ಹೈದರಾಬಾದ್: ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ' ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂಬ ವಿಷಯ ಈಗಾಗಲೇ ಗೊತ್ತಿದೆ. ಈ ಪೈಕಿ ಮೊದಲ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಬಾಕಿ ಉಳಿದ ಚಿತ್ರೀಕರಣವನ್ನು ಸದ್ಯದಲ್ಲೇ ಹೈದರಾಬಾದ್ನಲ್ಲಿ ಮುಗಿಸುವುದಕ್ಕೆ ಚಿತ್ರತಂಡದವರು ಪ್ಲಾನ್ ಮಾಡಿಕೊಂಡಿದ್ದಾರೆ.
ಈ ಮಧ್ಯೆ, 'ಪುಷ್ಪಾ' ಚಿತ್ರವು ಯಶ್ ಅಭಿನಯದ 'ಕೆಜಿಎಫ್'ಗಿಂತ 10 ಪಟ್ಟು ದೊಡ್ಡದಾಗಿರುತ್ತದೆ ಎಂದು ಬುಚ್ಚಿ ಬಾಬು ಸನಾ ಹೇಳಿಕೊಂಡಿದ್ದಾರೆ. ಈ ಬುಚ್ಚಿ ಬಾಬು ಯಾರು ಎಂಬ ಪ್ರಶ್ನೆ ಬರುವುದು ಸಹಜ. ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಕೃತಿ ಶೆಟ್ಟಿ ಅಭಿನಯದ 'ಉಪ್ಪೆನಾ' ಎಂಬ ಚಿತ್ರದ ನಿರ್ದೇಶಕ ಅವರು. 'ಉಪ್ಪೆನಾ' ನಿರ್ದೇಶಿಸುವುದಕ್ಕಿಂತ ಮುನ್ನ ಅವರು, ನಿರ್ದೇಶಕ ಸುಕುಮಾರ್ ಅವರ ಸಹಾಯಕರಾಗಿದ್ದರು. ಈಗ ಅದೇ ಸುಕುಮಾರ್, 'ಪುಷ್ಪಾ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇತ್ತೀಚೆಗೆ, ಬುಚ್ಚಿ ಬಾಬುಗೆ 'ಪುಷ್ಪಾ' ಚಿತ್ರದ ರಶಸ್ ನೋಡುವ ಅವಕಾಶ ಸಿಕ್ಕಿತ್ತಂತೆ. ರಶಸ್ ನೋಡಿ ಫುಲ್ ಫಿದಾ ಆಗಿರುವ ಅವರು, ಚಿತ್ರ ಸಖತ್ತಾಗಿ ಬಂದಿದೆ ಎಂದು ಹೇಳಿರುವುದಷ್ಟೇ ಅಲ್ಲ, 'ಕೆಜಿಎಫ್'ಗಿಂತ 10 ಪಟ್ಟು ದೊಡ್ಡದಾಗಿ ಮೂಡಿಬಂದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂಬ ಮಾತನ್ನು ಅವರು ಆಡಿದ್ದಾರೆ.
'ಪುಷ್ಪಾ' ಚಿತ್ರದ ಮೊದಲ ಭಾಗ ಈ ವರ್ಷದ ಕೊನೆಗೆ ಬಿಡುಗಡೆಯಾಗಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಎರಡನೆಯ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಚಿತ್ರದಲ್ಲಿ ಅಲ್ಲು ಅರ್ಜುನ್ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ಮಿಕ್ಕಂತೆ ಮಲಯಾಳಂ ನಟ ಫಹಾದ್ ಫಾಸಿಲ್ ಹಾಗೂ ಕನ್ನಡಿಗ ಡಾಲಿ ಧನಂಜಯ್, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.