ಸಿನಿವಾಣಿ

ನಟಿ, ನಿರ್ಮಾಪಕಿ ಅನುಷ್ಕಾ ಶರ್ಮಾ ವಿರುದ್ಧ ಗೋರ್ಖಾ ಸಮುದಾಯದಿಂದ ದೂರು!

ಪಾತಾಳ್​ ಲೋಕ್​ ವೆಬ್​ಸಿರೀಸ್​ ಸದ್ಯ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಒಂದಷ್ಟು ಮಂದಿ ಸಿರೀಸ್​ ಮೂಡಿ ಬಂದ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಬ್ಯಾನ್​ ಮಾಡುವಂತೆಯೂ ಹೇಳಿಕೊಂಡಿದ್ದಾರೆ. ಇದೆಲ್ಲದರ ನಡುವೆ ಇದೀಗ ಈ ವೆಬ್​ ಸರಣಿಯನ್ನು ನಿರ್ಮಾಣ ಮಾಡಿದ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ವಿರುದ್ಧ ದೂರು ನೀಡಲಾಗಿದೆ.

ವೆಬ್​ ಸರಣಿಯಲ್ಲಿ ತಮ್ಮ ಸಮುದಾಯದ ವಿರುದ್ಧ ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿ ಅರುಣಾಚಲಪ್ರದೇಶ ಗೋರ್ಖಾ ಯೂಥ್​ ಅಸೋಸಿಯೇಷನ್​ ಕಳೆದ ಸೋಮವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿತ್ತು. ಸರಣಿಯಲ್ಲಿ ತ್ರಿಲಿಂಗಿಯೊಬ್ಬರನ್ನು ಕೆಟ್ಟದಾಗಿ ಬಳಸಿಕೊಂಡಿದ್ದು, ‘ಸೆಕ್ಸೆಯೆಸ್ಟ್ ಸ್ಲರ್​’ ಎಂಬ ಪದ ಬಳಕೆ ಮಾಡಿ ಸಮುದಾಯಕ್ಕೆ ಮಸಿ ಬಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

ಇದಕ್ಕೂ ಮುನ್ನ ಭಾರತೀಯ ಗೋರ್ಖಾ ಯುವ ಪರಿಸಂಘ ಈ ಸಂಬಂಧ ಆನ್​ಲೈನ್​ ಅಭಿಯಾನ ಆರಂಭಿಸಿದ್ದು, ಆ ಪದವನ್ನು ಮ್ಯೂಟ್​ ಮಾಡಿ ಸಬ್​ಟೈಟಲ್​ನಲ್ಲೂ ಬದಲಾವಣೆ ಮಾಡುವಂತೆ ಆಗ್ರಹಿಸಿದೆ. ಅಷ್ಟೇ ಅಲ್ಲ ಆ ಪಾತ್ರದ ಹಿನ್ನೆಲೆಯನ್ನು ಮೇಘಾಲಯಕ್ಕೆ ಹೋಲಿಸಿ, ಅಲ್ಲಿನ ಖಾಸಿ ಸಮುದಾಯದ ಹೆಣ್ಣೆಂದು ಬಿಂಬಿಸಲಾಗಿದೆ. ಅದೆಲ್ಲವನ್ನೂ ಕಿತ್ತೆಸೆಯಬೇಕು ಎಂದು ಒತ್ತಾಯಿಸಿದ್ದಾರೆ. ಸೀಮಿತ ಸಮುದಾಯವೊಂದಕ್ಕೆ ಈ ರೀತಿ ಪಟ್ಟ ಕಟ್ಟುವುದು ಸರಿಯಲ್ಲ ಎಂದು ಹೇಳಿ, ಅನುಷ್ಕಾ ಶರ್ಮಾ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೂ ನಾವು ಸಿದ್ಧ ಎಂದು ಗೋರ್ಖಾ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಇತ್ತ ಇದ್ಯಾವುದಕ್ಕೂ ಸ್ಪಂದಿಸದ ಅನುಷ್ಕಾ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಕಾದು ನೋಡಬೇಕು. (ಏಜೆನ್ಸೀಸ್​)