ಸಿನಿವಾಣಿ

‘ಕೆಜಿಎಫ್​ ಚಾಪ್ಟರ್​ 2’ ಯೂನಿವರ್ಸಲ್ ಟೀಸರ್!; ಶುರುವಾಯ್ತು ದಿನಗಣನೆ

ಬೆಂಗಳೂರು: ಕೆಜಿಎಫ್​ ಚಾಪ್ಟರ್ 2 ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈಗಾಗಲೇ ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಎರಡನೇ ಭಾಗದ ಮೇಲೆ ಇಡೀ ದೇಶದ ಚಿತ್ರಪ್ರೇಮಿಗಳ ಕಣ್ಣಿದೆ. ಇನ್ನೇನು ಜ. 8ರ ಯಶ್ ಜನ್ಮದಿನಕ್ಕೆ ಟೀಸರ್​ ಬಿಡುಗಡೆ ಆಗಲಿದೆ. ಈ ನಡುವೆ ಹೊಂಬಾಳೆ ಸಂಸ್ಥೆ ಒಂದಷ್ಟು ವಿಶೇಷತೆಗಳನ್ನು ಅಳವಡಿಸಿಕೊಂಡು ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.

ಜ. 8ಕ್ಕೆ ಬಿಡುಗಡೆ ಆಗಲಿರುವ ಟೀಸರ್​ ಅನ್ನು ಬೇರಾವ ಸೋಷಿಯಲ್ ಮೀಡಿಯಾದಲ್ಲಿ ಹಾಕದಂತೆ ಚಿತ್ರತಂಡ ಮನವಿ ಮಾಡಿದೆ. ಹೊಂಬಾಳೆ ಯೂಟ್ಯೂಬ್ ಚಾನಲ್​ನಲ್ಲಷ್ಟೇ ಈ ವಿಡಿಯೋ ಪ್ರಸಾರವಾಗಲಿರುವುದರಿಂದ ಅತಿ ಹೆಚ್ಚು ವೀಕ್ಷಣೆ ಪಡೆದ ಟೀಸರ್ ಪಟ್ಟಿಗೆ ಸೇರುವಂತೆ ಮಾಡಿ ಎಂದು ಹೊಂಬಾಳೆ ಸಂಸ್ಥೆ ತಿಳಿಸಿದೆ.

ಯೂಟ್ಯೂಬ್​ನಿಂದ ಟೀಸರ್ ಡೌನ್​ಲೋಡ್ ಮಾಡಿಕೊಂಡು, ಸೋಷಿಯಲ್ ಮೀಡಿಯಾ, ವಾಟ್ಸಾಪ್ ಸ್ಟೇಟಸ್​ಗಳಲ್ಲಿಯೂ ಹಾಕುವ ಬದಲು, ವಾಟ್ಸಾಪ್​, ಫೇಸ್​ಬುಕ್​, ಇನ್​ಸ್ಟಾಗ್ರಾಂ, ಟ್ವಿಟರ್​ನಲ್ಲಿ ಲಿಂಕ್​ ಶೇರ್​ ಮಾಡುವಂತೆ ಸಂಸ್ಥೆ ತಿಳಿಸಿದೆ. ಸದ್ಯ ಟೀಸರ್ ಬಿಡುಗಡೆಗೆ ಕೌಂಟ್​ಡೌನ್​ ಶುರುವಾಗಿದ್ದು, ಅಭಿಮಾನಿ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ದೊಡ್ಡಬಳ್ಳಾಪುರದ ಸೌಂದರ್ಯ ಮಹಲ್ ಚಿತ್ರಮಂದಿರದಲ್ಲಿ ಯಶ್ ಅಭಿಮಾನಿಗಳೆಲ್ಲ ಸೇರಿ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದ್ದಾರೆ. ಟೀಸರ್ ವೀಕ್ಷಣೆಗೆ ಉಚಿತವಾಗಿ ಪ್ರವೇಶವನ್ನೂ ಆಯೋಜಿಸಿದ್ದಾರೆ.