ಸಿನಿವಾಣಿ

ಕೋಸ್ಟಲ್‌ವುಡ್‌ಗೆ ಸೂಪರ್‌ಸ್ಟಾರ್ ಎಂಟ್ರಿ ; ಕನ್ನಡ ಚಿತ್ರದಲ್ಲೂ ನಟಿಸುವ ಆಸೆಯಿದೆ ಎಂದ ದಯಾನಂದ್ ಶೆಟ್ಟಿ

| ಹರ್ಷವರ್ಧನ್ ಬ್ಯಾಡನೂರು

ಟಿವಿ ಇತಿಹಾಸದಲ್ಲಿಯೇ ಸುದೀರ್ಘವಾಗಿ ಪ್ರಸಾರವಾದ ಧಾರಾವಾಹಿ ಎಂಬ ಹೆಗ್ಗಳಿಕೆ ‘ಸಿಐಡಿ’ಗೆ ಸಲ್ಲುತ್ತದೆ. 1998ರಿಂದ 2018ರವರೆಗೆ, 21 ವರ್ಷಗಳಲ್ಲಿ ಬರೋಬ್ಬರಿ 1547 ಎಪಿಸೋಡ್‌ಗಳು ಪ್ರಸಾರವಾಗಿದ್ದವು. ಈ ಹಿಂದಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು ದಯಾನಂದ್ ಶೆಟ್ಟಿ. ‘ಸಿಐಡಿ’ಯಲ್ಲಿ ಸೀನಿಯರ್ ಇನ್ಸ್‌ಪೆಕ್ಟರ್ ದಯಾ ಪಾತ್ರದಲ್ಲಿ ನಟಿಸಿದ್ದ ಅವರು ಭಾರತದಾದ್ಯಂತ ಮನೆ ಮಾತಾಗಿದ್ದರು. ಮೂಲತಃ ಉಡುಪಿಯ ಶಿರ್ವದವರಾದ ದಯಾನಂದ್ ಇದೀಗ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.

  • ಉಡುಪಿಯಿಂದ ಮುಂಬೈ ಪಯಣ ಹೇಗಿತ್ತು?
  • ನಾನು ಹುಟ್ಟಿದ್ದು ಶಿರ್ವದಲ್ಲಿ. ಅಪ್ಪ ಸೆಂಟ್ರಲ್ ರೈಲ್ವೇಸ್‌ನ ಮುಂಬೈ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಆರ್ಥಿಕವಾಗಿ ಪರಿಸ್ಥಿತಿ ಸರಿಯಿರದ ಕಾರಣ, ನಾನು ಶಿರ್ವದಲ್ಲೇ ಅಮ್ಮನ ಮನೆಯಲ್ಲಿದ್ದೆ. ಅಪ್ಪ ರೈಲ್ವೇಸ್‌ನಿಂದ ನಿವೃತ್ತಿಯಾದ ಬಳಿಕ ಮುಂಬೈನಲ್ಲೇ ಹೋಟೆಲ್ ಪ್ರಾರಂಭಿಸಿದರು. ಶಾಲೆಯ ದಿನಗಳಿಂದಲೇ ನಾನು ಹೋಟೆಲ್ ನೋಡಿಕೊಳ್ಳುತ್ತಿದ್ದೆ. ನಟನಾಗಬೇಕು ಎಂಬ ಆಸೆಯೇನು ಇರಲಿಲ್ಲ. ಆದರೆ, ವಿಧಿಲಿಖಿತ…
  • ‘ಸಿಐಡಿ’ಯಲ್ಲಿ ನಿಮ್ಮ ಹೆಸರಿನ ಪಾತ್ರದಲ್ಲೇ ನಟಿಸಿದ್ದೀರಿ.
  • ‘ಸಿಐಡಿ’ ನಾನು ನಟಿಸಿದ ಮೊದಲ ಧಾರಾವಾಹಿ. 1998ರಲ್ಲಿ ಡೆಬ್ಯೂ ಮಾಡಿದೆ. ಅಲ್ಲೇ ಹಿರಿಯರಾದ ಶಿವಾಜಿ ಸತಂ, ಆದಿತ್ಯ ಶ್ರೀವಾಸ್ತವ್, ರಾಜೇಂದ್ರ ಗುಪ್ತಾ ಅವರಿಂದ ಸಾಕಷ್ಟು ಕಲಿತೆ. ನನ್ನನ್ನು ಗೆಳೆಯರು ದಯಾ ಎಂದು ಕರೆಯುತ್ತಿದ್ದರು. ಅದೇ ಚೆನ್ನಾಗಿದೆ ಎಂದು ಪಾತ್ರದ ಹೆಸರು ದಯಾ ಅಂತಾಯಿತು.
  • ನಂತರ ಬಾಲಿವುಡ್‌ನಲ್ಲೂ ಕೆಲ ಸಿನಿಮಾಗಳಲ್ಲಿ ನಟಿಸಿದಿರಿ.
  • ‘ಸಿಐಡಿ’ಯ ಪಾತ್ರದಿಂದ ಸ್ಪೂರ್ತಿ ಪಡೆದು ‘ಜಾನಿ ಗದ್ದಾರ್’ ಚಿತ್ರದಲ್ಲಿ ಅದೇ ರೀತಿಯ ಪಾತ್ರದಲ್ಲಿ ಮೊದಲು ನಟಿಸಿದೆ. ನಿರ್ದೇಶಕ ರೋಹಿತ್ ಶೆಟ್ಟಿ ‘ಸಿಂಘಂ ರಿಟರ್ನ್ಸ್’ನಲ್ಲಿ ಅವಕಾಶ ನೀಡಿದರು. ‘ಗೋವಿಂದ ನಾಮ್ ಮೇರಾ’ ಸೇರಿ ಕೆಲವು ಸಿನಿಮಾಗಳಲ್ಲಿ ಪೊಲೀಸ್ ಪಾತ್ರದಲ್ಲಿಯೇ ನಟಿಸಿದ್ದೇನೆ.
  • ಈಗ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದೀರಿ.
  • ಹಿಂದೆಯೇ ಹಲವು ಬಾರಿ ತುಳು ಚಿತ್ರಗಳಲ್ಲಿ ಆರ್ಸ್ ಬಂದಿದ್ದವು. ಆದರೆ, ನಾನು ತಿಂಗಳು ಪೂರ್ತಿ ‘ಸಿಐಡಿ’ಯಲ್ಲಿ ಬಿಜಿ ಇರುತ್ತಿದ್ದೆ. 2018ರಲ್ಲಿ ತುಳು ಸಿನಿಮಾ ಮಾಡಬೇಕೆಂದು ಮನಸ್ಸು ಮಾಡಿದೆ. ಹರೀಶ್ ಶೆಟ್ಟಿ ಬೆಂಬಲವಾಗಿ ನಿಂತರು. ಸಂತೋಷ್ ಹೇಳಿದ ಕಥೆ ಇಷ್ಟವಾಯಿತು. ಹೀಗೆ ‘ಯಾನ್ ಸೂಪರ್‌ಸ್ಟಾರ್’ ಸಿನಿಮಾ ರೆಡಿಯಾಯಿತು.
  • ‘ಯಾನ್ ಸೂಪರ್‌ಸ್ಟಾರ್’ನಲ್ಲಿ ನಿಮ್ಮ ಪಾತ್ರ?
  • ಇಬ್ಬರು ನಟರ ಕುರಿತ ಕುತೂಹಲಭರಿತ ಕಥೆಯಿದು. ನಾನು ಜನಪ್ರಿಯ ನಟನ ಪಾತ್ರದಲ್ಲಿ ನಟಿಸಿದ್ದೇನೆ. ಹರೀಶ್ ಶೆಟ್ಟಿ ಸ್ಟ್ರಗ್ಲಿಂಗ್ ಆ್ಯಕ್ಟರ್ ಆಗಿದ್ದಾರೆ. ಹೆಚ್ಚೇನೂ ಈಗಲೇ ರಿವೀಲ್ ಮಾಡಲಾಗುವುದಿಲ್ಲ. ಆದರೆ, ಮುಂಬೈನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ.
  • ತುಳು ಚಿತ್ರರಂಗದಲ್ಲಿ ಕಾಮಿಡಿ ಸಿನಿಮಾಗಳೇ ಹೆಚ್ಚು…
  • ಹೌದು, ಆದರೆ ನಾವು ಈ ಚಿತ್ರದಿಂದ ಆ ಗಡಿಯನ್ನು ದಾಟಲು ಯತ್ನಿಸಿದ್ದೇವೆ. ಈ ಚಿತ್ರದಲ್ಲಿ ಸಾಂದರ್ಭಿಕ ಹಾಸ್ಯ ಸನ್ನಿವೇಶಗಳಿವೆಯಷ್ಟೆ. ತುಳುವಿನಲ್ಲೂ ವಿಷಯಾಧಾರಿತ ಚಿತ್ರಗಳು ಬರಬೇಕು ಎಂಬುದು ನಮ್ಮ ಉದ್ದೇಶ.
  • ಇದೇ 22ರಂದು ಸಿನಿಮಾ ಬಿಡುಗಡೆಯಾಗಲಿದೆ.
  • ನಾನೇ 15 ಬಾರಿ ಸಿನಿಮಾ ನೋಡಿದ್ದೇನೆ. ಪ್ರತಿ ಬಾರಿ ನೋಡಿದಾಗಲೂ ಹೊಸತು ಅನ್ನಿಸುತ್ತಿತ್ತು. ಯೋಚನೆಗೀಡು ಮಾಡುವ, ವಾವ್ ಎನಿಸುವ ಅಂಶಗಳಿರುವ ಒಂದೊಳ್ಳೆ ಸಿನಿಮಾ. ಸೆ. 22ರಂದು ಮಂಗಳೂರು, ಬೆಂಗಳೂರು, ಮುಂಬೈ ಸೇರಿ ಕೆಲವೆಡೆ ರಿಲೀಸ್ ಆಗಲಿದೆ. ನಂತರ ಅಕ್ಟೋಬರ್‌ನಲ್ಲಿ ದುಬೈ ಸೇರಿ ವಿದೇಶಗಳಲ್ಲೂ ತೆರೆಗೆ ಬರಲಿದೆ.
  • ಕನ್ನಡ ಸಿನಿಮಾಗಳಲ್ಲಿ ನೋಡಬಹುದೇ?
  • ಉತ್ತಮ ಅವಕಾಶಗಳು ಸಿಕ್ಕರೆ ಖಂಡಿತ ನಟಿಸುತ್ತೇನೆ. ಹೊಸ ನಿರ್ದೇಶಕರು, ಕಲಾವಿದರು ನ್ಯಾಷನಲ್, ಇಂಟರ್‌ನ್ಯಾಷನಲ್ ಸಿನಿಮಾಗಳಿಂದ ಪ್ರಭಾವಿತರಾಗಿದ್ದಾರೆ, ಬದಲಾವಣೆ ತರುತ್ತಿದ್ದಾರೆ. ಕನ್ನಡ ಚಿತ್ರರಂಗ ನಾಲ್ಕೈದು ವರ್ಷಗಳಿಂದ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಅದೇ ರೀತಿ ತುಳು ಚಿತ್ರರಂಗವೂ ಬೆಳೆಯಬೇಕು ಎಂಬುದು ನನ್ನಾಸೆ.