ಹೈದರಾಬಾದ್: ಟಾಲಿವುಡ್ನ ಹಿರಿಯ ನಟ ಚಿರಂಜೀವಿ ಈ ಹಿಂದೆ ತಮ್ಮ ಹೆಸರಲ್ಲಿ ಬ್ಲಡ್ ಬ್ಯಾಂಕ್ ಪ್ರಾರಂಭಿಸಿದ್ದರು. ಈಗ ಅವರು ತಮ್ಮ ಮಗ ರಾಮ್ಚರಣ್ ತೇಜ ಜತೆಗೆ ಸೇರಿಕೊಂಡು ಆಕ್ಸಿಜನ್ ಬ್ಯಾಂಕ್ಗಳನ್ನು ಪ್ರಾರಂಭಿಸುವುದಕ್ಕೆ ಮುಂದಾಗಿದ್ದಾರೆ.
ಹೌದು, ಕರೊನಾ ಕೇಸ್ಗಳಲ್ಲಿ ಹೆಚ್ಚಳ ಕಂಡ ಕಾರಣ, ಇಡೀ ದೇಶದಲ್ಲಿ ಆಕ್ಸಿಜನ್ಗೆ ಬಹಳ ಬೇಡಿಕೆ ಇದೆ. ಇದಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹೊರತೇನಲ್ಲ. ಈ ಎರಡೂ ರಾಜ್ಯಗಳಲ್ಲಿ ಆಕ್ಸಿಜನ್ ಅಭಾವ ನೀಗಿಸುವುದಕ್ಕೆ ಅವರು ಆಕ್ಸಿಜನ್ ಬ್ಯಾಂಕ್ಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ.
ಈ ಬ್ಯಾಂಕ್ಗಳನ್ನು ಚಿರಂಜೀವಿ ಅಭಿಮಾನಿಗಳ ಸಂಘ ನೋಡಿಕೊಳ್ಳಲಿದ್ದು, ಆಯಾ ಜಿಲ್ಲೆಗಳಲ್ಲಿ ಅಗತ್ಯವಿರುವವರಿಗೆ ಈ ಸಂಘದವರೇ ಆಕ್ಸಿಜನ್ ಪೂರೈಸಲಿದ್ದಾರೆ. ಯಾವುದೇ ಜಿಲ್ಲೆಯಲ್ಲಿ ಯಾರಿಗಾದರೂ ಆಮ್ಲಜನಕದ ಅಗತ್ಯಬಿದ್ದರೆ, ಅವರು ಚಿರಂಜೀವಿ ಅಭಿಮಾನಿಗಳ ಸಂಘವನ್ನು ಸಂಪರ್ಕಿಸಿ, ತರಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ತೌಕ್ತೆ ಚಂಡಮಾರುತಕ್ಕೆ ಮೈದಾನ್ ಚಿತ್ರದ ಸೆಟ್ ಧ್ವಂಸ
ಚಿರಂಜೀವಿ ಚಾರಿಟಬಲ್ ಟ್ರಸ್ಟ್ನಡಿ ಈ ಆಕ್ಸಿಜನ್ ಬ್ಯಾಂಕ್ ಕಾರ್ಯ ನಿರ್ವಹಿಸಲಿದ್ದು, ಇನ್ನೊಂದು ವಾರದಲ್ಲಿ ಸ್ಥಾಪನೆಯಾಗಲಿದೆ. ಈ ಕುರಿತು ಚಿರಂಜೀವಿ ಚಾರಿಟಬಲ್ ಟ್ರಸ್ಟ್ನಿಂದ ಇಂದು ಟ್ವಿಟರ್ನಲ್ಲಿ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.