ಸಿನಿವಾಣಿ

ಹಾಸನದಲ್ಲಿ 'ಬಡವ ರಾಸ್ಕಲ್' ಮತ್ತು 'ರೈಡರ್' ಜೋರು! ಡಾಲಿ, ನಿಖಿಲ್ ನೋಡಲು ಅಭಿಮಾನಿಗಳ ಸಾಗರ...

ಹಾಸನ: ರಾಜ್ಯದಲ್ಲಿ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿಯ ನಡುವೆ ಕೆಲವು ಕನ್ನಡ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅದರಲ್ಲಿ ಕೆಳದ ವಾರ ಬಿಡುಗಡೆಯಾದ 'ಬಡವ ರಾಸ್ಕಲ್' ಮತ್ತು 'ರೈಡರ್', ಚಿತ್ರಗಳು ಕೂಡ ಒಂದು. 'ಬಡವ ರಾಸ್ಕಲ್'ನ ತುಂಟಾಟ ಮತ್ತು 'ರೈಡರ್'ನ ಸ್ಪೀಡು ಕಂಡು ಡಾಲಿ ಮತ್ತು ನಿಖಿಲ್ ಅಭಿಮಾನಿಗಳು ಸಂತೋಷದಿಂದ ತೆಲಾಡುತ್ತಿದ್ದಾರೆ. ಇಂತಹ ನಟರು ಡಿ.29 ರಂದು ಹಾಸಕ್ಕೆ ಭೇಟಿ ನೀಡಿದ್ದರು. ಎರಡು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ ಕಾರಣ ಸಿನಿಮಾಗಳ ನಾಯಕ ನಟರು ಚಿತ್ರ ಬಿಡುಗಡೆಯಾದ ನಂತರವೂ ಹಾಸದಲ್ಲಿ ತಮ್ಮ ಚಿತ್ರಗಳ ಪ್ರಚಾರ ಮಾಡಲು ಮುಂದಾಗಿದ್ದಾರೆ. ನಟ ಡಾಲಿ ಧನಂಜಯ್ ಮತ್ತು ನಟ ನಿಖಿಲ್ ಕುಮಾರಸ್ವಾಮಿ ಅವರನ್ನು ನೋಡಲು ಹಾಸನದಲ್ಲಿ ಜನಸಾಗರವೇ ಸೇರಿತ್ತು. 
ಹಾಸನದ ಎಸ್.ಬಿ.ಜಿ ಚಿತ್ರಮಂದಿರದಲ್ಲಿ 'ರೈಡರ್' ಚಿತ್ರ ಪ್ರದರ್ಶನ ಕಾಣುತ್ತಿದ್ದ ಕಾರಣ ಅಲ್ಲಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದರು. ನಂತರ ಮೂರು ಬೇರೆ ಥಿಯೇಟರ್​ಗಳಿಗೂ ನಿಖಿಲ್ ಭೇಟಿ ಕೊಟ್ಟಿದ್ದು, ಅವರನ್ನು ನೋಡಲು ಹೆಚ್ಚು ಜನ ಸೇರಿದ ಕಾರಣ ನೂಕಾಟ-ತಳ್ಳಾಟ ಸಹಜವಾಗಿತ್ತು. ಮತ್ತೊಂದೆಡೆ, ಹಾಸನದ ಸಹ್ಯಾದ್ರಿ ಚಿತ್ರಮಂದಿರದಲ್ಲಿ 'ಬಡವ ರಾಸ್ಕಲ್' ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಅಲ್ಲಿಗೆ ನಟ ರಾಕ್ಷಸ ಡಾಲಿ ಧನಂಜಯ್ ಅವರು ಭೇಟಿ ಕೊಟ್ಟರು. ಡಾಲಿ ಅವರ ಹುಟ್ಟೂರು ಹಾಸವಾಗಿದ್ದು, ಚಿತ್ರಮಂದಿರಕ್ಕೆ ಆಗಮಿಸಿದ ನಟನನ್ನು ಅಭಿಮಾನಿಗಳು ಇನ್ನೂ ಅದ್ದೂರಿಯಾಗಿ ಸ್ವಾಗತಿಸಿದರು. ಅಭಿಮಾನಿಗಳ ಒತ್ತಾಸೆಯ ಮೆರೆಗೆ ಕಾರಿನ ತೆರೆದ ಮೇಲ್ಭಾಗದಲ್ಲಿ ನಿಂತು ಕೊಂಡು ಮೆರವಣಿಗೆಯಂತೆ ಬೇರೆ ಬೇರೆ ಚಿತ್ರಮಂದಿರಗಳಿಗೂ ಡಾಲಿ ತೆರಳಿದರು.