ಸಿನಿವಾಣಿ

ಚೀನಾದಲ್ಲಿ ಚಿತ್ರಮಂದಿರ ಓಪನ್​; ಮೊದಲ ದಿನವೇ ದಾಖಲೆಯ ಟಿಕೆಟ್ ಮಾರಾಟ!

ವಿಶ್ವಕ್ಕೆ ಕರೊನಾ ಹರಡಿದ ಚೀನಾ ಮತ್ತೆ ಹಳೇ ಲಯಕ್ಕೆ ಮರಳಿದೆ. ಎಂದಿನಂತೆ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಹೆಚ್ಚು ಕರೊನಾ ಪೀಡಿತ ಪ್ರದೇಶಗಳನ್ನು ಹೊರತುಪಡಿಸಿ, ಗ್ರೀನ್​ ಝೋನ್​ನಲ್ಲಿರುವ ಪ್ರದೇಶಗಳಲ್ಲಿ ಸೋಮವಾರದಿಂದ ಸಿನಿಮಾ ಪ್ರದರ್ಶನಕ್ಕೂ ಅಲ್ಲಿನ ಸರ್ಕಾರ ಅನುಮತಿ ನೀಡಿದ್ದು, ಆರು ತಿಂಗಳ ಬಳಿಕ ಚೀನಾ ಮಂದಿ ಚಿತ್ರಮಂದಿರಕ್ಕೆ ಕಾಲಿಟ್ಟಿದೆ.

ಹೌದು, ಕಳೆದ ವಾರವಷ್ಟೇ ಗ್ರೀನ್​ ಝೋನ್​ನಲ್ಲಿರುವ ಚಿತ್ರಮಂದಿರಗಳನ್ನು ಮತ್ತು ಮಾಲ್​ಗಳನ್ನು ತೆರೆಯುವಂತೆ ಚೀನಾ ಸರ್ಕಾರ ಆದೇಶ ನೀಡಿತ್ತು. ಅದರಂತೆ ಚಿತ್ರಮಂದಿರಗಳು ತೆರೆದಿದ್ದು, ಎಂದಿನಂತೆ ಸಿನಿಮಾ ಪ್ರದರ್ಶನ ಶುರುವಾಗಿದೆ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್​ ಧರಿಸಿದವರಿಗೆ ಮಾತ್ರ ಚಿತ್ರಮಂದಿರದಲ್ಲಿ ಪ್ರವೇಶ ನೀಡಲಾಗಿದೆ. ತಿನ್ನುವುದು, ಕುಡಿಯುವುದಕ್ಕೆ ನಿಷೇಧ ಹೇರಲಾಗಿದ್ದು, ಶೇ 30 ರಷ್ಟು ಜನರಿಗೆ ಮಾತ್ರ ಚಿತ್ರಮಂದಿರದೊಳಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕಳೆದ ಜನವರಿಯಿಂದ ಚಿತ್ರಮಂದಿರಗಳ ಬಾಗಿಲನ್ನು ಮುಚ್ಚಿದ್ದ ಚೀನಾ ಸರ್ಕಾರ, ಇದೀಗ ಕರೊನಾ ಹಾವಳಿ ತಗ್ಗಿರುವುದರಿಂದ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಇನ್ನು ಟಿಕೆಟ್​ ಮಾರಾಟದಲ್ಲೂ ದಾಖಲೆಯ ಪ್ರಮಾಣದ ಟಿಕೆಟ್ ಸೇಲ್​ ಆಗಿದ್ದು, 4 ಕೋಟಿ ಮೌಲ್ಯದ ಟಿಕೆಟ್​ ಮಾರಾಟವಾಗಿವೆಯಂತೆ. ಕರೊನಾ ಹಾವಳಿ ನಡುವೆಯೂ ಈ ಮಟ್ಟದ ಟಿಕೆಟ್​ ಮಾರಾಟವಾಗಿದ್ದು ದೊಡ್ಡ ಮೊತ್ತವೇ ಸರಿ ಎಂದು ಅಲ್ಲಿನ ಸಿನಿಮಾ ಟಿಕೆಟ್​ ಮಾರಾಟ ವೆಬ್​ಸೈಟ್​ಗಳು ಹೇಳಿಕೊಂಡಿವೆ.

ಚಿತ್ರಮಂದಿರ ತೆರೆಯುತ್ತಿದ್ದಂತೆ ಒಟ್ಟು 50ಸಾವಿರಕ್ಕೂ ಅಧಿಕ ಮಂದಿ ಥಿಯೇಟರ್​ಗಳಿಗೆ ಭೇಟಿ ನೀಡಿದ್ದು, 198 ಚಿತ್ರಮಂದಿರ ತೆರೆಯಲಾಗಿದೆ. ಒಟ್ಟು 6101 ಸ್ಕ್ರೀನ್​ಗಳಲ್ಲಿ ಚಿತ್ರ ಪ್ರದರ್ಶನವಾಗಿದೆ.  (ಏಜೆನ್ಸೀಸ್​)