ಫೈಟರ್​ ಸೀತೆ ರಾವಣನ ವಿರುದ್ಧ ಏಕೆ ಹೋರಾಡಲಿಲ್ಲ? ರಾಮಾಯಣ ತಂಡದ ವಿರುದ್ಧ ಮುಕೇಶ್ ಖನ್ನಾ ಆಕ್ರೋಶ! 
ಬಾಲಿವುಡ್

ಫೈಟರ್​ ಸೀತೆ ರಾವಣನ ವಿರುದ್ಧ ಏಕೆ ಹೋರಾಡಲಿಲ್ಲ? ರಾಮಾಯಣ ತಂಡದ ವಿರುದ್ಧ ಮುಕೇಶ್ ಖನ್ನಾ ಆಕ್ರೋಶ! Ramayana

ತಾವು ಇನ್ನೂ ಈ ಸಿನಿಮಾವನ್ನು ಪೂರ್ಣವಾಗಿ ವೀಕ್ಷಿಸಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ವಿಮರ್ಶೆಗಳು ಹಾಗೂ ವೀಕ್ಷಕರ ಕಾಮೆಂಟ್‌ಗಳನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ ಎಂದು ಮುಕೇಶ್ ಖನ್ನಾ ಹೇಳಿದ್ದಾರೆ.

ಮುಂಬೈ: ನವೆಂಬರ್​ 5ರಂದು ವಿಶ್ವದಾದ್ಯಂತ ತೆರೆಕಂಡು ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ​ ಬಿಗ್​ ಬಜೆಟ್​ 'ರಾಮಾಯಣ' ( Ramayana ) ಸಿನಿಮಾದಲ್ಲಿ ಸೀತಾದೇವಿ ಪಾತ್ರವನ್ನು ಚಿತ್ರಿಸಿರುವ ರೀತಿಯ ವಿರುದ್ಧ ಶಕ್ತಿಮಾನ್​ ಖ್ಯಾತಿಯ ಬಾಲಿವುಡ್‌ ಹಿರಿಯ ನಟ ಮುಕೇಶ್ ಖನ್ನಾ ಕಟುವಾಗಿ ಟೀಕಿಸಿದ್ದಾರೆ. ಖನ್ನಾ ಅವರು ಆಡಿರುವ ಮಾತುಗಳು ಬಾಲಿವುಡ್​ ಚಿತ್ರರಂಗದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಸೀತಾದೇವಿಯ ಪಾತ್ರದಲ್ಲಿ ಅಭಿನಯಿಸಿದ್ದು, ಸೀತೆಯನ್ನು 'ಫೈಟರ್' (ಹೋರಾಟಗಾರ್ತಿ) ಮಾದರಿಯಲ್ಲಿ ತೋರಿಸಿರುವುದಕ್ಕೆ ಮುಕೇಶ್ ಖನ್ನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ಈ ಕುರಿತು ಮಾತನಾಡಿದ ಅವರು, ಆಧುನಿಕ ಆಲೋಚನೆಗಳಿಗೆ ತಕ್ಕಂತೆ ನಮ್ಮ ಪವಿತ್ರ ಮಹಾಕಾವ್ಯಗಳನ್ನು ಬದಲಾಯಿಸುವುದು ಮತ್ತು ಕಲಾತ್ಮಕ ಸ್ವಾತಂತ್ರ್ಯದ ಹೆಸರಿನಲ್ಲಿ ಮೂಲ ಕಥೆಯನ್ನು ತಿರಚುವುದು ಸಂಪೂರ್ಣ ತಪ್ಪು ಎಂದು ಖಂಡಿಸಿದ್ದಾರೆ.

ತಾವು ಇನ್ನೂ ಈ ಸಿನಿಮಾವನ್ನು ಪೂರ್ಣವಾಗಿ ವೀಕ್ಷಿಸಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ವಿಮರ್ಶೆಗಳು ಹಾಗೂ ವೀಕ್ಷಕರ ಕಾಮೆಂಟ್‌ಗಳನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ ಎಂದು ಮುಕೇಶ್ ಖನ್ನಾ ಹೇಳಿದ್ದಾರೆ. ಸಿನಿಮಾದಲ್ಲಿ ಸೀತಾದೇವಿಯು ರಾಕ್ಷಸರ ವಿರುದ್ಧ ಕರಾಟೆ ಮಾಡುತ್ತಾ, ಖಡ್ಗ ಬೀಸುತ್ತಾ, ಒದೆಯುತ್ತಾ ಹೋರಾಡುವ ದೃಶ್ಯಗಳನ್ನು ಸೇರಿಸಿರುವುದನ್ನು ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಟ ಮುಕೇಶ್ ಖನ್ನಾ ಅವರು "ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅಥವಾ ಇಂದಿನ ಮಾಚೋ ನಟಿಯರಂತೆ ಸೀತಾದೇವಿ ರಾಕ್ಷಸರ ವಿರುದ್ಧ ರಣರಂಗದಲ್ಲಿ ಹೋರಾಡುವುದನ್ನು ಯಾರಾದರೂ ಕಲ್ಪಿಸಿಕೊಳ್ಳಲು ಸಾಧ್ಯವೇ?" ಎಂದು ಸಾರ್ವಜನಿಕರ ಪ್ರಶ್ನೆಯನ್ನು ಉಲ್ಲೇಖಿಸಿ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ರೀತಿಯ ದೃಶ್ಯಗಳನ್ನು ಸೇರಿಸಿರುವುದರ ಕುರಿತು ತಾವು ತಕ್ಷಣವೇ ವಾಲ್ಮೀಕಿ ರಾಮಾಯಣವನ್ನು ಪರಿಶೀಲಿಸಿದ್ದಾಗಿ ತಿಳಿಸಿದ ಮುಕೇಶ್ ಖನ್ನಾ, ವಾಲ್ಮೀಕಿ ರಾಮಾಯಣದಲ್ಲಿ ಎಲ್ಲಿಯೂ ಸೀತಾದೇವಿ ಯಾರೊಂದಿಗೂ ಯುದ್ಧ ಮಾಡಿದ ಉದಾಹರಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೀತಾದೇವಿಯು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಧರ್ಮಪತ್ನಿಯಾಗಿ, ಸಂಪೂರ್ಣ ಸೇವಾಭಾವವನ್ನು ಮೈಗೂಡಿಸಿಕೊಂಡು, ಪತಿಯ ನಿರ್ಧಾರವನ್ನು ಗೌರವಿಸಿ 14 ವರ್ಷಗಳ ವನವಾಸಕ್ಕೆ ಸಾಥ್ ನೀಡಿದವರು. ಅವರು ಎಂದಿಗೂ ರಾಜದರ್ಬಾರ್ ಅಥವಾ ರಾಜಭೋಗಗಳನ್ನು ಬಯಸಿದವರಲ್ಲ. ಇಂತಹ ಪವಿತ್ರ ಪಾತ್ರವನ್ನು ಏಕಾಏಕಿ 'ಫೈಟರ್' ಎಂದು ಬಿಂಬಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ರಾವಣ, ಸೀತಾದೇವಿಯನ್ನು ಅಪಹರಿಸಿಕೊಂಡು ಹೋದ ಪ್ರಸಂಗವನ್ನು ಉದಾಹರಿಸಿದ ಅವರು, "ಒಂದು ವೇಳೆ ಸೀತಾದೇವಿ ನಿಜವಾಗಿಯೂ ಆ ಕಾಲದಲ್ಲೇ ಫೈಟರ್ ಅಥವಾ ಸಮರಕಲೆಯಲ್ಲಿ ಪಟುವಾಗಿದ್ದರೆ, ರಾವಣ ಆಕೆಯನ್ನು ಅಪಹರಿಸುವಾಗ ಆಕೆ ರಾವಣನ ವಿರುದ್ಧವೇ ಹೋರಾಡಬಹುದಿತ್ತಲ್ಲವೇ? ಆಕೆ ಯಾಕೆ ಸುಮ್ಮನೆ ರಾವಣನ ಬಂಧನಕ್ಕೆ ಒಳಗಾಗುತ್ತಿದ್ದರು?" ಎಂದು ತಾರ್ಕಿಕವಾಗಿ ಪ್ರಶ‍್ನಿಸಿದ್ದಾರೆ.

ಪ್ರೇಕ್ಷಕರು ಬಾಲ್ಯದಿಂದಲೂ ಶ್ರದ್ಧಾಭಕ್ತಿಗಳಿಂದ ರಾಮಾಯಣವನ್ನು ಕೇಳಿ, ನೋಡಿ ಬೆಳೆದಿದ್ದಾರೆ. ರಾಮಲೀಲಾದಂತಹ ಕಾರ್ಯಕ್ರಮಗಳಲ್ಲಿ ಜನರು ಕೈಮುಗಿದು ಕುಳಿತು ವೀಕ್ಷಿಸುತ್ತಾರೆ, ಆದರೆ ಇಂತಹ ಧಾರ್ಮಿಕ ನಂಬಿಕೆಗಳ ನಡುವೆ ಏಕಾಏಕಿ ಕರಾಟೆ, ಫೈಟಿಂಗ್ ದೃಶ್ಯಗಳನ್ನು ತೂರಿಸಿ ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತರುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಆಧುನಿಕ ನಾರಿಯರನ್ನು ಪ್ರಸನ್ನಗೊಳಿಸಲು ಅಥವಾ ಇಂದಿನ ಫೆಮಿನಿಸಂ ಅಜೆಂಡಾವನ್ನು ತೃಪ್ತಿಪಡಿಸಲು ಸೀತಾದೇವಿಯ ಪಾತ್ರಕ್ಕೆ ಇಂತಹ ತೇಪೆ ಹಚ್ಚಲಾಗಿದೆ ಎಂದು ಮುಕೇಶ್ ಖನ್ನಾ ಆರೋಪಿಸಿದ್ದಾರೆ. "ಇಂದಿನ ಮಹಿಳೆಯರು ಶಕ್ತಿಶಾಲಿಗಳು ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಅದನ್ನು ನಾವು ತಪ್ಪೆಂದು ಹೇಳುವುದಿಲ್ಲ. ಆದರೆ ರಾಮಾಯಣದ ಸೀತಾದೇವಿ ಸೀತಾದೇವಿಯೇ ಹೊರತು, ಇಂದಿನ ನಾರಿಯರನ್ನು ಪ್ರತಿನಿಧಿಸುವ ಅಥವಾ ತುಷ್ಟೀಕರಣ ಮಾಡುವ ಸಾಧನವಲ್ಲ. ಇಂದಿನ ಸಿದ್ಧಾಂತಗಳನ್ನು ತೃಪ್ತಿಪಡಿಸಲು ಪುರಾಣದ ಮೂಲ ಪಾತ್ರದ ಗುಣಲಕ್ಷಣಗಳನ್ನು ಬದಲಾಯಿಸುವುದು ಸಂಪೂರ್ಣವಾಗಿ ತಪ್ಪು" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿನಿಮಾದಲ್ಲಿ ಕಲಾತ್ಮಕ ಸ್ವಾತಂತ್ರ್ಯ (Creative Liberty) ತೆಗೆದುಕೊಳ್ಳುವುದಕ್ಕೆ ಒಂದು ಮಿತಿ ಇರುತ್ತದೆ ಎಂದು ಖನ್ನಾ ಖಾರವಾಗಿ ನುಡಿದಿದ್ದಾರೆ. ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಕಾವ್ಯಗಳ ಮೂಲ ಸಾರವನ್ನು ಹಾಳುಮಾಡುವ ಹಕ್ಕು ಯಾರಿಗೂ ಇಲ್ಲ. ಇತಿಹಾಸ ಅಥವಾ ಪುರಾಣದ ಪ್ರಮುಖ ಪಾತ್ರಗಳನ್ನು ಇಂದಿನ ಸಿನಿಮೀಯ ಗಿಮಿಕ್‌ಗಳಿಗಾಗಿ ಬದಲಾಯಿಸುವುದು ಕೇವಲ ಪ್ರೇಕ್ಷಕರನ್ನಷ್ಟೇ ಅಲ್ಲ, ಭಾರತೀಯ ಪರಂಪರೆಯನ್ನು ಅವಮಾನಿಸಿದಂತೆ. ನಿರ್ದೇಶಕರು ಹಾಗೂ ಬರಹಗಾರರು ಚಿತ್ರರಂಗದಲ್ಲಿ ಇಂತಹ ಸಲ್ಲದ ಪ್ರಯೋಗಗಳನ್ನು ಮಾಡುವ ಮೊದಲು ಪ್ರೇಕ್ಷಕರ ಧಾರ್ಮಿಕ ಭಾವನೆಗಳು ಮತ್ತು ಗ್ರಂಥಗಳ ಸತ್ಯಾಸತ್ಯತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಪ್ರೇಕ್ಷಕರು ಕೂಡ ಇಂತಹ ಅನಗತ್ಯ ಬದಲಾವಣೆಗಳನ್ನು ಪ್ರಶ್ನಿಸಬೇಕು ಎಂದು ಖನ್ನಾ ಅವರು ವಿನಂತಿಸಿದ್ದಾರೆ.

ಅಂದಹಾಗೆ, ನವೆಂಬರ್ 5ರಂದು ಬೆಳ್ಳಿತೆರೆಗೆ ಅಪ್ಪಳಿಸಿರುವ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾವು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದ್ದು, ಪ್ರಮುಖವಾಗಿ ಸೀತಾದೇವಿಯ ಸಾಹಸಮಯ ದೃಶ್ಯಗಳು ಮತ್ತು ಆಧುನಿಕ ನಿರೂಪಣೆಯ ಶೈಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಮುಕೇಶ್ ಖನ್ನಾ ಅವರ ಈ ಹೇಳಿಕೆ ಇದೀಗ ಇಡೀ ಬಾಲಿವುಡ್ ಹಾಗೂ ಚಿತ್ರಪ್ರೇಮಿಗಳ ವಲಯದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ, (ಏಜೆನ್ಸೀಸ್​).