ಸಿನಿವಾಣಿ

ಈಗಷ್ಟೇ ಅಲ್ಲ ಅಂದಿನಿಂದಲೂ ಜಾನಿ ಮಾಸ್ಟರ್​​… ಗಾಯಕಿ ಚಿನ್ಮಯಿ ಶ್ರೀಪಾದ ಸ್ಫೋಟಕ ಹೇಳಿಕೆ

ಹೈದರಾಬಾದ್​: ಖ್ಯಾತ ಡಾನ್ಸ್ ಕೊರಿಯೋಗ್ರಾಫರ್​ ಜಾನಿ ಮಾಸ್ಟರ್ ವಿರುದ್ಧ ಕೇಳಿಬಂದಿರುವ ಅತ್ಯಾಚಾರ ಆರೋಪವು ಇದೀಗ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಬಗ್ಗೆ ಗಾಯಕಿ, ಡಬ್ಬಿಂಗ್​ ಕಲಾವಿದೆ ಹಾಗೂ ಸ್ತ್ರೀವಾದಿ ಎಂದೇ ಬ್ರ್ಯಾಂಡ್​ ಆಗಿರುವ ಚಿನ್ಮಯಿ ಶ್ರೀಪಾದ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿರುವ ಚಿನ್ಮಯಿ, ಕೆಲ ವರದಿಗಳ ಪ್ರಕಾರ, ಈಗ ದೂರು ನೀಡಿರುವ ಯುವತಿ, ಅಪ್ರಾಪ್ತೆಯಾಗಿದ್ದಾಗಿನಿಂದಲೂ ಆಕೆಗೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಲು ಪ್ರಾರಂಭಿಸಿದರು ಎಂದು ಹೇಳಲಾಗಿದೆ. ಇದೀಗ ಧೈರ್ಯವಾಗಿ ಮುಂದೆ ಬಂದಿರುವ ಹುಡುಗಿಗೆ ಹೋರಾಡುವ ಶಕ್ತಿ ಬರಲೆಂದು ನಾನು ಬಯಸುತ್ತೇನೆ ಎಂದು ಚಿನ್ಮಯಿ ಹೇಳಿದ್ದಾರೆ.

ಅಂದಹಾಗೆ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಮಹಿಳೆಯ ಪರ ಸದಾ ಧ್ವನಿ ಎತ್ತುವ ಸ್ತ್ರೀವಾದಿ ಎಂಬುದು ಗೊತ್ತೇ ಇದೆ. ಆಕೆ ಚಿತ್ರರಂಗದಲ್ಲಿ ಮಾತ್ರವಲ್ಲ ಸಮಾಜದಲ್ಲಿ ಎಲ್ಲಿಯಾದರೂ ಹೆಣ್ಣುಮಕ್ಕಳು ದೌರ್ಜನ್ಯಕ್ಕೆ ಒಳಗಾಗಿದ್ದರೆ ತಕ್ಷಣವೇ ಸಾಮಾಜಿಕ ಜಾಲತಾಣಗಳ ಮೂಲಕ ಧ್ವನಿ ಎತ್ತುತ್ತಾರೆ. ಇತ್ತೀಚೆಗೆ ಬರಹಗಾರ ವೈರಮುತ್ತು ಮತ್ತು ಗಾಯಕ ಕಾರ್ತಿಕ್ ಅವರ ಮೇಲೂ ಕಿರುಕುಳದ ಆರೋಪ ಕೇಳಿಬಂದಿತ್ತು. ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರುವವರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿನ್ಮಯಿ ಶ್ರೀಪಾದ ಮಹಿಳೆಯರ ಪರವಾಗಿ ನಿಂತಿದ್ದಾರೆ.

ಅಂದಹಾಗೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನರಸಿಂಗಿ ಪೊಲೀಸ್​ ಠಾಣೆಯಲ್ಲಿ ಜಾನಿ ಮಾಸ್ಟರ್​ ವಿರುದ್ಧ ಯುವತಿ ದೂರು ದಾಖಲಿಸಿದ್ದಾಳೆ. ಪೊಲೀಸರ ಮುಂದೆ ಹಾಜರಾದ ಸಂತ್ರಸ್ತೆ, ಜಾನಿ ಮಾಸ್ಟರ್ ವಿರುದ್ಧ ಸ್ಫೋಟಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾಳೆ. ಮೂರು ಗಂಟೆಗಳ ಕಾಲ ಪೊಲೀಸ್​ ಅಧಿಕಾರಿಗಳ ಬಳಿ ತನ್ನ ಹೇಳಿಕೆಯನ್ನು ಸಂತ್ರಸ್ತೆ ದಾಖಲಿಸಿದ್ದಾಳೆ. ಅಲ್ಲದೆ, ಆಕೆಯನ್ನು ಭರೋಸಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿದ್ದಾರೆ ಎಂದು ವರದಿಯಾಗಿದೆ.

ಪ್ರತಿದಿನ ಶೂಟಿಂಗ್ ಸಮಯದಲ್ಲಿ ವ್ಯಾನ್‌ನಲ್ಲಿ ಬಂದು ಪ್ಯಾಂಟ್‌ನ ಜಿಪ್ ಓಪನ್​ ಮಾಡಿ ಬಲವಂತ ಮಾಡುತ್ತಿದ್ದರು. ತನ್ನ ಲೈಂಗಿಕ ಆಸೆಗಳನ್ನು ಈಡೇರಿಸಿಕೊಳ್ಳಲು ನನಗೆ ಕಿರುಕುಳ ನೀಡಿದ್ದಾರೆ. ಆಫರ್​ಗಳು ಬೇಕಾದರೆ ಕಾಮತೃಷೆ ತೀರಿಸುವಂತೆ ಒತ್ತಾಯಿಸಿದ್ದಾರೆ. ಮುಂಬೈ ಹೋಟೆಲ್‌ನಲ್ಲಿ ಮಾತ್ರವಲ್ಲದೆ ಹೈದರಾಬಾದ್‌ನಲ್ಲಿಯೂ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಆಸೆಯನ್ನು ಈಡೇರಿಸದಿದ್ದರೆ ಹಲ್ಲೆ ನಡೆಸುವುದಾಗಿಯೂ ಬೆದರಿಕೆ ಹಾಕಿದ್ದರು. ಜಾನಿ ಮಾಸ್ಟರ್ ಮತ್ತು ಅವರ ಪತ್ನಿ ಇಬ್ಬರೂ ಮನೆಗೆ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಬಹಿರಂಗಪಡಿಸಿದ್ದಾಳೆ.

ಜಾನಿ ಮಾಸ್ಟರ್ ವಿರುದ್ಧ ಐಪಿಸಿಯ ಸೆಕ್ಷನ್ 376 (ಅತ್ಯಾಚಾರ), ಕ್ರಿಮಿನಲ್ ಬೆದರಿಕೆ (506) ಮತ್ತು ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು (323) ಕಲಂ (2) ಮತ್ತು (ಎನ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಜಾನಿ ಮಾಸ್ಟರ್ ವಿರುದ್ಧ ದೂರು ದಾಖಲಾಗಿರುವುದು ಇದೇ ಮೊದಲಲ್ಲ, ಈ ವರ್ಷದ ಜೂನ್‌ನಲ್ಲಿ ಡ್ಯಾನ್ಸರ್ ಸತೀಶ್ ಕೂಡ ಜಾನಿ ಮಾಸ್ಟರ್ ವಿರುದ್ಧ ದೂರು ನೀಡಿದ್ದರು. ಸಿನಿಮಾ ಶೂಟಿಂಗ್‌ನಲ್ಲಿ ಕೆಲಸ ಕೊಡಿಸದಂತೆ ತಡೆಯುತ್ತಿದ್ದಾರೆ ಎಂದು ಸತೀಶ್ ಆರೋಪಿಸಿದ್ದರು. (ಏಜೆನ್ಸೀಸ್)