ಸಿನಿವಾಣಿ

ಮಹಿಳಾ ಸ್ಪರ್ಧಿಗಳಿಂದ ಲೈಂಗಿಕ ಭಂಗಿಗಳ ಅನುಕರಣೆ: ನಟ ಅಜಾಜ್​ ಖಾನ್ ವಿರುದ್ಧ ದೂರು ದಾಖಲು! House Arrest

House Arrest : ರಿಯಾಲಿಟಿ ಶೋವೊಂದರಲ್ಲಿ ಅಶ್ಲೀಲ ವಿಷಯವನ್ನು ಪ್ರದರ್ಶಿಸಿದ ಆರೋಪದ ಮೇಲೆ ನಿರ್ಮಾಪಕ, ನಿರೂಪಕ ಹಾಗೂ ನಟ ಅಜಾಜ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಒಟಿಟಿ ಪ್ಲಾಟ್‌ಫಾರ್ಮ್ ಉಲ್ಲು ಆ್ಯಪ್‌ನಲ್ಲಿ ಪ್ರಸಾರವಾಗುತ್ತಿರುವ 'ಹೌಸ್ ಅರೆಸ್ಟ್' ಕಾರ್ಯಕ್ರಮವು ವಿವಾದದ ಸುಳಿಯಲ್ಲಿ ಸಿಲುಕಿದೆ. ಕಾರ್ಯಕ್ರಮದ ಸಮಯದಲ್ಲಿ ನಿರೂಪಕ ಅಜಾಜ್ ಖಾನ್, ಕಾಮ ಸೂತ್ರದ ವಿವಿಧ ಲೈಂಗಿಕ ಭಂಗಿಗಳನ್ನು ಅನುಕರಿಸಲು ಸ್ಪರ್ಧಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಯಿತು. ಹೀಗಾಗಿ, ಬಜರಂಗದಳದ ಕಾರ್ಯಕರ್ತರೊಬ್ಬರು ಅಜಾಜ್ ಖಾನ್ ಮತ್ತು ಕಾರ್ಯಕ್ರಮದ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮುಂಬೈ ಪೊಲೀಸರು, ನಟ ಅಜಾಜ್ ಖಾನ್ ಮತ್ತು ರಿಯಾಲಿಟಿ ಶೋ ನಿರ್ಮಾಪಕ ರಾಜ್ ಕುಮಾರ್ ಪಾಂಡೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯರ ಜತೆ ಅಸಭ್ಯವಾಗಿ ವರ್ತನೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ ಆರೋಪವನ್ನು ಹೊರಿಸಲಾಗಿದೆ. ಈ ವಿವಾದದ ನಂತರ, ರಾಷ್ಟ್ರೀಯ ಮಹಿಳಾ ಆಯೋಗ, ಅಜಾಜ್ ಖಾನ್ ಮತ್ತು ಕಾರ್ಯಕ್ರಮವನ್ನು ಪ್ರಸಾರ ಮಾಡಿದ 'ಉಲ್ಲು' ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ ಸಿಇಒ ವಿದ್ಯಾ ಅಗರ್ವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಮೇ 9 ರೊಳಗೆ ಆಯೋಗದ ಮುಂದೆ ಹಾಜರಾಗುವಂತೆ ಕೇಳಲಾಗಿದೆ.

ನಿರೂಪಕ ಅಜಾಜ್ ಖಾನ್, ಲೈಂಗಿಕ ಭಂಗಿಗಳನ್ನು ಪ್ರದರ್ಶಿಸಲು ಮಹಿಳಾ ಸ್ಪರ್ಧಿಗಳಿಗೆ ಪ್ರೋತ್ಸಾಹಿಸುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋ ವಿವಾದದ ನಂತರ, ರಿಯಾಲಿಟಿ ಶೋನ ಎಪಿಸೋಡ್​ಗಳನ್ನು ವಯಸ್ಕರ ಸ್ಟ್ರೀಮಿಂಗ್ ವೇದಿಕೆ ಉಲ್ಲುನಿಂದ ತೆಗೆದುಹಾಕಲಾಗಿದೆ. ಈ ಶೋ ಕಳೆದ ತಿಂಗಳು 11 ರಿಂದ ಪ್ರಸಾರವಾಗಲು ಆರಂಭಿಸಲಾಗಿತ್ತು.

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಶೋ ನಿರೂಪಕ ಅಜಾನ್​ ಖಾನ್​, ಕಾಮಸೂತ್ರದ ಬಗ್ಗೆ ಮಹಿಳಾ ಸ್ಪರ್ಧಿಯೊಬ್ಬರನ್ನು ಕೇಳುತ್ತಾರೆ. ಈ ವೇಳೆ ಆ ಸ್ಪರ್ಧಿ ನನಗೆ ಸೆಕ್ಸ್​ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ನನಗೆ ಒಂದೆರೆಡು ಭಂಗಿಗಳು ಮಾತ್ರ ಗೊತ್ತು. ಆದರೆ, ಸಂಪೂರ್ಣ ಗೊತ್ತಿಲ್ಲ ಎನ್ನುತ್ತಾರೆ. ಈ ಮಧ್ಯ ಪ್ರವೇಶಿಸುವ ನಿರೂಪಕ, ಯಾವ್ಯಾವ ಭಂಗಿ ಗೊತ್ತು ಎಂದು ಪ್ರಶ್ನೆ ಮಾಡುತ್ತಾರೆ. ಬಳಿಕ ಉತ್ತರಿಸುವ ಆ ಸ್ಪರ್ಧಿ ಒಂದೆರೆಡು ಭಂಗಿಉ ಹೆಸರುಗಳನ್ನು ಹೇಳುತ್ತಾರೆ. ಬಳಿಕ ನಿರೂಪಕ, ನೀನು ಒಮ್ಮೆಯೂ ಪ್ರಯೋಗವನ್ನೇ ಮಾಡಿಲ್ವಾ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆಕೆ ಇಲ್ಲ ಎನ್ನುತ್ತಾಳೆ. ಈ ವೇಳೆ ನಿರೂಪಕ ಅಜಾನ್​, ಇಬ್ಬರು ಮಹಿಳಾ ಮತ್ತು ಇಬ್ಬರು ಪುರುಷ ಸ್ಪರ್ಧಿಯನ್ನು ಕೂಗಿ, ಭಂಗಿಯನ್ನು ಪ್ರದರ್ಶಿಸುವಂತೆ ಲೈವ್​ ಆಗಿ ಹೇಳುತ್ತಾರೆ. ಬಳಿಕ ಆ ಸ್ಪರ್ಧಿಗಳು ಸೆಕ್ಸ್​ ಭಂಗಿಗಳನ್ನು ಪ್ರದರ್ಶಿಸುತ್ತಾರೆ. ಕೊನೆಯಲ್ಲಿ ನಿರೂಪಕ ವಾವ್​ ಎಂದು ಹೇಳುತ್ತಾನೆ.

ಒಳಉಡುಪು ಬಿಚ್ಚುವುದು

ಇದೇ ಶೋಗೆ ಸಂಬಂಧಿಸಿದ ಮತ್ತೊಂದು ವಿಡಿಯೋದಲ್ಲಿ ಮಹಿಳಾ ಮತ್ತು ಪುರುಷ ಸ್ಪರ್ಧಿಗಳಿಂದ ಕ್ಯಾಮೆರಾ ಮುಂದೆಯೇ ಒಳಉಡುಪುಗಳನ್ನು ಬಿಚ್ಚಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ನೆಟ್ಟಿಗರ ಆಕ್ರೋಶ

ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದು ನಮ್ಮ ಭಾರತದಲ್ಲಿ ನಡೆಯುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. ನಮ್ಮದು ಸಂಸ್ಕೃತಿಯ ತವರು. ಇಂಥಾ ಮಣ್ಣಿನಲ್ಲಿ ಈ ರೀತಿ ಅಶ್ಲೀಲತೆಯನ್ನು ಬಹಿರಂಗವಾಗಿ ಪ್ರದರ್ಶನ ಮಾಡುವುದು ಸರಿಯೇ ಎಂದು ಕಿಡಿಕಾರಿದ್ದಾರೆ. ಇನ್ನು ಕೆಲ ನೆಟ್ಟಿಗರು ಯಾವಾಗ ಭಾರತ ಅಮೆರಿಕ ಆಯ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ಇಂಥಾ ಅಶ್ಲೀಲ ಕಂಟೆಂಟ್​ಗಳನ್ನು ಪ್ರಸಾರ ಮಾಡುತ್ತಿರುವ ಒಟಿಟಿ ಹಾಗೂ ಆನ್​​ಲೈನ್​ ವೇದಿಕೆಗಳನ್ನು ಬ್ಯಾನ್​ ಮಾಡುವಂತೆ ಆಗ್ರಹಿಸಿದ್ದಾರೆ.

ಧ್ವನಿ ಎತ್ತಿದ ಸಂಸದೆ

ವಿಡಿಯೋ ವೈರಲ್​ ಆಗುತ್ತಿದ್ದಂತೆ ಅಶ್ಲೀಲ ಕಂಟೆಂಟ್​ ವಿರುದ್ಧ ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಧ್ವನಿ ಎತ್ತಿದ್ದಾರೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ ಕಂಟೆಂಟ್​ಗಳು ಹೆಚ್ಚಾಗಿವೆ. ಅಂತಹ ಹಲವಾರು ಅಪ್ಲಿಕೇಶನ್‌ಗಳು ಬಳಕೆಯಲ್ಲಿದ್ದು, ಅವುಗಳನ್ನು ನಿಷೇಧಿಸುವಂತೆ ಸಂಸದೀಯ ಸ್ಥಾಯಿ ಸಮಿತಿಗೆ ವಿನಂತಿಸಿದ್ದೇನೆ. ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ನಿಷೇಧದಿಂದ ಉಲ್ಲು ಅಪ್ಲಿಕೇಶನ್ ಮತ್ತು ಆಲ್ಟ್ ಬಾಲಾಜಿಯಂತಹ ಅಪ್ಲಿಕೇಶನ್‌ಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಈ ವಿಚಾರವನ್ನು ನಾನು ಸ್ಥಾಯಿ ಸಮಿತಿಯಲ್ಲಿ ಪ್ರಸ್ತಾಪಿಸಿದ್ದು, ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ಚತುರ್ವೇದಿ ಅವರು ತಮ್ಮ ಎಕ್ಸ್​ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ಏನು?

ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ಬಹುತೇಕ ಕಂಟೆಂಟ್​ಗಳು "ವಿಕೃತ" ಮಟ್ಟಕ್ಕೆ ಹೋಗಬಹುದು. ಇಂತಹ ವೇದಿಕೆಗಳು ಕೂಡ "ಸಾಮಾಜಿಕ ಜವಾಬ್ದಾರಿ"ಯನ್ನು ಹೊಂದಿವೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದ ಕೆಲವೇ ದಿನಗಳಲ್ಲಿ ಈ ವಿಡಿಯೋ ಕ್ಲಿಪ್​ ಹೊರಬಿದ್ದಿದೆ. ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಆಲ್ಟ್‌ಬಾಲಾಜಿ, ಉಲ್ಲು ಡಿಜಿಟಲ್, ಮುಬಿ ಮತ್ತು ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳಾದ ಎಕ್ಸ್ ಕಾರ್ಪ್, ಗೂಗಲ್, ಮೆಟಾ ಇಂಕ್ ಮತ್ತು ಆ್ಯಪಲ್‌ಗಳಿಗೆ ನೋಟಿಸ್ ಜಾರಿ ಮಾಡಿದೆ. (ಏಜೆನ್ಸೀಸ್​)