ಸಿನಿವಾಣಿ

ಹೇಳಿದ ಸಮಯಕ್ಕೆ ಸಿನಿಮಾ ಆರಂಭಿಸದೇ ಅತಿಯಾಗಿ ಜಾಹೀರಾತು ಪ್ರದರ್ಶಿಸಿದ ಪಿವಿಆರ್​ಗೆ ಬಿತ್ತು ಭಾರಿ ದಂಡ! PVR

PVR : ಚಿತ್ರಮಂದಿರದ ಒಳಗೆ ಹೋದಾಗ ಸಿನಿಮಾ ಆರಂಭಕ್ಕೂ ಮುನ್ನ ತೋರಿಸುವ ಜಾಹೀರಾತುಗಳಿಂದ ಅನೇಕ ವೀಕ್ಷಕರು ಕಿರಿಕಿರಿ ಅನುಭವಿಸಿರುವುದಂತೂ ನಿಜ. ಅನೇಕ ನಗರಗಳಲ್ಲಿರುವ ಐಷಾರಾಮಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡಲು 300 ರೂಪಾಯಿಗಳಿಗಿಂತ ಹೆಚ್ಚು ಹಣ ನೀಡಿ ಥಿಯೇಟರ್‌ಗೆ ಹೋಗುತ್ತಾರೆ. ಆದರೆ, ಈ ಹಿಂದೆ ಘೋಷಿಸಿದ ಸಮಯಕ್ಕೆ ಸರಿಯಾಗಿ ಸಿನಿಮಾ ಪ್ರದರ್ಶನ ಆರಂಭವಾಗುವುದಿಲ್ಲ. ಇದರಿಂದ ಸಮಯ ವ್ಯರ್ಥವಾಗುವುದಲ್ಲದೆ, ತಾವು ಮೊದಲೇ ನಿರ್ಧರಿಸಿದ ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಇಂತಹ ಸಮಸ್ಯೆಯನ್ನು ಎದುರಿಸಿದ ಬೆಂಗಳೂರಿನ ವ್ಯಕ್ತಿಯೊಬ್ಬರು ಪಿವಿಆರ್-ಐನಾಕ್ಸ್ ವಿರುದ್ಧ ಪ್ರಕರಣ ದಾಖಲಿಸಿ, ಗೆಲುವು ಸಾಧಿಸಿದ್ದಾರೆ.

ಅಭಿಷೇಕ್ ಎಂ.ಆರ್. ಎಂಬ ವ್ಯಕ್ತಿ ಬೆಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸರಿಯಾದ ಸಮಯಕ್ಕೆ ಸಿನಿಮಾ ಆರಂಭ ಮಾಡದೇ ನನ್ನ ಅಮೂಲ್ಯ ಸಮಯವನ್ನು ಹಾಳು ಮಾಡಿದರು ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಪಿವಿಆರ್ ಸಿನಿಮಾಸ್‌ಗೆ ಆಘಾತಕಾರಿ ತೀರ್ಪು ನೀಡಿದೆ.

2023ರಲ್ಲಿ ಬೆಂಗಳೂರಿನ ಪಿವಿಆರ್-ಐನಾಕ್ಸ್‌ನಲ್ಲಿ 'ಸ್ಯಾಮ್ ಬಹದ್ದೂರ್' ಚಿತ್ರವನ್ನು ವೀಕ್ಷಿಸಲು ಹೋಗಿದ್ದೆ. ಸಿನಿಮಾ ಪ್ರಾರಂಭವಾಗುವ ಮೊದಲು ಸುಮಾರು 25 ನಿಮಿಷಗಳ ಕಾಲ ಜಾಹೀರಾತುಗಳನ್ನು ಪ್ರದರ್ಶಿಸಲಾಗಿತ್ತು. ಈ ಕಾರಣದಿಂದಾಗಿ ಸಿನಿಮಾ ತಡವಾಗಿ ಪ್ರಾರಂಭವಾಯಿತು. ಅಲ್ಲದೆ, ಸಿನಿಮಾ ತಡವಾಗಿ ಮುಗಿಯಿತು. ಇದರ ಪರಿಣಾಮವಾಗಿ, ಸಮಯಕ್ಕೆ ಸರಿಯಾಗಿ ಕಚೇರಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಅರ್ಜಿಯಲ್ಲಿ ಅಭಿಷೇಕ್​ ತಿಳಿಸಿದ್ದಾರೆ.

ನಡೆದಿದ್ದೇನು?

ಅಭಿಷೇಕ್ 2023ರ ಡಿಸೆಂಬರ್ 26 ರಂದು ಸಂಜೆ 4.05 ಕ್ಕೆ ಮೂರು ಟಿಕೆಟ್‌ಗಳನ್ನು ಬುಕ್ ಮಾಡಿ, 825.66 ರೂಪಾಯಿಯನ್ನು ಪಾವತಿಸಿದರು. ಸಿನಿಮಾ ಸಂಜೆ 6.30 ಕ್ಕೆ ಮುಗಿಯಬೇಕಿತ್ತು. ಇದರಿಂದ ಅವರು ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪಬಹುದೆಂದು ಭಾವಿಸಿದರು. ಸಂಜೆ 4 ಗಂಟೆಗೆ ಚಿತ್ರಮಂದಿರನ್ನು ಪ್ರವೇಶಿಸಿದರೂ ಸಂಜೆ 4.05 ರಿಂದ 4.28ರವರೆಗೆ ಕೇವಲ ಜಾಹೀರಾತುಗಳನ್ನು ಮಾತ್ರ ತೋರಿಸಲಾಗುತ್ತಿತ್ತು. ಈ ಹಿಂದೆಯೂ ಅವರು ಇದೇ ಸಮಸ್ಯೆಯನ್ನು ಎದುರಿಸಿದ್ದರಿಂದ, ಅವರು ತಮ್ಮ ಫೋನ್‌ನಲ್ಲಿ ಆ ಎಲ್ಲ ಜಾಹೀರಾತುಗಳನ್ನು ಚಿತ್ರೀಕರಿಸುವ ಮೂಲಕ ಮುನ್ನೆಚ್ಚರಿಕೆ ವಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿದರು. ಥಿಯೇಟರ್ ಆಡಳಿತ ಮಂಡಳಿಯು ತಪ್ಪು ಪ್ರದರ್ಶನ ಸಮಯಗಳನ್ನು ನೀಡುವ ಮೂಲಕ ಮತ್ತು ಕಾನೂನುಬಾಹಿರವಾಗಿ ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಲಾಭ ಪಡೆಯಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ತಮ್ಮ ದೂರಿನಲ್ಲಿ ಬುಕ್‌ಮೈಶೋ ಅನ್ನು ಸಹ ಅಭಿಷೇಕ್​ ಟ್ಯಾಗ್​ ಮಾಡಿದ್ದಾರೆ.

ಪಿವಿಆರ್-ಐನಾಕ್ಸ್ ವಿರುದ್ಧದ ದೂರನ್ನು ಬೆಂಗಳೂರು ಗ್ರಾಹಕ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದ್ದು, ಪಿವಿಆರ್​ಗೆ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಗ್ರಾಹಕರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಹಕ್ಕನ್ನು ನಿಮಗೆ ಯಾರು ನೀಡಿದ್ದಾರೆ ಎಂದು ಎಚ್ಚರಿಸಿದೆ. ಅಲ್ಲದೆ, ನ್ಯಾಯಾಲಯವು ದೂರುದಾರ ಅಭಿಷೇಕ್‌ಗೆ 50 ಸಾವಿರ ರೂ. ಪರಿಹಾರವನ್ನು ಪಾವತಿಸಲು ಆದೇಶಿಸಿದೆ. ಪ್ರಕರಣವನ್ನು ದಾಖಲಿಸಲು ಅವರು ಮಾಡಿದ ಇತರ ವೆಚ್ಚಗಳಿಗಾಗಿ 8 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಪಿವಿಆರ್-ಐನಾಕ್ಸ್‌ಗೆ ಟಿಕೆಟ್‌ನಲ್ಲಿ ತೋರಿಸಿರುವ ಸಮಯದಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲು ನ್ಯಾಯಾಲಯ ಸೂಚಿಸಿದೆ. ಪಿಎಸ್‌ಎ (ಸಾರ್ವಜನಿಕ ಸೇವಾ ಪ್ರಕಟಣೆಗಳು) ಅಡಿಯಲ್ಲಿ ಜಾಹೀರಾತುಗಳನ್ನು ಮಾತ್ರ ಕಾನೂನಿನ ವ್ಯಾಪ್ತಿಯಲ್ಲಿ ಪ್ರಸಾರ ಮಾಡಬೇಕೆಂದು ಸೂಚಿಸಿದೆ. (ಏಜೆನ್ಸೀಸ್​)