ರಾಬರ್ಟ್‌ ನಿರ್ಮಾಪಕನ ಕೊಲೆ ಸ್ಕೆಚ್‌ ಹಾಕಿ ನೇಪಾಳದಲ್ಲಿ ಕುಳಿತ ‘ಕರಿ ಬಾಸ್‌’ ಸಿಕ್ಕಿಬಿದ್ದದ್ದೇ ರೋಚಕ...

robert
Published on

ಬೆಂಗಳೂರು: ರಾಬರ್ಟ್‌ ಸೇರಿದಂತೆ ಹಲವಾರು ಖ್ಯಾತ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಅವರ ಕೊಲೆಗೆ ಸ್ಕೆಚ್‌ ಹಾಕಿದ್ದ ರಾಜೇಶ್ ಅಲಿಯಾಸ್‌ ಕರಿಯ ರಾಜೇಶ್ ಎಂಬ ರೌಡಿ ಶೀಟರ್‌ ಇದಾಗಲೇ ಸಿಕ್ಕಿಬಿದ್ದಿದ್ದಾನೆ.

ಇನ್ನೊಬ್ಬ ರೌಡಿ ಬಾಂಬೆ ರವಿ ರೈಟ್ ಹ್ಯಾಂಡ್ ರಾಜೇಶ್ ಪೊಲೀಸರ ಕೈಗೆ ಸಿಕ್ಕಿಬಿದ್ದದ್ದೇ ರೋಚಕ. ಪುಡಿ‌ ರೌಡಿಯಾಗಿದ್ದ ಈತ ಇಂಟರ್‌ನ್ಯಾಷನಲ್‌ ರೂಲರ್ ಆಗಲು ಹೋಗಿ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ಸ್ಕ್ವಾಡ್‌ನಿಂದ ಈತ ಸಿಕ್ಕಿಬಿದ್ದಿದ್ದಾನೆ.

ಅಷ್ಟಕ್ಕೂ ಈ ರಾಜೇಶ್‌ ಯಾರು? ನಿರ್ಮಾಪಕನ ಕೊಲೆಗೆ ಸ್ಕೆಚ್‌ ಹಾಕಿದ್ದು ಹೇಗೆ? ಈತನನ್ನು ಪೊಲೀಸರು ಸೆರೆ ಹಿಡಿದಿದ್ದು ಹೇಗೆ ಎಂಬೆಲ್ಲಾ ಪ್ರಶ್ನೆಗಳಿಗೆ ಪೊಲೀಸರು ಉತ್ತರ ನೀಡಿದ್ದು ಹೀಗೆ:

ಹಳೆಯ ರೌಡಿ ಪರಂಧಾಮಯ್ಯನ ಶಿಷ್ಯ ಈ ರಾಜೇಶ್. ಸೌತ್ ಬಾಸ್ ಎಂದು ಶಿಷ್ಯಂದಿರಿಂದ ಕರೆಸಿಕೊಂಡು ಅದೇ ಹೆಸರಿನಲ್ಲಿ ಈತ ಫೇಮಸ್‌ ಆಗಿದ್ದ. ಈತನ ಗ್ಯಾಂಗ್‌ಗೆ ಇನ್ನೊಂದು ರೌಡಿ ಗ್ಯಾಂಗ್‌ ಆಗಿರುವ ಕತ್ರಿಗುಪ್ಪೆ ಲಿಂಗ ಮತ್ತು ಬಾಂಬೆ ರವಿ ನಡುವೆ ವೈರತ್ವ ಇತ್ತು. ಈ ಕತ್ರಿಗುಪ್ಪೆ ಲಿಂಗನ ಸಹಚರ ಸೈಕಲ್ ರವಿ. ಹೀಗಾಗಿ ಆತನ ಮೇಲೆ ಬಾಂಬೆ ರವಿಗೆ ಭಾರಿ ಜಿದ್ದು.

ಇದು ಒಂದು ಕಡೆಯಾದರೆ, ಈ ಸೈಕಲ್‌ ರವಿ ಜತೆ ನಿರ್ಮಾಪಕ ಉಮಾಪತಿ ಮತ್ತು ಅವರ ಸಹೋದರನ ಒಡನಾಟವಿತ್ತು ಎನ್ನಲಾಗಿದೆ. ಹೀಗಾಗಿ ಬಾಂಬೆ ರವಿ ಜತೆ ಸೇರಿ ಇಂಟರ್‌ನ್ಯಾಷನಲ್‌ ಕಿಲಾಡಿಯಂತೆ ಬೆಳೆದ ಕರಿಯ ರಾಜೇಶ್, ಬಾಂಬೆ ರವಿ ಅಣತಿಯಂತೆ ನಿರ್ಮಾಪಕನ ಕೊಲೆಗೆ ಸ್ಕೆಚ್‌ ಹಾಕಿದ್ದ.

ಅವರನ್ನು ಕೊಲೆ ಮಾಡಲು ಕಳೆದ ವರ್ಷ ಪ್ರಯತ್ನಿಸಲಾಗಿತ್ತು. ಆದರೆ ಅದು ಸಫಲ ಆಗಿರಲಿಲ್ಲ. ಪೊಲೀಸರು ತನ್ನ ಬೆನ್ನ ಬೀಳಬಹುದು ಎಂಬ ಕಾರಣಕ್ಕೆ ರಾಜೇಶ್‌ ಎಸ್ಕೇಪ್‌ ಆಗಿದ್ದ. ಈತನನ್ನು ಬಂಧಿಸಲು

ಪೊಲೀಸರಿಂದ ಸ್ಪೆಷಲ್ ಟೀಂ ರೆಡಿಯಾಗಿತ್ತು. ದಕ್ಷಣ ವಿಭಾಗದ ಪೊಲೀಸರಿಂದ ‘ಆಪರೇಷನ್ ಬ್ಲ್ಯಾಕ್ ಡಾಗ್’ ಶುರುವಾಯ್ತು. ಈ ಕರಿಯ ರಾಜೇಶ್‌ನಿಗೆ ಪೊಲೀಸರು ಬ್ಲ್ಯಾಗ್‌ ಡಾಕ್‌ ಎಂದು ಹೆಸರಿಟ್ಟು ‘ಆಪರೇಷನ್ ಬ್ಲ್ಯಾಕ್ ಡಾಗ್’ ಶುರು ಮಾಡಿದರು.

ನಿರಂತರವಾಗಿ ಕರಿಯ ರಾಜೇಶ್‌ನ ಹುಡುಕಾಟದಲ್ಲಿ ತೊಡಗಿದ್ದರು ಪೊಲೀಸರು. ನಂತರ ಆತ ನೇಪಾಳದಲ್ಲಿ ಅಡಗಿ ಕುಳಿತಿರುವುದು ತಿಳಿಯಿತು. ದೇಶದಲ್ಲಿ ಕ್ರಿಮಿನಲ್‌ ಚಟುವಟಿಕೆ ನಡೆಸಿ ನೇಪಾಳಕ್ಕೆ ಎಸ್ಕೇಪ್ ಆಗೋದು ಆರೋಪಿಗಳ ಮಾಮೂಲಿ‌ ಚಾಳಿ. ನೇಪಾಳದಲ್ಲಿ ಏಕಾಏಕಿ ಬೆಂಗಳೂರು ಪೊಲೀಸರು ಹೋಗಿ ಆಪರೇಟ್ ಮಾಡೋದು ಅಷ್ಟು ಸುಲಭವಲ್ಲ. ಹಾಗಾಗಿ ತಾನು ಸೇಫ್ ಅಂದುಕೊಂಡಿದ್ದ. ಬೆಂಗಳೂರಿನಲ್ಲಿ ಆತ ಯಾರ ಜೊತೆ ಸಂಪರ್ಕದಲ್ಲಿದ್ದಾನೆಂದು ಪತ್ತೆ ಹಚ್ಚುತ್ತಿದ್ದ ಪೊಲೀಸರಿಗೆ ಈತ ನೇಪಾಳದಲ್ಲಿ ಇರುವುದು ತಿಳಿದಿದೆ. ಆದ್ದರಿಂದ ಪೊಲೀಸರು ಬಿಡಲಿಲ್ಲ. ಅಲ್ಲಿಯ ಸ್ಥಳೀಯ ಪೊಲೀಸರ ಸಹಾಯ ಪಡೆದು ಆರೋಪಿ ಬಂಧಿಸಿದ್ದಾರೆ. ಸದ್ಯ ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net