ಸಿನಿವಾಣಿ

ಮಣ್ಣಲ್ಲಿ ಮಣ್ಣಾದ ಚಿರು!

chetannadiger

ಹೃದಯಾಘಾತದಿಂದ ನಿಧನರಾಗಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಅಂತ್ಯ ಸಂಸ್ಕಾರ, ಒಕ್ಕಲಿಗ ಸಂಪ್ರದಾಯದಂತೆ ಸೋಮವಾರ ಸಂಜೆ ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ನಡೆಯಿತು.

ಸೋಮವಾರ ಮಧ್ಯಾಹ್ನದ ವೇಳೆ ಚಿರು ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ಬೃಂದಾವನ ಾರ್ಮ್ ಹೌಸ್‌ಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಅವರ ಅಂತಿಮ ದರ್ಶನ ಪಡೆಯುವುದಕ್ಕೆ ಜನ ರಸ್ತೆಯ ಎರಡೂ ಕಡೆಗಳಲ್ಲಿ ಸಾಲುಗಟ್ಟಿ ನಿಂತಿದ್ದರು.

ಇನ್ನು ಬೃಂದಾವನ್ ಫಾರ್ಮ್ ಹೌಸ್‌ನಲ್ಲಿ ಕುಟುಂಬದವರು, ಮಾಧ್ಯಮದವರು ಮತ್ತು ಗಣ್ಯರನ್ನು ಹೊರತುಪಡಿಸಿ ಸಾರ್ವಜನಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೂ ಅಪಾರ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಎಲ್ಲರ ಸಮ್ಮುಖದಲ್ಲಿ ಚಿರು ಅವರ ತಂದೆ ವಿಜಯ್ ಕುಮಾರ್ ಅಂತಿಮ ವಿಧಿ-ವಿಧಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಅರ್ಜುನ್ ಸರ್ಜಾ, ತಾರಾ, ಪ್ರಜ್ವಲ್ ದೇವರಾಜ್, ‘ದುನಿಯಾ’ ವಿಜಯ್, ಸತೀಶ್ ನೀನಾಸಂ, ರವಿಶಂಕರ್ ಗೌಡ, ‘ಅಲೆಮಾರಿ’ ಸಂತು, ನಂದಕಿಶೋರ್, ಉದಯ್ ಮೆಹ್ತಾ, ‘ಅಯೋಗ್ಯ’ ಮಹೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರು ಈ ಸಂದರ್ಭದಲ್ಲಿ ಹಾಜರಿದ್ದರು.