ಸಿನಿವಾಣಿ

ಪುನೀತ್​ ರಾಜಕುಮಾರ್​ ಸ್ಮಾರಕ ನಿರ್ಮಾಣ; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

ಬೆಂಗಳೂರು: ಪುನೀತ್​ ರಾಜಕುಮಾರ್​ ಅವರ ಹೆಸರಲ್ಲಿ ಸ್ಮಾರಕ ನಿರ್ಮಿಸುವ ಯೋಚನೆ ಇದೆ. ನಮ್ಮ ಸಕಾಘರದ ಮೂಲಕ ಅದನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಾಯಂಡಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟದವರೆಗೂ ಇರುವ 12 ಕಿ.ಮೀ ರಸ್ತೆಗೆ ಪುನೀತ್​ ರಾಜಕುಮಾರ್​ ಹೆಸರು ನಾಮಕರಣ ಮಾಡಿ ಮಾತನಾಡಿರುವ ಅವರು, 'ಅಪ್ಪು ಅವರನ್ನು ನಾನು ಚಿಕ್ಕವಯಸ್ಸಿನಿಂದ ನೋಡಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದವರನ್ನ ನಾನು ನೋಡಿದ್ದೇನೆ.ಅಪ್ಪು ಕೂಡ ಚಿಕ್ಕವಯಸ್ಸಿನಲ್ಲೇ ಸಾಧಿಸಿ ಹೋದವರು. ಅಪ್ಪು ಅಗಲಿದಾಗ ಜನಸಾಗರವೇ ಹರಿದು ಬಂತು. ಕೆಲವು ದಿನಗಳ ಹಿಂದೆ ನಾನು ಬೀದರ್​ಗೆ ಹೋಗಿದ್ದೆ. ಅಲ್ಲಿನ ಜನ ಅಪ್ಪು ಫೋಟೋ ಹಿಡಿದು ನಮ್ಮ ಬಳಿ ಫೋಟೋ ತೆಗೆಸಿಕೊಳ್ಳಿ ಎಂದ ಗಲಾಟೆ ಮಾಡಿದರು. ಅಪ್ಪು ನಿಜವಾದ ಸಾಧಕ. ಸಾವಿನ ನಂತರವು ನೆನಪಿನಲ್ಲಿ ಇರೋರು ನಿಜವಾದ ಸಾಧಕ' ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಟ ಹಾಗೂ ಪುನೀತ್​ ಸಹೋದರ ರಾಘವೇಂದ್ರ ರಾಜಕುಮಾರ್​, 'ಕೆಲವು ಕಾರ್ಯಕ್ರಮಗಳಲ್ಲಿ ಸಂತೋಷ ಪಡಬೇಕೋ, ಕಣ್ಣೀರು ಹಾಕಬೇಕೋ ಗೊತ್ತಾಗುವುದಿಲ್ಲ. ಆ ಸಂದಿಗ್ಧ ಪರಿಸ್ಥಿತಿ ಇವತ್ತು ಸಹ ಇದೆ. ಕೋಟ್ಯಾಂತರ ಜನರ ಮಧ್ಯೆ ನಾನ್ಯಾಕೆ ಅಪ್ಪುಗೆ ಅಣ್ಣನಾಗಿ ಹುಟ್ಟಿದೆ ಅಂತ ಯಾವಾಗಲೂ ಕಾಡುತ್ತದೆ. ಅಪ್ಪು ಇನ್ನು ಸಾಕಷ್ಟು ಕೆಲಸಗಳು ಮಾಡೋದಿತ್ತು. ಆದರೆ, ಆ ಕೆಲಸಗಳನ್ನು ನಮಗೆ ವಹಿಸಿ ಹೋಗಿದ್ದಾನೆ. ಅಪ್ಪು ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ನಾನು ಅದೇ ದಾರಿಯಲ್ಲಿ ಸಾಗುತ್ತೇನೆ' ಎಂದರು.

ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಸಚಿವ ಆರ್. ಅಶೋಕ್​, ಅಶ್ವಿನಿ ಪುನೀತ್​ ರಾಜಕುಮಾರ್​ ಸೇರಿದಂತೆ ಹಲವರು ಭಾಗವಹಿಸಿದ್ದರು.