ಬೆಂಗಳೂರು: ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರವು ಇದೇ ಅ. 21ರಂದು ಬಿಡುಗಡೆಯಾಗಿ ಎಲ್ಲೆಡೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಮಧ್ಯೆ, ಚಿತ್ರದಲ್ಲಿ ಜುಜುಬಿ ಕರಗ ಎಂಬ ಪದಬಳಕೆ ಸೇರಿದಂತೆ ಸಮುದಾಯದ ಬಗ್ಗೆ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಿರುವ ಚಿತ್ರತಂಡದವರ ಕುರಿತು ತಿಗಳ ಸಮುದಾಯದವರು ಬೇಸರ ವ್ಯಕ್ತಪಡಿಸಿರುವುದರ ಜತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡುವುದಕ್ಕೆ ತೀರ್ಮಾನಿಸಿದ್ದಾರೆ.
ಈ ಕುರಿತು ಮಾತನಾಡಿರುವ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ಕರಗ ಸಮಿತಿ ಅಧ್ಯಕ್ಷ ಸತೀಶ್, ‘ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯದಿಂದ ಬಹಳ ಶ್ರದ್ದೆ ಹಾಗೂ ಭಕ್ತಿ ಯಿಂದ ಕರಗವನ್ನ ಆಚರಣೆ ಮಾಡಲಾಗುತ್ತದೆ. ಬೆಂಗಳೂರಿನ ಕರಗ ವಿಶ್ವವಿಖ್ಯಾತಿಯನ್ನು ಪಡೆದಿದೆ. ಇಂತಹ ಕರಗದ ಬಗ್ಗೆ ಚಿತ್ರದಲ್ಲಿ ಜುಜುಬಿ ಕರಗ ಅಂತ ಹಗುರವಾಗಿ ಪದ ಬಳಕೆ ಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
18 ವರ್ಷ ಯಶಸ್ವಿಯಾಗಿ ಕರಗ ಹೊತ್ತು ತಿಗಳರ ಸಮುದಾಯದಲ್ಲಿ ದೇವರ ಸ್ವರೂಪವಾಗಿದ್ದ ಶಿವಶಂಕರ್ ಅವರನ್ನು ಏಕವಚನದಲ್ಲಿ ಪದ ಬಳಕೆ ಮಾಡಿರುವುದನ್ನು ಖಂಡಿಸಿರುವ ಅವರು, ‘ಕರಗಕ್ಕೆ ತನ್ನದೇ ಆದ ಘನತೆ, ಗಾಂಭೀರ್ಯಕತೆ ಇದೆ. ಆದರೆ, ಚಿತ್ರದಲ್ಲಿ ಕರಗ ಹೊರುವವರಿಂದ ಕೆಟ್ಟದಾಗಿ ಡ್ಯಾನ್ಸ್ ಮಾಡಿಸಲಾಗಿದೆ. ಅವರ ಸುತ್ತ ಜನ ನಿಂತು ಚಪ್ಪಾಳೆ ತಟ್ಟುವ ದೃಶ್ಯಗಳನ್ನು ತೋರಿಸಲಾಗಿದೆ. ಇದು ನಮ್ಮ ಸಮುದಾಯಕ್ಕೆ ಬಹಳ ನೋವು ತಂದಿದ್ದು, ಸಿನಿಮಾದಲ್ಲಿ ಕರಗಕ್ಕೆ ಅವಮಾನ ಮಾಡಿರುವ ದೃಶ್ಯವನ್ನು ತೆಗೆಯುವುದರ ಜತೆಗೆ, ಕೂಡಲೇ ಚಿತ್ರತಂಡದವರು ಕ್ಷಮೆ ಕೇಳಬೇಕು’ ಎಂದು ಸತೀಶ್ ಆಗ್ರಹಿಸಿದ್ದಾರೆ.
‘ಹೆಡ್ ಬುಷ್’ ಚಿತ್ರದಲ್ಲಿ ಬೆಂಗಳೂರಿನ ಡಾನ್ ಜಯರಾಜ್ ಆಗಿ ಧನಂಜಯ್ ಅಭಿನಯಿಸಿದ್ದು, ಚಿತ್ರವು 70ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆದ ಕೆಲವು ನೈಜಘಟನೆಗಳನ್ನು ಆಧರಿಸಲಾಗಿದೆ. ಈ ಚಿತ್ರವು ಅಗ್ನಿ ಶ್ರೀಧರ್ ಅವರ ದಾದಾಗಿರಿಯ ದಿನಗಳು ಕಾದಂಬರಿಯನ್ನು ಆಧರಿಸಿದೆ.