ಸಿನಿವಾಣಿ

ನಿರ್ದೇಶಕನಾಗಿ ತುಂಬಾ ಗ್ಯಾಪ್​ ತೆಗೆದುಕೊಳ್ಳಲು ಚಿರಂಜೀವಿ ಕಾರಣ! ಅಚ್ಚರಿ ಹೇಳಿಕೆ ನೀಡಿದ ರಿಯಲ್​ ಸ್ಟಾರ್ ಉಪ್ಪಿ | Upendra

Upendra : ಸ್ಯಾಂಡಲ್​ವುಡ್​​ ರಿಯಲ್​ ಸ್ಟಾರ್​ ಉಪೇಂದ್ರ ಅವರು ಬಹಳ ವರ್ಷಗಳ ನಂತರ ಡೈರೆಕ್ಟರ್​ ಕ್ಯಾಪ್​ ಧರಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅವರು ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ ಯುಐ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಡಿ.20ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಯುಐ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತುಂಬಾ ಬಿಜಿಯಾಗಿದೆ.

ಪ್ರಚಾರದ ಭಾಗವಾಗಿ ಸ್ಟಾರ್​ ನಟರನ್ನು ಸಿನಿಮಾ ತಂಡ ಭೇಟಿಯಾಗುತ್ತಿದೆ. ಕೆಲವು ದಿನಗಳ ಹಿಂದೆ ಆಮೀರ್​ ಖಾನ್​ ಅವರನ್ನು ಭೇಟಿ ಮಾಡಿದ್ದ ಉಪೇಂದ್ರ, ನಿನ್ನೆಯಷ್ಟೇ ಟಾಲಿವುಡ್​ ಸ್ಟಾರ್​ ನಟ ಅಲ್ಲು ಅರ್ಜುನ್​ ಅವರನ್ನು ಭೇಟಿ ಮಾಡಿದರು. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅದ್ಧೂರಿ ಬಿಡುಗಡೆಗೆ ಚಿತ್ರತಂಡ ಪ್ಲಾನ್​ ಮಾಡಿದ್ದು, ಉಳಿದಿರುವ ಸಮಯದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದೆ.

ಅಂದಹಾಗೆ ಉಪೇಂದ್ರ ಅವರ ನಟನೆಗೆ ಎಷ್ಟು ಅಭಿಮಾನಿಗಳಿದ್ದಾರೋ ಅದಕ್ಕಿಂತಲೂ ದೊಡ್ಡ ಅಭಿಮಾನಿಗಳ ಬಳಗ ಅವರ ನಿರ್ದೇಶನಕ್ಕಿದೆ. ಹೀಗಾಗಿಯೇ ಯುಐ ಸಿನಿಮಾಗೆ ಎಲ್ಲರು ಎದುರು ನೋಡುತ್ತಿದ್ದಾರೆ. ನಿರ್ದೇಶಕರಾಗಿ ಆರಂಭದಲ್ಲಿ ಹೊಸ ಕಥೆಗಳ ಮೂಲಕ ಹಿಟ್ ಸಿನಿಮಾಗಳನ್ನು ನೀಡಿದ ಉಪೇಂದ್ರ ನಂತರ ಹೀರೋ ಆಗಿ ಬದಲಾದರು. ಆರಂಭದಲ್ಲಿ ನಿರ್ದೇಶಕರಾಗಿ ಸಾಲು ಸಾಲು ಸಿನಿಮಾ ಮಾಡಿದ್ದ ಉಪೇಂದ್ರ, ನಂತರ ನಿರ್ದೇಶಕರಾಗಿ ಲಾಂಗ್ ಗ್ಯಾಪ್ ತೆಗೆದುಕೊಂಡು ಸಾಂದರ್ಭಿಕ ಸಿನಿಮಾಗಳನ್ನು ಮಾಡಿದರು.

ಸದ್ಯ ಉಪೇಂದ್ರ ಯುಐ ಸಿನಿಮಾದ ಮೂಲಕ ಬಹಳಷ್ಟು ವರ್ಷಗಳ ಬಳಿಕ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗಾಗಲೇ ಹೊರಬಿದ್ದಿರುವ ಟೀಸರ್ ಹಾಗೂ ಕಂಟೆಂಟ್​ನಿಂದಾಗಿ ಸಿನಿಮಾದ ಮೇಲೆ ಕ್ರೇಜ್​ ಜಾಸ್ತಿಯಾಗಿದೆ. ಈ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗುತ್ತಿರುವ ಕಾರಣ ನಿನ್ನೆ ಯುಐ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆಯಿತು. ಈ ವೇಳೆ ಮಾತನಾಡಿದ ಉಪೇಂದ್ರ, ಮೆಗಾಸ್ಟಾರ್​ ಚಿರಂಜೀವಿ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.

ನನಗೆ ಅಲ್ಲು ಅರವಿಂದ್ ಗಾರು ಮತ್ತು ಚಿರಂಜೀವಿ ಕುಟುಂಬದೊಂದಿಗೆ ಸುಮಾರು 25 ವರ್ಷಗಳ ಸಂಬಂಧವಿದೆ. 1996-97ರಲ್ಲಿ ನಿರ್ದೇಶಕನಾಗಿ ಚಿರಂಜೀವಿ ಅವರ ಜೊತೆ ಸಿನಿಮಾ ಮಾಡಲು ಸುಮಾರು ಒಂದು ವರ್ಷ ಸುತ್ತಾಡಿದ್ದೆ. ನಾನು ಸ್ಕ್ರಿಪ್ಟ್ ಬರೆದು ಅವರ ಕಾಲ್​ಶೀಟ್​ಗಾಗಿ ಎದುರು ನೋಡುತ್ತಿದ್ದೆ. ಆಗ ನನಗೆ ಅರ್ಥವಾಗಿದ್ದೇನೆಂದರೆ, ಚಿರಂಜೀವಿ ಅವರು ಪ್ರತಿಯೊಂದು ದೃಶ್ಯ ಮತ್ತು ಸಂಭಾಷಣೆಯನ್ನು ಹತ್ತು ಬಾರಿ ಅಲ್ಲ ನೂರು ಬಾರಿ ಯೋಚಿಸುತ್ತಾರೆ. ಅದಕ್ಕೇ ಅವರು ಮೆಗಾಸ್ಟಾರ್ ಆದರು ಎಂದು ಉಪೇಂದ್ರ ಹೇಳಿದರು.

ಆ ಸಮಯದಲ್ಲಿ ನಾವು ಸರಳವಾಗಿ ಸ್ಕ್ರಿಪ್ಟ್​​ ಬರೆದು ಸಿನಿಮಾ ಮಾಡುತ್ತಿದ್ದೆವು. ಆದರೆ, ಇಲ್ಲಿಯವರು ಆ ಸಂದರ್ಭದಲ್ಲೇ ತುಂಬಾ ಶ್ರಮಿಸುತ್ತಿದ್ದರು. ಸ್ಕ್ರಿಪ್ಟ್‌ ವಿಚಾರದಲ್ಲಿ ಗಂಭೀರವಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿ ಒಂದೋ ಅಥವಾ ಎರಡೋ ವರ್ಷ ಸ್ಕ್ರಿಪ್ಟ್ ಮೇಲೆಯೇ ಹೆಚ್ಚು ಶ್ರಮಿಸುತ್ತಾರೆ. ಅಷ್ಟೊಂದು ಸಮರ್ಪಣಾ ಮನೋಭಾವವಿದೆ. ಅಂದಿನಿಂದಲೇ ನಾನು ಸ್ಕ್ರಿಪ್ಟ್ ಕೆಲಸದ ಕಡೆ ಹೆಚ್ಚು ಗಮನ ಹರಿಸಲು ಶುರು ಮಾಡಿದೆ. ನಿರ್ದೇಶಕನಾಗಿ ನನ್ನ ಸಿನಿಮಾಗಳ ನಡುವೆ ಹಲವು ವರ್ಷಗಳ ಗ್ಯಾಪ್ ಇರುವುದಕ್ಕೆ ಸ್ಕ್ರಿಪ್ಟ್ ವರ್ಕ್ ಕಾರಣ. ಅಂದಿನಿಂದ ಸ್ಕ್ರಿಪ್ಟ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ, ಸಿನಿಮಾ ಮಾಡುವುದಕ್ಕೆ ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದು ಉಪೇಂದ್ರ ಹೇಳಿದರು.

ಉಪೇಂದ್ರ ಅವರು ಮಾತನಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಮೆಗಾಸ್ಟಾರ್ ಚಿರಂಜೀವಿ ಅವರ ಅಭಿಮಾನಿಗಳು ವಿಡಿಯೋ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)