ಸಿನಿವಾಣಿ

ಮಂಚಕ್ಕೆ ಕರೆಯುವ ಮೈದುನ, ಅಡ್ಜಸ್ಟ್​ ಮಾಡ್ಕೋ ಎಂದ ಗಂಡ! ಕೋರ್ಟ್​ ಮೆಟ್ಟಿಲೇರಿ ಕಣ್ಣೀರಿಟ್ಟ ನಟಿ

ಚೆನ್ನೈ: ಪತಿಯ ಸಹೋದರನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕೋರಿ ತಮಿಳಿನ ಖ್ಯಾತ ಕಿರುತೆರೆ ಕಲಾವಿದೆ ದೀಪಾ ಅವರು ಚೆನ್ನೈ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ನಟಿ ದೀಪಾ ಅವರು ಅನ್ಬೆ ಶಿವಂ, ಅಥಿಪೂಕ್ಕಮ್​, ನಾಮ್​ ಇರುವರ್​ ನಾಖು ಇರುವರ್​, ಪ್ರಿಯಾಮನ ದೋಷಿ, ಅಂದಾಲ್​ ಅಳಘರ್​ ಮತ್ತು ಪಾಗಲ್​ ನಿಲವು ಸೇರಿದಂತೆ ಪ್ರಮುಖ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಯ ಮೂಲಕವೇ ದೀಪಾ ಅವರು ಕಾಲಿವುಡ್​ ಕಿರುತೆರೆ ಲೋಕದಲ್ಲಿ ಖ್ಯಾತಿ ಪಡೆದಿದ್ದಾರೆ.

ಕಳೆದ ವರ್ಷ ದೀಪಾ ಅವರು ಪ್ರೊಡಕ್ಷನ್​ ಮ್ಯಾನೇಜರ್​ ಸಾಯಿ ಗಣೇಶ್​ ಎಂಬುವರನ್ನು ರಿಜಿಸ್ಟರ್​ ಮದುವೆಯಾದರು. ಗಣೇಶ್​ ಅವರು ಪಾಂಡಿಯನ್​ ಸ್ಟೋರ್​, ಭಾಗ್ಯಲಕ್ಷ್ಮೀ, ವಿಕ್ರಮ್​ ವೇದ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಪ್ರೊಡಕ್ಷನ್​ ಮ್ಯಾನೇಜರ್​ ಆಗಿ ಕೆಲಸ ಮಾಡಿದ್ದಾರೆ.

ಇದೀಗ ದೀಪಾ ಅವರು ತಮ್ಮ ಗಂಡನ ಸಹೋದರನ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಚೆನ್ನೈ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಗಂಡನ ಮನೆಯಲ್ಲಿ ತನಗಾಗುತ್ತಿರುವ ಕಿರುಕುಳವನ್ನು ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನದಲ್ಲಿ ದೀಪಾ ಬಿಚ್ಚಿಟ್ಟರು. ಕಳೆದ ವರ್ಷ ನಾವಿಬ್ಬರು ಮದುವೆಯಾದೆವು. ನಾನು ಅನ್ಯಜಾತಿಯವಳು ಎಂಬ ಕಾರಣಕ್ಕೆ ನನ್ನ ಗಂಡನ ಸಹೋದರ ಮತ್ತು ಅತ್ತೆ ನನ್ನನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ.

ನನ್ನ ಆಭರಣಗಳನ್ನೆಲ್ಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದಿಷ್ಟೇ ಅಲ್ಲದೆ, ನನ್ನ ಗಂಡನ ಸಹೋದರ ರಾಮಕೃಷ್ಣನ್​, ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ನನ್ನೊಂದಿಗೆ ಬಾ, ಜತೆಯಲ್ಲಿ ಮಲಗು ಒತ್ತಾಯಿಸುತ್ತಿದ್ದಾನೆ. ನನ್ನ ಸಹೋದರನ ಬಗ್ಗೆ ನೀನು ತಲೆ ಕೆಡಿಸಿಕೊಳ್ಳಬೇಡ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ.

ಈ ವಿಚಾರವನ್ನು ನಾನು ನನ್ನ ಗಂಡನ ಬಳಿ ಹೇಳಿದೆ. ಆದರೆ, ಅವರು ಯಾವುದಕ್ಕೂ ಕ್ಯಾರೆ ಎನ್ನದೆ ಎಲ್ಲವನ್ನು ಹೊಂದಾಣಿಕೆ ಮಾಡಿಕೊಂಡು ಹೋಗು, ನನ್ನನ್ನು ನೆಮ್ಮದಿಯಾಗಿ ಇರಲು ಬಿಡು ಎನ್ನುತ್ತಾರೆ. ಕಟುಂಬದ ಜತೆ ಇರುವಂತೆ ನನ್ನನ್ನು ಒತ್ತಾಯಿಸುತ್ತಿದ್ದಾರೆ. ನನಗೀಗ ನನ್ನ ತಂದೆಯ ಬೆಂಬಲ ಮಾತ್ರ ಇದೆ. ಆದರೆ, ಈ ಸಮಸ್ಯೆಯಿಂದ ನನ್ನ ತಂದೆಗೆ ಏನಾದರೂ ತೊಂದರೆಯಾಗುತ್ತದೆ ಎಂಬ ಭಯವಾಗುತ್ತಿದೆ ಎಂದು ದೀಪಾ ಹೇಳಿಕೊಂಡಿದ್ದಾರೆ.

ಗಂಡನ ಸಹೋದರನ ವಿರುದ್ಧ ಸಾಕಷ್ಟು ಬಾರಿ ದೂರು ನೀಡಿದರೂ ಹಣ ಕೊಟ್ಟು ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳುತ್ತಿದ್ದಾನೆ. ನನಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ನಾನು ಕೋರ್ಟ್​ ಮೆಟ್ಟಿಲೇರಿದ್ದೇನೆ ಎಂದು ದೀಪಾ ಹೇಳಿದ್ದಾರೆ.

ಅಂದಹಾಗೆ ದೀಪಾಗೆ ಇದು ಎರಡನೇ ಮದುವೆ. ಈಗಾಗಲೇ ಮದುವೆಯಾಗಿ ಡಿವೋರ್ಸ್​ ಆಗಿದೆ. 15 ವರ್ಷದ ಮಗನೂ ಸಹ ಇದ್ದಾನೆ. ಹೀಗಾಗಿ ದೀಪಾ ಜತೆಗಿನ ಮದುವೆಗೆ ಗಣೇಶ್​ ಕುಟುಂಬದ ವಿರೋಧ ಇತ್ತು. (ಏಜೆನ್ಸೀಸ್​)