ಆರಡಿ ಅಂತರ ಕಾಪಾಡಿ ಅಂತಿದ್ದಾರೆ ಶಾರೂಖ್​ ...

Shahrukh Khan - Final
Published on

ಕರೊನಾ ವಿರುದ್ಧ ಜಾಗೃತಿ ಮೂಡಿಸುವುದಕ್ಕೆ, ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಹೇಳುವುದಕ್ಕೆ ಹಲವು ರಾಜ್ಯಗಳ ಪೊಲೀಸ್​ ಇಲಾಖೆ ಮತ್ತು ಮಹಾನಗರ ಪಾಲಿಕೆಗಳು ತಾರೆಯರನ್ನಿಟ್ಟುಕೊಂಡು ಜಾಗೃತಿ ಮೂಡಿಸುತ್ತಲೇ ಬಂದಿವೆ.

ಕರ್ನಾಟಕದಲ್ಲೇ, ಪೊಲೀಸ್​ ಇಲಾಖೆಯು ಕನ್ನಡದ ಹಲವು ಚಿತ್ರಗಳ ಪೋಸ್ಟರ್​ಗಳನ್ನಿಟ್ಟುಕೊಂಡು ಜಾಗೃತಿ ಮೂಡಿಸುವುದಕ್ಕೆ ಪ್ರಯತ್ನ ಪಟ್ಟಿತ್ತು. ಸುದೀಪ್​ ಅಭಿನಯದ 'ಪೈಲ್ವಾನ್​', ಉಪೇಂದ್ರ ಅಭಿನಯದ 'ಬುದ್ಧಿವಂತ 2' ಚಿತ್ರಗಳ ಪೋಸ್ಟರ್​ಗಳನ್ನಿಟ್ಟುಕೊಂಡು, ಕರೊನಾ ವಿರುದ್ಧ ಜಾಗೃತಿ ಮೂಡಿಸಲಾಗಿತ್ತು.

ಈಗ ಅಸ್ಸಾಂ ಪೊಲೀಸ್​ ಸಹ ಇಂಥದ್ದೇ ಒಂದು ತಂತ್ರವನ್ನು ಅನುಸರಿಸುತ್ತಿದ್ದಾರೆ. ಕರೊನಾ ಹಾವಳಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅವರು ಬಾಲಿವುಡ್​ ಬಾದ್​ಷಾ ಶಾರೂಖ್ ಖಾನ್​ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗಂ ಶಾರೂಖ್​, ಈ ಜಾಗೃತಿ ಜಾಹೀರಾತಿನಲ್ಲಿ ಅಭಿನಯಿಸುತ್ತಿದ್ದಾರಾ ಎಂಬ ಪ್ರಶ್ನೆ ಬರಬಹುದು.

ಹಾಗೇನಿಲ್ಲ, ಶಾರೂಖ್​ ಖಾನ್​ ಅವರ ಹಳೆಯ ಫೋಟೋವೊಂದನ್ನು ಇಟ್ಟುಕೊಂಡು, 'ಬಾಜಿಗರ್​' ಚಿತ್ರದ ಒಂದು ಸಂಭಾಷಣೆಯನ್ನು ಬಳಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಶಾರೂಖ್​ ಅವರ ಸಿಗ್ನೇಚರ್​ ಪೋಸ್​ ಎಂದರೆ, ತಮ್ಮ ಎರಡೂ ಕೈಗಳನ್ನು ಅಗಲವಾಗಿ ಚಾಚಿ ಪೋಸ್​ ಕೊಡುವುದು. ಈ ಫೋಟೋಗೆ ಮಾಸ್ಕ್​ ಹಾಕಿ ಬಳಸಿಕೊಂಡಿರುವ ಅಸ್ಸಾಂ ಪೊಲೀಸ್​, ಆರಡಿ ಅಂತರ ಕಾಯ್ದುಕೊಳ್ಳಿ ಎಂಬ ಸಂದೇಶವನ್ನು ನೀಡಿದ್ದಾರೆ.

'ಕೆಲವೊಮ್ಮೆ ಹತ್ತಿರ ಬರುವುದಕ್ಕಿಂತ ದೂರ ಹೋಗಬೇಕಾಗುತ್ತದೆ. ದೂರ ಹೋಗಿ ಹತ್ತಿರ ಬರುವವನಿಗೆ ಬಾಜಿಗರ್​ ಎಂದು ಕರೆಯುತ್ತಾರೆ' ಎಂದು 'ಬಾಜಿಗರ್​' ಚಿತ್ರದ ಜನಪ್ರಿಯ ಸಂಭಾಷಣೆಯನ್ನು ಕ್ಯಾಪ್ಶನ್​ ಆಗಿ ಬಳಸಿಕೊಳ್ಳಲಾಗಿದೆ.

ಶಾರೂಖ್​ ಅವರನ್ನು ಬಳಸಿಕೊಂಡು ಜಾಗೃತಿ ಮೂಡಿಸುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ, ಮುಂಬೈ ಪೊಲೀಸರು, 'ಮೇ ಹೂಂ ನಾ' ಚಿತ್ರದ ಒಂದು ದೃಶ್ಯವನ್ನು ಬಳಸಿಕೊಂಡು ಜಾಗೃತಿ ಮೂಡಿಸಲಾಗಿತ್ತು. ಮುಂಬೈ ನಂತರ ಇದೀಗ ಅಸ್ಸಾಂಗೂ ಶಾರೂಖ್​ ಬೇಕಾಗಿದ್ದಾರೆ ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net