ಮುಂಬೈ: ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರದ 'ಬೇಷರಮ್ ರಂಗ್' ಹಾಡಿನ ಬಗ್ಗೆ ಸಾಕಷ್ಟು ವಿವಾದಗಳಾಗಿವೆ. ಆ ಹಾಡನ್ನು ಡಿಲೀಟ್ ಮಾಡಬೇಕು, ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ, ಚಿತ್ರ ಮತ್ತು ಹಾಡು ನೋಡಿರುವ ಸೆನ್ಸಾರ್ ಮಂಡಳಿಯು ಒಂದಿಷ್ಟು ಬದಲಾವಣೆಗಳನ್ನು ಸೂಚಿಸಿದ್ದು, ಆ ಬದಲಾಗವಣೆಗಳನ್ನು ಅಳವಡಿಸಿಕೊಂಡು, ತಂದು ಚಿತ್ರ ತೋರಿಸಬೇಕು ಎಂದು ಸೂಚಿಸಿದೆ.
ಇತ್ತೀಚೆಗೆ ಚಿತ್ರು ಸೆನ್ಸಾರ್ ಅಂಗಳಕ್ಕೆ ಹೋಗಿದೆ. ಚಿತ್ರವನ್ನು ನೋಡಿರುವ ಸೆನ್ಸಾರ್ ಮಂಡಳಿಯು ಒಂದಿಷ್ಟು ಬದಲಾವಣೆಗಳನ್ನು ಸೂಚಿಸಿದ್ದು, ಆ ಬದಲಾವಣೆಗಳನ್ನು ಮಾಡಿಕೊಂಡು ಬರಬೇಕು ಎಂದು ಚಿತ್ರತಂಡದವರಿಗೆ ಹೇಳಿದ್ದೇವೆ ಎಂದು ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಷಿ ತಿಳಿಸಿದ್ದಾರೆ. ಆದರೆ, ಏನೆಲ್ಲಾ ಬದಲಾವಣೆಗಳನ್ನು ಸೂಚಿಸಿದೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
ಈ ಕುರಿತು ಮಾತನಾಡಿರುವ ಅವರು, 'ಸೆನ್ಸಾರ್ ನಿಯಮಗಳ ಪ್ರಕಾರವೇ ಸಮಿತಿಯು ಚಿತ್ರವನ್ನು ನೋಡಿದ್ದು, ಒಂದಿಷ್ಟು ಬದಲಾವಣೆಗಳನ್ನು ಹೇಳಿದೆ. ಚಿತ್ರತಂಡದವರು ಆ ಬದಲಾವಣೆಗಳನ್ನು ಅಳವಡಿಸಿ ತಂದು ಚಿತ್ರವನ್ನು ತೋರಿಸಬೇಕು ಎಂದು ಹೇಳಿದ್ದೇವೆ. ಚಿತ್ರತಂಡದವರು ಸೂಚಿಸದ ಬದಲಾವಣೆಗಳನ್ನು ಮಾಡಿಕೊಂಡು ಬರುವ ನಂಬಿಕೆ ಇದೆ' ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, 'ಪಠಾಣ್' ಚಿತ್ರದ 'ಬೇಷರಮ್ ರಂಗ್'ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದಾರೆ ಎಂಬ ಕಾರಣಕ್ಕೆ ವಿವಾದವೆದ್ದಿತ್ತು. ಬಹುಭಾಷಾ ನಟ ಪ್ರಕಾಶ್ ರೈ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತೆ ಆಶಾ ಪರೇಖ್ ಸೇರಿದಂತೆ ಹಲವರು ಚಿತ್ರತಂಡಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸುವುದರ ಜತೆಗೆ, ಈ ರೀತಿ ಪ್ರತಿಯೊಂದು ವಿಷಯಕ್ಕೂ ತಗಾದೆ ತೆಗೆದರೆ, ಆಗ ಚಿತ್ರ ಮಾಡುವುದೇ ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.