನು ಎಂಜಾಯ್ ಮಾಡುತ್ತಿರುವ ಸುಕುಮಾರ್ ಅವರಿಗೆ ಈ ಹುಟ್ಟುಹುಬ್ಬ ನಿಜಕ್ಕೂ ಸ್ಪೇಷಲ್ ಎಂದೇ ಹೇಳಬೇಕು. ಸುಕುಮಾರ್ ಅವರಿಗೆ 'ಆರ್ಯ' ಚಿತ್ರದಿಂದ ಅಭಿಮಾನಿಗಳ ಸಂಖ್ಯೆ ಸಿಕ್ಕಾಪಟ್ಟೆ ಇದೆ ಎಂಬುದು ಎಲ್ಲರಿಗೆ ತಿಳಿದಿದೆ. ನಮ್ಮ ಕರುನಾಡಲ್ಲೂ ಈ ನಿರ್ದೇಶಕನಿಗೆ ಅಭಿಮಾನಿಗಳ ಸಂಖ್ಯೆಯಲ್ಲಿ ಕೊರತೆಯಿಲ್ಲ. ಹಾಗೆ, ನಮ್ಮ ಕನ್ನಡದ ಖ್ಯಾತ ನಟರೊಬ್ಬರಿಗೆ ಇವರು ಫೇವರೇಟ್ ಅಂತೆ.
ಯಾರು ಅಂತೀರಾ?. ಅವರು ಯಾರೋ ಅಲ್ಲ. 'ಪುಷ್ಪ' ಚಿತ್ರದಲ್ಲಿ ಜಾಲಿ ರೆಡ್ಡಿ ಪಾತ್ರದಲ್ಲಿ ಮಿಂಚಿದ ನಟ ರಾಕ್ಷಸ ಡಾಲಿ ಧನಂಜಯ್. ಹೌದು, ನಿರ್ದೇಶಕ ಸುಕುಮಾರ್ ಅವರ ಸಿನಿಮಾದಲ್ಲಿ ಕೆಲಸ ಮಾಡಬೇಕು ಎಂಬ ಡಾಲಿ ಧನಂಜಯ್ ಅವರ ಬಹುದಿನಗಳ ಕನಸನ್ನು 'ಪುಷ್ಪ' ಮೂಲಕ ಈಡೇರಿಸಿಕೊಂಡ ನಟ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಅಭಿಮಾನಿಯಾಗೆ ನಿರ್ದೇಶಕ ಸುಕುಮಾರ್ ಅವರಿಗೆ ಇಂದು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. 
'ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರು ಮತ್ತು ನಾನು ಭೇಟಿಯಾದ ಅತ್ಯುತ್ತಮ ಮಾನವ ಸುಕುಮಾರ್ ಸರ್ ಅವರಿಗೆ ಜನ್ಮದಿನದ ಶುಭಾಶಯಗಳು' ಎಂದು ಧನಂಜಯ ತಮ್ಮ ಟ್ವೀಟ್‌ನಲ್ಲಿ ಬರೆದು ಸುಕುಮಾರ್ ಅವರ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಡಾಲಿ ಅವರ ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್​ 4,000ಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಳ್ಳುವುದರ ಜತೆಗೆ ಹೆಚ್ಚು ರೀ-ಟ್ವೀಟ್​ಗಳನ್ನು ಪಡೆಯುತ್ತಿದೆ.