

ಮುಂಬೈ: ತೌಕ್ತೆ ಚಂಡಮಾರುತದಿಂದ ಮುಂಬೈನಲ್ಲಿ ಹಲವು ಸೆಲೆಬ್ರಿಟಿಗಳಿಗೆ ಸಮಸ್ಯೆಯಾಗಿದೆ. ನಟಿ ರಾಖಿ ಸಾವಂತ್ ಮನೆಗೆ ನೀರು ನುಗ್ಗಿ ಬಂದರೆ, ರಣಬೀರ್ ಕಪೂರ್ ಕಟ್ಟಿಸುತ್ತಿರುವ ಹೊಸ ಮನೆಯ ಎದುರು ಮರಗಳು ಬಿದ್ದು ಸಮಸ್ಯೆ ಎದುರಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಅಜಯ್ ದೇವಗನ್ ಅಭಿನಯದ ಹೊಸ ಚಿತ್ರ ಮೈದಾನ್ಗೆ ಹಾಕಲಾಗಿದ್ದ ಸೆಟ್ಗಳು ಧ್ವಂಸವಾಗಿವೆ.
ಮೈದಾನ್ ಚಿತ್ರಕ್ಕಾಗಿ ಮುಂಬೈನ ಹೊರವಲಯದಲ್ಲಿ ಸ್ಟೇಡಿಯಂನ ಬೃಹತ್ ಸೆಟ್ವೊಂದನ್ನು ಹಾಕಲಾಗಿತ್ತು. ಲಾಕ್ಡೌನ್ಗೂ ಮುನ್ನ ಅಲ್ಲಿ ಚಿತ್ರೀಕರಣ ಸಹ ಮಾಡಲಾಗಿತ್ತು. ಈಗ ತೌಕ್ತೆ ಚಂಡಮಾರುತದಿಂದ ಆ ಸೆಟ್ನ ಕೆಲವು ಭಾಗಗಳು ಧ್ವಂಸವಾಗಿವೆ. ಸೆಟ್ಗಳು ಹಾಳಾಗಿದ್ದು ಬಿಟ್ಟರೆ, ಮಿಕ್ಕಂತೆ ಯಾವುದೇ ಸಾವು-ನೋವುಗಳಾಗಿಲ್ಲ ಎನ್ನುವುದು ಸಮಾಧಾನದ ಸಂಗತಿ.
ಮೈದಾನ್ ಚಿತ್ರದ ಸೆಟ್ಗಳಿಗೆ ಹೀಗೆ ಸಮಸ್ಯೆ ಆಗಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಇದೇ ಸಮಯಕ್ಕೆ, ಮೊದಲ ಲಾಕ್ಡೌನ್ ಆದಾಗ ಸೆಟ್ಗಳನ್ನು ಉಪಯೋಗಿಸದೆ ಅದು ಹಾಳಾಗಿತ್ತು. ಕೊನೆಗೆ ಆ ಸೆಟ್ಗಳನ್ನು ನಾಶ ಮಾಡಿ, ಇನ್ನೊಮ್ಮೆ ನಿರ್ಮಿಸಲಾಗಿತ್ತು. ಈಗ ನೋಡಿದರೆ, ಅದರಲ್ಲಿನ ಬಹುಪಾಲು ಚಂಡಮಾರುತದಿಂದ ಧ್ವಂಸವಾಗಿವೆ.
ಇದನ್ನೂ ಓದಿ: ಚಿತ್ರ ಸೋತರೂ 100 ಕೋಟಿ ಲಾಭ ಮಾಡಿಕೊಂಡ ಸಲ್ಮಾನ್
ಖ್ಯಾತ ಫುಟ್ಬಾಲ್ ಆಟಗಾರ ಸೈಯ್ಯದ್ ಅಬ್ದುಲ್ ರಹೀಮ್ ಅವರ ಬದುಕು ಮತ್ತು ಸಾಧನೆಯನ್ನಾಧರಿಸಿದ ಈ ಚಿತ್ರದಲ್ಲಿ ಅವರ ಪಾತ್ರವನ್ನು ಅಜಯ್ ದೇವಗನ್ ನಿರ್ವಹಿಸುತ್ತಿದ್ದಾರೆ. ಪ್ರಿಯಾಮಣಿ, ಗಜರಾಜ್ ರಾವ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ಅಮಿತ್ ಶರ್ಮಾ ನಿರ್ದೇಶಿಸು್ತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರ ಆಗಸ್ಟ್ 13ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಇದೀಗ ಚಿತ್ರ ಲಾಕ್ಡೌನ್ನಿಂದ ವಿಳಂಬವಾಗುತ್ತಿರುವುದರಿಂದ, ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.