ಸಿನಿವಾಣಿ

ವರ್ಷಾ ಕಾವೇರಿಗೆ ಇಷ್ಟೊಂದು ಕೆಟ್ಟದಾಗಿ ಮೆಸೇಜ್​ ಮಾಡಿದ್ರಾ ವರುಣ್​ ಆರಾಧ್ಯ? ಬಯಲಾಯ್ತು ಚಾಟಿಂಗ್ ರಹಸ್ಯ!

ಬೆಂಗಳೂರು: ಸೋಶಿಯಲ್​ ಮೀಡಿಯಾ ಸ್ಟಾರ್​ಗಳಿಬ್ಬರ ವಿವಾದ ಇದೀಗ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬೃಂದಾವನ ಸೀರಿಯಲ್​ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ವರ್ಷಾ ಕಾವೇರಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಅಶ್ಲೀಲ ಫೋಟೋ-ವಿಡಿಯೋ ಇಟ್ಟುಕೊಂಡು ವರುಣ್​ ಬ್ಲಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ವರ್ಷಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಇದೆಲ್ಲ ಸುಳ್ಳು ಎಂದು ವರ್ಷಾ ಉಲ್ಟಾ ಹೊಡೆದಿದ್ದಳು. ಇತ್ತ ವರುಣ್​ ಸಹ ನಾನೊಬ್ಬ ಫ್ಯಾಮಿಲಿ ಬಾಯ್​​. ನಾನು ಆ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ವಿಡಿಯೋ ಮೂಲಕ ಸಮಜಾಯಿಷಿ ನೀಡಿದ್ದ. ಈ ವಿವಾದ ಇಲ್ಲಿಗೆ ನಿಂತುಹೋಗಿತ್ತು. ಇದೀಗ ವರುಣ್​ ಮತ್ತು ವರ್ಷಾ ನಡುವೆ ನಡೆದಿದೆ ಎನ್ನಲಾದ ವಾಟ್ಸ್​ಆ್ಯಪ್​ ಚಾಟ್​ ಸ್ಕ್ರೀನ್​ಶಾಟ್ ಜಾಲತಾಣದಲ್ಲಿ ಹರಿದಾಡುತ್ತಿದ್ದರು. ಈ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ​

ವರುಣ್​​ ಆರಾಧ್ಯ ಅವರು ಸೀರಿಯಲ್​ಗೆ ಎಂಟ್ರಿ ಕೊಡುವ ಮುನ್ನವೆ ಇವರಿಬ್ಬರ ಬ್ರೇಕಪ್​ ಆಗಿತ್ತು. ಇನ್​ಸ್ಟಾಗ್ರಾಂ ​ಸೇರಿದಂತೆ ಎಲ್ಲಾ ಫ್ಲಾಟ್​ಫಾರ್ಮ್​ನಲ್ಲಿ ಈ ಜೋಡಿ ಫೇಮಸ್​ ಆಗಿತ್ತು. 4 ವರ್ಷದ ಹಿಂದೆ ಇನ್​ಸ್ಟಾಗ್ರಾಂನಲ್ಲಾದ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಆದರೆ, ವರುಣ್​​ ಆರಾಧ್ಯ, ವರ್ಷಾ ಕಾವೇರಿ ಜತೆ ಪ್ರೀತಿಯಲ್ಲಿರುವಾಗಲೇ ಬೇರೊಂದು ಹುಡುಗಿ ಜತೆ ಅಫೇರ್ ಕೂಡ ಇಟ್ಟುಕೊಂಡಿದ್ದ ಎನ್ನಲಾಗಿದೆ. ಫೋನ್‌ನಲ್ಲಿ‌ ಮತ್ತೊಂದು ‌ಯುವತಿ ಜತೆಗಿದ್ದ ಖಾಸಗಿ ‌ಫೋಟೋಗಳು ಪತ್ತೆಯಾದ ಬಳಿಕ, ಅದರ ಬಗ್ಗೆ ಪ್ರಶ್ನೆ ಮಾಡಿದ್ದೆ. ಈ ವೇಳೆ ಬೆದರಿಕೆ ಹಾಕಿದ್ದನು ಎಂದು ವರ್ಷಾ ಕಾವೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಾಧ್ಯಮಗಳ ವರದಿಗಳು ಹೇಳಿದ್ದವು. ವರ್ಷಾ ದೂರು ನೀಡಿರುವುದು ಕೂಡ ಸತ್ಯವಾಗಿತ್ತು.

ದೂರು ನೀಡಿರುವುದು ಸುದ್ದಿಯಾಗುತ್ತಿದ್ದಂತೆ ಉಲ್ಟಾ ಹೊಡೆದ ವರ್ಷಾ, ನೀವು ನೋಡುತ್ತಿರುವುದು ಸುಳ್ಳು ಮಾಹಿತಿಯಾಗಿದೆ. ಇದು ಇನ್​ಸ್ಟಾಗ್ರಾಂ ಪ್ರೊಫೈಲ್​ ಮತ್ತು ಇತರ ಸಾಮಾಜಿಕ ಮಾಧ್ಯಮ ಫ್ಲಾಟ್​ಫಾರ್ಮ್​​ಗಳಿಂದ ಎಲ್ಲಾ ರೀಲ್​ಗಳನ್ನು ತೆಗೆದುಹಾಕುವುದರ ಕುರಿತಾಗಿದೆ. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಶೇರ್​ ಮಾಡಿದ್ದಳು. ಅಲ್ಲದೆ, ಮಾಧ್ಯಮಗಳಲ್ಲಿ ಸುದ್ದಿ ನೋಡಿ ನನಗೆ ಯಾರೆಲ್ಲ ಮೆಸೇಜ್ ಮಾಡುತ್ತಿದ್ದೀರಾ ಅವರೆಲ್ಲ ಸುಮ್ಮನಿರಿ ಇನ್ನು ಕೆಲವೇ ದಿನಗಳಲ್ಲಿ ನಾನು ಸ್ಪಷ್ಟನೆ ನೀಡುತ್ತೇನೆ ಎಂದಿದ್ದರು.

ವರುಣ್​ ಸ್ಪಷ್ಟನೆ ಏನಿತ್ತು?

ಇದಾದ ಬಳಿಕ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ವರುಣ್​, ನನ್ನ ಮೇಲೆ ಮಾಡಲಾಗಿರುವ ಆರೋಪಗಳು ಶುದ್ಧ ಸುಳ್ಳು ಎಂದರು. ಹಲವು ವರ್ಷಗಳಿಂದ ನಾನು ಮತ್ತು ವರ್ಷಾ ಒಟ್ಟಿಗೆ ಇನ್​ಸ್ಟಾಗ್ರಾಂ ರೀಲ್ಸ್ ಮಾಡುತ್ತಿದ್ದೆವು, ಅವರ ಹಲವಾರು ಚಿತ್ರಗಳು, ಒಟ್ಟಿಗೆ ಮಾಡಿದ್ದ ರೀಲ್ಸ್ ವಿಡಿಯೋಗಳು ನನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿವೆ. ಈಗ ನಾವು ದೂರಾಗಿದ್ದೇವೆ. ಹೀಗಾಗಿ ಅವುಗಳನ್ನು ತೆಗೆಯುವಂತೆ ವರ್ಷಾ ಹೇಳಿದ್ದಳು, ಆದರೆ ನನಗೆ ಸಮಯ ಸಿಗದ ಕಾರಣ ನಾನು ಅವುಗಳನ್ನು ತೆಗೆದಿರಲಿಲ್ಲ. ಅದೇ ವಿಷಯವಾಗಿ ವರ್ಷಾ ವಕೀಲರ ಸಮ್ಮುಖದಲ್ಲಿ ಮಾತನಾಡಿ, ಚಿತ್ರಗಳನ್ನು ತೆಗೆಯುವಂತೆ ಸೂಚಿಸಲಾಯ್ತು. ವರ್ಷಾಗೆ ಮದುವೆ ನಿಶ್ಚಯವಾಗುತ್ತಿದ್ದು, ಅದಕ್ಕೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಚಿತ್ರಗಳನ್ನು ತೆಗೆಯಲು ಹೇಳಿದ್ದರು ಅಷ್ಟೆ, ಯಾವುದೇ ಬೆದರಿಕೆ ಆಗಲಿ, ಖಾಸಗಿ ಫೊಟೊಗಳಾಗಲಿ ಇಲ್ಲ ಎಂದು ಹೇಳಿದ್ದಾರೆ. ಜೀವನದಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಪದೇ ಪದೇ ಬಂದು ಅಡ್ಡಗಾಲು ಹಾಕುತ್ತಿದ್ದೀರಿ. ಬೃಂದಾವನ ಸೀರಿಯಲ್​​ನಲ್ಲಿ ನಟಿಸುತ್ತಿರುವ ಖ್ಯಾತ ನಟ ವರುಣ್ ಆರಾಧ್ಯ, ಕೊಲೆ ಬೆದರಿಕೆ, ಬ್ಲ್ಯಾಕ್​ ಮೇಲ್ ಮಾಡಿದ್ದಾನೆ, ಆತನ ವಿರುದ್ಧ ದೂರು ದಾಖಲಾಗಿದೆ, ಅರೆಸ್ಟ್ ಮಾಡಲಾಗಿದೆ. ಎಫ್‌ಐಆರ್ ಹಾಕಿದ್ದಾರೆ, ಜೈಲಿಗೆ ಹಾಕಿದ್ದಾರೆ ಎಂದೆಲ್ಲ ಪ್ರಸಾರವಾಗುತ್ತಿದೆ. ಈ ಸುಳ್ಳು ಸುದ್ದಿಗಳನ್ನು ಯಾಕೆ ಹಾಕುತ್ತಿದ್ದೀರ ಎಂಬುದು ಅರ್ಥವಾಗುತ್ತಿಲ್ಲ. ನಾನು ಆರಾಮಾಗಿ ಮನೆಯಲ್ಲೇ ಇದ್ದೀನಿ. ಅವರ ಪಾಡಿಗೆ ಅವರು ಇದ್ದಾರೆ. ನಾವೇನು ಮಾಡಿದ್ದೀವಿ ಅಂತ ನಮ್ಮನ್ನು ಕೇಳಿ, ನಾವೇ ಹೇಳುತ್ತೀವಿ. ನಮ್ಮ ಮನೆಯಲ್ಲಿ ಅಮ್ಮ ಅಕ್ಕ ಮತ್ತು ಪುಟ್ಟ ಹುಡುಗಿ ಇದ್ದಾಳೆ. ನಾನು ಯಾಕೆ ಬೇರೆ ಅವರ ಮನೆ ಹೆಣ್ಣುಮಗಳ ಮೇಲೆ ಆ ರೀತಿ ವರ್ತಿಸಲಿ. ಮನೆಯವರಿಗೆ ಬೇಸರ ಆದಾಗ ಕೈ ಕಾಲು ನಡುಗುತ್ತದೆ. ಕೈ ಮುಗಿದು ಕೇಳಿಕೊಳ್ಳುತ್ತೀನಿ. ನನ್ನನ್ನು ಇಲಿವರೆಗೂ ಬೆಳೆಸಿಕೊಂಡು ಬಂದಿದ್ದೀರಾ ಜೀವನದಲ್ಲಿ ಇನ್ನು ಸಾಧನೆ ಮಾಡಬೇಕು ಅನ್ನೋದು ನನ್ನ ಗುರಿಯಾಗಿದೆ. ಅದು ಬಿಟ್ಟು ನಾನು ಬ್ಲ್ಯಾಕ್​ಮೇಲ್ ಮಾಡುವುದು ಅದು ಇದು ಏನೂ ಇಲ್ಲ. ಏನೋ ಸಣ್ಣ ಗೊಂದಲದಿಂದ ನಾವು ಬ್ರೇಕಪ್ ಮಾಡಿಕೊಂಡಿರುವುದು ಅವರು ಬೇರೆ ಜೀವನ ನಡೆಸುತ್ತಿದ್ದಾರೆ. ನಾನು ಬೇರೆ ಜೀವನ ನಡೆಸುತ್ತಿರುವೆ. ತುಂಬಾ ಹಳೆಯ ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಿಲು ಹೇಳಿರುವುದು. ಜೀವನದಲ್ಲಿ ನಾವು ಮುಂದೆ ಬರಬೇಕು ತಲೆ ಕೆಡಿಸಿಕೊಂಡು ಕೆಲಸ ಮಾಡುತ್ತಿದ್ದೀನಿ ಎಂದು ವರುಣ್​ ಆರಾಧ್ಯ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಹೇಳಿದ್ದರು.

ವಾಟ್ಸ್​ಆ್ಯಪ್​ ಚಾಟ್​ ಬಹಿರಂಗ

ಈ ಎಲ್ಲ ಬೆಳವಣಿಗೆ ನಡುವೆ ಇದೀಗ ವರ್ಷಾ ಮತ್ತು ವರುಣ್​ ನಡುವೆ ನಡೆದಿದೆ ಎನ್ನಲಾದ ವಾಟ್ಸ್​​ಆ್ಯಪ್​ ಚಾಟ್​ ಸ್ಕ್ರೀನ್​ಶಾಟ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ವರುಣ್​, ತುಂಬಾ ಅಶ್ಲೀಲವಾಗಿ ಚಾಟ್​ ಮಾಡಿರುವುದು ಗೊತ್ತಾಗುತ್ತದೆ. ಅಷ್ಟಕ್ಕೂ ವಾಟ್ಸ್​ಆ್ಯಪ್​ ಚಾಟ್​ನಲ್ಲಿ ಏನಿದೆ ಅಂದರೆ, ನೋಡ್ತೀರಾ ನಾನು ನಿನ್ನನ್ನು ರೇಪ್ ಮಾಡುತ್ತೀನಿ, ನಾನು ಬರ್ಲಾ ನೀನು ನೋಡ್ತೀಯಾ? ಯಾರನ್ನು ಕರೆಯುತ್ತೀಯಾ ಕರೀ, ನಾನು ಒಬ್ಬನೇ ಬರುತ್ತೀನಿ, ಪೊಲೀಸ್‌ಗೂ ಫೋನ್‌ ಮಾಡಿ ನಾನು ಡೀಲ್ ಮಾಡ್ತೀನಿ, ನೀನು ಯಾರನ್ನು ಲವ್ ಮಾಡುತ್ತೀಯಾ ಅವರು ಅಂದೇ ಸತ್ತೋಗುತ್ತಾನೆ. ನೀನು ಲವ್ ಮಾಡಿದವನನ್ನು ಬೆಳಗ್ಗೆನೇ ಮರ್ಡರ್ ಮಾಡ್ತೀನಿ. ನನ್ನ ಬಳಿ ಪವರ್​ ಇದೆ. ನನ್ನ ಹತ್ರ ಎಲ್ಲನೂ ಇದೆ. ಬೆಳಗ್ಗೆನೇ ನಿನ್ನನ್ನು ಪ್ರೆಗ್ನೆಂಟ್ ಮಾಡ್ತೀನಿ ಎಂದೆಲ್ಲ ಕೆಟ್ಟದಾಗಿ ವರುಣ್​ ಮೆಸೇಜ್​ ಮಾಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಉತ್ತರಿಸಿರುವ ವರ್ಷಾ, ನಿನ್ನ ಆಟವೆಲ್ಲ ನಮ್ರತಾ ಹತ್ರ ಇಟ್ಕೋ, ನನ್ನ ಹತ್ರ ಬೇಡ ಎಂದಿದ್ದಾಳೆ. ಅರ್ಹತೆ ಇರುವ ವ್ಯಕ್ತಿಗೆ ನಾನು ಎಲ್ಲವನ್ನು ಅರ್ಪಿಸುತ್ತೇವೆ. ನನ್ನ ಜೀವನದಲ್ಲಿ ನೀನು ಇರಲ್ಲ ಎಂದು ಮೆಸೇಜ್​ ಮಾಡಿದ್ದಾಳೆ ಎನ್ನಲಾಗಿದೆ.

ಅಂದಹಾಗೆ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡಿ ಖ್ಯಾತಿ ಪಡೆದಿರುವ ವರುಣ್‌ ಆರಾಧ್ಯಾ ಹಾಗೂ ವರ್ಷಾ ಕಾವೇರಿ ಸದ್ಯ ದೂರವಾಗಿರುವ ಹಕ್ಕಿಗಳಾಗಿದ್ದಾರೆ. ಅವರಿಬ್ಬರೂ ದೂರವಾಗಿರುವುದಕ್ಕೆ ಕಾರಣ ವರುಣ್‌ ಅವರು ಬೇರೆ ಯಾವುದೋ ಹುಡುಗಿಯ ಜೊತೆ ಸಂಬಂಧ ಹೊಂದಿರುವುದು ಎಂದು ಹೇಳಲಾಗಿತ್ತು. ಇನ್ನು ಇನ್​ಸ್ಟಾಗ್ರಾಂ ಪ್ರೊಫೈಲ್​ ಪ್ರಕಾರ ವರ್ಷಾ ಕಾವೇರಿ, ಮೇಕಪ್​ ಆರ್ಟಿಸ್ಟ್​ ಮತ್ತು ಕ್ರಿಯೇಟಿವ್​ ಕ್ರಿಯೆಟರ್​. 6 ಲಕ್ಷ ಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಅವರ ಖಾತೆಯಲ್ಲಿ ವರುಣ್​ ಜತೆಗೆ ರೀಲ್ಸ್​ ಮಾಡಿದ ವಿಡಿಯೋಗಳೇ ತುಂಬಿರುತ್ತಿದ್ದವು. ಆದರೆ, ಎಲ್ಲವನ್ನು ಡಿಲೀಟ್​ ಮಾಡಿದ್ದಾರೆ.

ಬ್ರೇಕಪ್​ ಬಗ್ಗೆ ಸ್ಪಷ್ಟನೆ

ಎಲ್ಲರಿಗೂ ನಮಸ್ಕಾರ ಹಲವು ದಿನಗಳಿಂದ ನೀವೆಲ್ಲ ಕೇಳುತ್ತಿದ್ದ ಒಂದೇ ಒಂದು ಸಾಮಾನ್ಯ ಪ್ರಶ್ನೆ ಏನೆಂದರೆ ನನ್ನ ಮತ್ತು ವರುಣ್​ ನಡುವೆ ಏನಾಯಿತು ಎಂದು. ನಾನಿಂದು ಅದರ ಬಗ್ಗೆ ಮಾತನಾಡುತ್ತೇನೆ. ನಾನು ಮತ್ತು ವರುಣ್​ ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ, ನಿಮಗೆ ಗೊತ್ತಿಲ್ಲದ ಸಂಗತಿ ಏನೆಂದರೆ ವರುಣ್​ ನನ್ನನ್ನು ಬಿಟ್ಟು ಮತ್ತೊಂದು ಹುಡುಗಿಯನ್ನು ಲವ್​ ಮಾಡುತ್ತಿದ್ದಾರೆ. ನಾನಿಲ್ಲಿ ಆ ಹುಡುಗಿಯ ಹೆಸರನ್ನು ಹೇಳಿ ಆಕೆಯ ಜೀವನವನ್ನು ಹಾಳು ಮಾಡಲು ಬಯಸುವುದಿಲ್ಲ. ಇದೇ ವಿಚಾರವಾಗಿ ನಮ್ಮಿಬ್ಬರ ನಡುವೆ ಸಾಕಷ್ಟು ಬಾರಿ ವಾಗ್ವಾದ ನಡೆದಿದೆ. ಅವನಿಗೆ ಎಷ್ಟು ಬಾರಿ ಹೇಳಿದರೂ ಆ ಹುಡುಗಿಯನ್ನು ಬಿಡಲು ತಯಾರಿಲ್ಲ. ನಾನು ನಿನ್ನನ್ನು ಪ್ರೀತಿಸಲು ಬಯಸುವುದಿಲ್ಲ, ನಾನು ಆ ಹುಡುಗಿಯೊಂದಿಗೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಆತ ಹೇಳಿದಾಗ ಅದು ನನಗೆ ತುಂಬಾ ನೋವುಂಟು ಮಾಡಿದೆ. ಅದಕ್ಕಾಗಿಯೇ ನಾನು ಕಳೆದ ಕೆಲವು ತಿಂಗಳುಗಳಿಂದ ನನ್ನ ಮತ್ತು ವರುಣ್‌ನ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿಲ್ಲ. ನಮ್ಮನ್ನು ಪ್ರೀತಿಸುವವರಿಗೆ ಈ ವಿಚಾರವನ್ನು ಹೇಳದಿದ್ದರೆ ನಾನೇ ಮೋಸ ಮಾಡಿಕೊಂಡಂತೆ ಅನಿಸುತ್ತದೆ. ಹೀಗಾಗಿ ನಾನಿಂದು ನಿಮಗೆ ತಿಳಿಸುತ್ತಿದ್ದೇನೆ. ಇನ್ನು ಮುಂದೆ ನನ್ನ ಮತ್ತು ವರುಣ್​ ನಡುವೆ ಯಾವುದೇ ಪ್ರೇಮ ಸಂಬಂಧ ಇರುವುದಿಲ್ಲ. ಅವನು ಆ ಹುಡುಗಿಯೊಂದಿಗೆ ಸಂತೋಷವಾಗಿರಲಿ. ನನ್ನ ಕುಟುಂಬ ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದೆ. ನಾನು ಅವರಿಗಾಗಿ ನನ್ನ ಜೀವನವನ್ನು ನಡೆಸಬೇಕಿದೆ. ಹೀಗಾಗಿ ನನಗೆ ಅನಿಸಿದ್ದನ್ನು ನಿಮಗೆ ಹೇಳಿದ್ದೇನೆ. ಇನ್ನು ಮುಂದೆ ನನ್ನ ಜೀವನವೇ ನನ್ನ ಮಾರ್ಗವಾಗಿದ್ದು, ನೀವು ಇದನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ ಮತ್ತು ಇನ್ನು ಮುಂದೆಯೂ ನನ್ನನ್ನು ಬೆಂಬಲಿಸಿ, ಧನ್ಯವಾದಗಳು ಎಂದು ವರ್ಷಾ ಈ ಹಿಂದೆ ಸುದೀರ್ಘವಾಗಿ ಬರೆದುಕೊಂಡಿದ್ದರು.

ಈ ಪ್ರಕರಣ ಮತ್ತೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.