

ನವದೆಹಲಿ: ಪಹಲ್ಗಾಮ್ ನರಮೇಧದ ಬಳಿಕ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಘೋಷಿಸಿರುವ ಭಾರತ ಈಗ ವಾಣಿಜ್ಯ ಸಮರಕ್ಕೆ ಮುಂದಾಗಿದ್ದು, ಪಾಕ್ನಿಂದ ಆಮದಾಗುವ ವಸ್ತುಗಳ ಮೇಲೆ ನಿಷೇಧ ಹೇರಿದೆ. ಸಿಂಧೂ ನದಿ ಒಪ್ಪಂದ ಅಮಾನತು, ವೀಸಾ ರದ್ದು, ವಾಯುಪ್ರದೇಶ ನಿರ್ಬಂಧ ಸೇರಿದಂತೆ ಹಲವು ಕ್ರಮಗಳನ್ನು ಭಾರತ ಈಗಾಗಲೇ ಘೋಷಿಸಿದೆ. ಈಗ ಪಾಕಿಸ್ತಾನ ಮೂಲದ ಅಥವಾ ಪಾಕಿಸ್ತಾನ ಮಾರ್ಗವಾಗಿ ರಫ್ತು ಮಾಡಲಾಗುವ ಎಲ್ಲಾ ಸರಕುಗಳ ನೇರ ಮತ್ತು ಪರೋಕ್ಷ ಆಮದು ಮತ್ತು ಸಾಗಾಣಿಕೆ ಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಬಂಧ ಹೇರಲಾಗಿದೆ ಎಂದು ವಾಣಿಜ್ಯ ಸಚಿವಾಲಯ ತನ್ನ ಅಧಿ ಸೂಚನೆಯಲ್ಲಿ ತಿಳಿಸಿದೆ.
2019 ರ ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನ ದಿಂದ ಆಮದಾಗುವ ಎಲ್ಲಾ ವಿಧದ ಉತ್ಪನ್ನಗಳ ಮೇಲೆ ಶೇ. 200ರಷ್ಟು ಸುಂಕ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಾಕ್ನಿಂದ ಆಮದಾಗುವ ಉತ್ಪನ್ನಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು, ಇನ್ನು ಮುಂದೆ ಇದು ಶೂನ್ಯವಾಗಲಿದೆ. 2017-18 ರಲ್ಲಿ ಭಾರತ ಮತ್ತು ಪಾಕ್ ನಡುವೆ 20 ಸಾವಿರ ಕೋಟಿ ರೂ. (2.4 ಬಿ. ಡಾಲರ್) ಇತ್ತು. ಆದರೆ ಇದು 2024-25 ರಲ್ಲಿ ಹಲವು ಪಟ್ಟು ಇಳಿಕೆಯಾಗಿ ಭಾರತದ ರಫ್ತು 3780 ಕೋಟಿ ರೂ. (447.65 ಮಿ. ಡಾಲರ್) ಮತ್ತು ಆಮದು 3.5 ಕೋಟಿ ರೂ. (0.42 ಮಿ.ಡಾಲರ್)ಗೆ ಇಳಿಕೆಯಾಗಿದೆ. ಪ್ರಸ್ತುತ ಪಾಕಿಸ್ತಾನದಿಂದ ಅಂಜೂರ, ತುಳಸಿ, ರೋಸ್ವುರಿ ಗಿಡಮೂಲಿಕೆಗಳು, ಕೆಲವು ರಾಸಾಯನಿಕಗಳು ಮತ್ತು ಹಿಮಾಲಯನ್ ಪಿಂಕ್ ಸಾಲ್ಟ್ಅನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿದೆ.
ಉಗ್ರರ ವಿರುದ್ಧ ಕಠಿಣ ಕ್ರಮ: ಭಯೋತ್ಪಾದಕರು ಮಾನವೀಯತೆಗೆ ದೊಡ್ಡ ಬೆದರಿಕೆ. ಭಯೋತ್ಪಾದಕರು ಮತ್ತು ಅವರಿಗೆ ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ತಿಳಿಸಿದ್ದಾರೆ. ಅಂಗೋಲಾ ಅಧ್ಯಕ್ಷ ಜೊವೊ ಲೊರೆಂಕೋ ಅವರೊಂದಿಗೆ ಬಿಡುಗಡೆ ಮಾಡಿರುವ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಭಯೋತ್ಪಾದಕರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನು ಪುನರುಚ್ಛರಿಸಿದ್ದಾರೆ. ಈ ಮೊದಲು ಬಿಹಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೋದಿ ‘ಪಹಲ್ಗಾಮ್ ದಾಳಿ ನಡೆಸಿದ ಪ್ರತಿಯೊಬ್ಬ ಭಯೋತ್ಪಾದರು ಮತ್ತು ಅವರಿಗೆ ಬೆಂಬಲ ನೀಡಿದವರು ಎಲ್ಲೇ ಇದ್ದರೂ ಅವರನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡುತ್ತೇವೆ ಎಂದು ತಿಳಿಸಿದ್ದರು.
ಪಹಲ್ಗಾಮ್ ದಾಳಿಯ ಬಳಿಕ ಭಾರತೀಯ ನೌಕಾಪಡೆ ಅರಬ್ಬಿ ಸಮುದ್ರದಲ್ಲಿ ನಿರಂತರವಾಗಿ ಸಮರಾಭ್ಯಾಸ ನಡೆಸುತ್ತಿದೆ. ಈಗ ನೌಕಾಪಡೆ ಸಾಮಾಜಿಕ ಜಾಲತಾಣದಲ್ಲಿ ಐಎನ್ಎಸ್ ಕೋಲ್ಕತ ಡಿಸ್ಟ್ರಾಯರ್ ನೌಕೆ, ಧ್ರುವ ಹಗುರ ಹೆಲಿಕಾಪ್ಟರ್ ಮತ್ತು ಸ್ಕಾರ್ಪೆನ್ ಕ್ಲಾಸ್ನ ಜಲಾಂತರ್ಗಾಮಿ ನೌಕೆ ಒಟ್ಟಾಗಿ ಇರುವ ಫೋಟೋ ಹಂಚಿಕೊಂಡಿದ್ದು, ನೌಕಾಪಡೆಯ ಮೂರು ಶಕ್ತಿಗಳು ಇವು ಎಂದು ಪೋಸ್ಟ್ ಮಾಡುವ ಮೂಲಕ ನೌಕಾಪಡೆ ಯುದ್ಧಕ್ಕೆ ಸರ್ವಸನ್ನದ್ಧವಾಗಿದೆ ಎಂಬ ಸಂದೇಶವನ್ನು ನೀಡಿದೆ. ನೌಕಾಪಡೆಯ ಕೋಲ್ಕತ ಕ್ಲಾಸ್ಟ್ ಡಿಸ್ಟ್ರಾಯರ್ಗಳು ಮತ್ತು ನೀಲಗಿರಿ, ಕ್ರಿವಕ್ ಕ್ಲಾಸ್ನ ಫ್ರೀಗೇಟ್ಸ್ ಗಳು ನಿರಂತರವಾಗಿ ಬ್ರಹ್ಮೋಸ್ ಆಂಟಿ ಶಿಪ್ ಮತ್ತು ಆಂಟಿ ಸರ್ಫೆಸ್ ಕ್ರೂಸ್ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ.
ಪಾಕಿಸ್ತಾನದ ಹಡಗುಗಳು ಭಾರತದ ಬಂದರುಗಳಿಗೆ ಬರದಂತೆ ಮತ್ತು ಭಾರತದ ಹಡಗುಗಳು ಪಾಕಿಸ್ತಾನಕ್ಕೆ ತೆರಳದಂತೆ ಬಂದರುಗಳು, ಹಡಗು ಮತ್ತು ಜಲಮಾರ್ಗ ಸಚಿವಾಲಯ ನಿಷೇಧ ಹೇರಿದೆ. ಭಾರತೀಯ ಅಸ್ತಿಗಳು, ಸರಕು ಮತ್ತು ಬಂದರು ಮೂಲಸೌಕರ್ಯವನ್ನು ರಕ್ಷಿಸಲು 1958ರ ವ್ಯಾಪಾರಿ ಹಡಗು ಕಾಯ್ದೆಯ ಸೆಕ್ಷನ್ 411 ರ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಪಾಕ್ ಹಡಗುಗಳಿಗೆ ನಿಷೇಧ ಹೇರಲಾಗಿದೆ.
ಪಾಕಿಸ್ತಾನಕ್ಕೆ ಭಾರತ ನೇರವಾಗಿ ಹೆಚ್ಚಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿಲ್ಲ. ಆದರೆ ದುಬೈ, ಸಿಂಗಾಪುರ ಮತ್ತು ಕೊಲಂಬೋ ಮೂಲಕ ಭಾರತದ 84 ಸಾವಿರ ಕೋಟಿ ರೂ. (10 ಬಿ. ಡಾಲರ್) ಮೌಲ್ಯದ ಉತ್ಪನ್ನಗಳು ಪಾಕ್ ತಲುಪುತ್ತಿವೆ. ಹತ್ತಿ, ಆರ್ಗ್ಯಾನಿಕ್ ಕೆಮಿಕಲ್ಗಳು, ಮಸಾಲೆ ಪದಾರ್ಥಗಳು, ಔಷಧಗಳು, ಪ್ಲಾಸ್ಟಿಕ್, ಡೈರಿ ಮತ್ತು ಆಹಾರ ಉತ್ಪನ್ನಗಳು ಪಾಕ್ಗೆ ಪೂರೈಕೆಯಾಗುತ್ತಿವೆ. ಭಾರತ ಇವುಗಳ ಮೇಲೂ ನಿರ್ಬಂಧ ಹೇರಿದರೆ ಪಾಕ್ಗೆ ಹೆಚ್ಚಿನ ಸಂಕಷ್ಟ ಎದುರಾಗಲಿದೆ. ಭಾರತ ಈಗ ಅಂಚೆ ಮತ್ತು ಪಾರ್ಸಲ್ ಸೇವೆಯನ್ನೂ ಸ್ಥಗಿತಗೊಳಿಸಿದೆ. ರಸ್ತೆ ಮತ್ತು ವಾಯುಮಾರ್ಗದ ಮೂಲಕ ಅಂಚೆ ಮತ್ತು ಪಾರ್ಸಲ್ ಸೇನೆಯನ್ನು ರದ್ದುಗೊಳಿಸಲಾಗಿದೆ ಎಂದು ಶನಿವಾರ ಸಂವಹನ ಸಚಿವಾಲಯದ ಅಡಿ ಬರುವ ಅಂಚೆ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
ಪಹಲ್ಗಾಮ್ ದಾಳಿಗೂ ಮುನ್ನ ಶ್ರೀನಗರ ಹೊರವಲಯದ ಹೋಟೆಲ್ಗಳಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿತ್ತು. 2 ವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರೂ ಉಗ್ರರ ಸುಳಿವು ಸಿಕ್ಕಿರಲಿಲ್ಲ. ಆದರೆ ಏಪ್ರಿಲ್ 22ರಂದು ಉಗ್ರರು ಪಹಲ್ಗಾಮ್ ಬೈಸರನ್ ನಲ್ಲಿ ದಾಳಿ ನಡೆಸಿದ್ದರು. ಇನ್ನು ಉಗ್ರರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಏಪ್ರಿಲ್ 19ರಂದು ಆಯೋಜಿಸಲಾಗಿದ್ದ ಕಥುವಾ ಮತ್ತು ಶ್ರೀನಗರ ನಡುವಿನ ರೈಲು ಸೇವೆಯನ್ನು ಉದ್ಘಾಟಿಸುವ ಕಾರ್ಯಕ್ರಮವನ್ನೂ ಮುಂದೂಡಲಾಗಿತ್ತು.
ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ವಣವಾಗಿರುವಾಗಲೇ 450 ಕಿ.ಮೀ. ವ್ಯಾಪ್ತಿಯ ಸರ್ಫೆಸ್ ಟು ಸರ್ಫೆಸ್ ಬ್ಯಾಲಿಸ್ಟಿಕ್ (ಖಂಡಾಂತರ) ಕ್ಷಿಪಣಿಯನ್ನು ಪರೀಕ್ಷೆ ನಡೆಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಅಬ್ದಾಲಿ ಕ್ಷಿಪಣಿ ವ್ಯವಸ್ಥೆಯ ಭಾಗವಾಗಿರುವ ಈ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. ಈ ಮೂಲಕ ಸೇನೆಯ ಕಾರ್ಯಾಚರಣೆ ಸಿದ್ಧತೆ ಕುರಿತು ಪರೀಕ್ಷೆ ನಡೆಸಲಾಗಿದೆ ಎಂದು ಪಾಕ್ ಸರ್ಕಾರ ತಿಳಿಸಿದೆ. ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಬಳಿ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತವಾಗಿ ದಾಳಿ ನಡೆಸುತ್ತಾ ಬರುತ್ತಿದ್ದು, ಭಾರತಕ್ಕೆ ನಿರಂತರವಾಗಿ ಪ್ರಚೋದನೆ ನೀಡುತ್ತಿದೆ. ಈಗ ಕ್ಷಿಪಣಿ ಪರೀಕ್ಷೆ ನಡೆಸಿರುವುದನ್ನೂ ಸಹ ಭಾರತ ಗಂಭೀರವಾಗಿ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಪ್ರತೀಕಾರದ ದಾಳಿ ನಡೆಸುವ ಭೀತಿಯಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಇದ್ದ ಉಗ್ರರ ಲಾಂಚ್ ಪ್ಯಾಡ್ಗಳನ್ನು ಪಾಕ್ ಸೇನೆ ಖಾಲಿ ಮಾಡಿಸಿದ್ದು, ಅಲ್ಲಿದ್ದ ಉಗ್ರರನ್ನು ಬೇರೆಡೆಗೆ ಸ್ಥಳಾಂತರಿಸಿದೆ ಎಂದು ತಿಳಿದು ಬಂದಿದೆ. ಕಾಶ್ಮೀರದ ಕಥುವಾಗೆ ಹೊಂದಿಕೊಂಡಂತೆ ಇರುವ ಶಕರ್ಗಢ, ನೌಶೇರಾಗೆ ಹೊಂದಿಕೊಂಡಿರುವ ಸಮಹ್ನಿ ಮತ್ತು ಹೀರಾನಗರಕ್ಕೆ ಹೊಂದಿಕೊಂಡಿರುವ ಸುಖಮಲ್ನಲ್ಲಿ ಪ್ರಮುಖ 3 ಲಾಂಚ್ ಪ್ಯಾಡ್ಗಳಿವೆ. ಇಲ್ಲಿ ಏಪ್ರಿಲ್ 22ಕ್ಕೆ ಮೊದಲು ಲಷ್ಕರ್-ಎ-ತೊಯ್ಬಾ, ಜೈಷ್-ಎ -ಮೊಹಮ್ಮದ್ ಮತ್ತು ಇತರೆ ಉಗ್ರ ಸಂಘಟನೆಗಳಿಗೆ ಸೇರಿದ ತಲಾ 10-12 ಉಗ್ರರು ಭಾರತದೊಳಗೆ ನುಸುಳಲು ತಮ್ಮ ಸರದಿಗಾಗಿ ಕಾಯುತ್ತಿದ್ದರು. 2019 ರಲ್ಲಿ ಪುಲ್ವಾಮಾ ದಾಳಿಯ ಬಳಿಕ ಭಾರತ ಬಾಲಾಕೋಟ್ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಈ ಮಾದರಿಯಲ್ಲಿ ಉಗ್ರರ ಲಾಂಚ್ಪ್ಯಾಡ್ಗಳನ್ನು ಗುರಿಯಾಗಿಸಿ ದಾಳಿ ಇದೆ ಎಂದು ಉಗ್ರರನ್ನು ಪಾಕಿಸ್ತಾನದೊಳಗೆ ಇರುವ ನೆಲೆಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಇದೆ ವೇಳೆ ಲಾಂಚ್ಪ್ಯಾಡ್ಗಳಲ್ಲಿ ಇದ್ದ ಪಾಕ್ ಸೇನೆಯ ಯೋಧರನ್ನೂ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಲಾಂಚ್ ಪ್ಯಾಡ್ಗಳು ಈಗ ಖಾಲಿಯಾಗಿವೆ ಎಂದು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.