ರಾಮಾಯಣ ಚಿತ್ರದಲ್ಲಿ ರಾಮನ ಮೌಲ್ಯಗಳಿಗಿಲ್ಲ ಬೆಲೆ, ರಾವಣನೇ ಹೀರೋ: ಟೀಕಾ ಪ್ರಹಾರ ನಡೆಸಿದ ಖ್ಯಾತ ನಟ 
ಬಾಲಿವುಡ್

ರಾಮಾಯಣ ಚಿತ್ರದಲ್ಲಿ ರಾಮನ ಮೌಲ್ಯಗಳಿಗಿಲ್ಲ ಬೆಲೆ, ರಾವಣನೇ ಹೀರೋ: ಟೀಕಾ ಪ್ರಹಾರ ನಡೆಸಿದ ಖ್ಯಾತ ನಟ..Ramayana

ಭಾರತದ ಇತಿಹಾಸ, ಸಂಪ್ರದಾಯ ಹಾಗೂ ನೈತಿಕ ಮೌಲ್ಯಗಳನ್ನು ತಪ್ಪು ದಾರಿಗೆ ಎಳೆಯುವ ಇಂತಹ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಿನಿಮಾರಂಗವನ್ನು ಪ್ರತಿನಿಧಿಸುವ ಯಾವುದೇ ಹಕ್ಕಿಲ್ಲ ಎಂದು ಭಾರಧ್ವಜ್​ ಅವರು ನೇರವಾಗಿ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ: ದಂಗಲ್​ ಖ್ಯಾತಿಯ ನಿರ್ದೇಶಕ ನಿತೀಶ್ ತಿವಾರಿ ಕಲ್ಪನೆಯಲ್ಲಿ ಮೂಡಿಬಂದಿರುವ 'ರಾಮಾಯಣ: ಪಾರ್ಟ್ 1' ( Ramayana ) ಸಿನಿಮಾ ವಿರುದ್ಧ ಖ್ಯಾತ ನಟ ನಿತೀಶ್ ಭಾರದ್ವಾಜ್ ತೀವ್ರ ಅಸಮಾಧಾನ ಹಾಗೂ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ಚಿತ್ರವನ್ನು ವೀಕ್ಷಿಸಿದ ನಂತರ ತಮಗೆ ತೀವ್ರ ನಿರಾಸೆಯಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಆತ್ಮವಾಗಿರುವ ರಾಮಾಯಣದ ಮೂಲ ಆಶಯವನ್ನೇ ಈ ಸಿನಿಮಾ ತಿರುಚಿದೆ ಎಂದು ಆರೋಪಿಸಿರುವ ಭಾರಧ್ವಜ್​, ಈ ಚಿತ್ರದಲ್ಲಿ ಭಗವಾನ್ ಶ್ರೀರಾಮನ ಮೌಲ್ಯಗಳು ಮತ್ತು ಅಯೋಧ್ಯೆಯ ಮಹತ್ವವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ರಾವಣನನ್ನು ವಿಜೃಂಭಿಸಿ ನಾಯಕನನ್ನಾಗಿ ಬಿಂಬಿಸಲಾಗಿದೆ ಎಂದು ಖಾರವಾಗಿ ಟೀಕಿಸಿದ್ದಾರೆ.

ರಾಮಾಯಣ ಎಂಬುದು ಕೇವಲ ಒಂದು ಕಾಲ್ಪನಿಕ ಕಥೆಯಲ್ಲ, ಅದು ಪ್ರಾಚೀನ ಭಾರತದ ನಾಗರಿಕತೆ ಮತ್ತು ಆಧ್ಯಾತ್ಮಿಕ ಚೇತನದ ಮೂಲ ಬೇರಾಗಿದೆ ಎಂದು ನಿತೀಶ್ ಭಾರದ್ವಾಜ್ ಪ್ರತಿಪಾದಿಸಿದ್ದಾರೆ. ಈ ಮಹಾಕಾವ್ಯದಲ್ಲಿರುವ ಪ್ರತಿಯೊಂದು ಪಾತ್ರಗಳು, ನಾಯಕ, ನಾಯಕಿ ಹಾಗೂ ಖಳನಾಯಕರು ತಮ್ಮದೇ ಆದ ಮೌಲ್ಯಗಳು ಮತ್ತು ಸಂದೇಶಗಳನ್ನು ಒಳಗೊಂಡಿದ್ದಾರೆ. ಅವುಗಳ ಮೂಲ ಲಕ್ಷಣಗಳನ್ನು ಹಾಗೂ ಪ್ರಾಮುಖ್ಯತೆಯನ್ನು ಇಷ್ಟು ಹಗುರವಾಗಿ ಮರು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಭಾರಧ್ವಜ್​ ಅವರು ಕಿಡಿಕಾರಿದ್ದಾರೆ.

ಧರ್ಮದ ರಕ್ಷಣೆ, ವಂಶೋದ್ಧಾರ ಮತ್ತು ನೈತಿಕತೆಯನ್ನು ಜಗತ್ತಿಗೆ ಸಾರಲು ಭಗವಾನ್ ವಿಷ್ಣುವು ಶ್ರೀರಾಮನಾಗಿ ಅವತರಿಸಿದನು. ಆದರೆ, ಈ ಚಿತ್ರದಲ್ಲಿ ರಾವಣನನ್ನು ಅತ್ಯಂತ ಉದಾರವಾದಿ, ಸಾಮಾಜಿಕ ನ್ಯಾಯಪರ ಮತ್ತು ನಿಷ್ಪಕ್ಷಪಾತ ವ್ಯಕ್ತಿಯಂತೆ ಚಿತ್ರಿಸುವ ಮೂಲಕ ರಾಮಾಯಣದ ನೈತಿಕ ಚೌಕಟ್ಟನ್ನೇ ಮರುಬರಹ ಮಾಡಲಾಗಿದೆ ಮತ್ತು ಶ್ರೀರಾಮನ ಅವತಾರದ ಉದ್ದೇಶವನ್ನೇ ಪ್ರಶ್ನಿಸುವಂತೆ ಮಾಡಲಾಗಿದೆ ಎಂದು ಭಾರಧ್ವಜ್​ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಈ ಚಿತ್ರದ ಕುರಿತು ತಾವು ಹಂಚಿಕೊಂಡಿದ್ದ ಪೋಸ್ಟ್ ಅನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿರುವ ಅವರು, ಪ್ರಸ್ತುತ ಈ ಸಿನಿಮಾದ ಬಗ್ಗೆ ಒಂದೇ ಒಂದು ಒಳ್ಳೆಯ ಮಾತನ್ನೂ ಹೇಳಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಎಷ್ಟೇ ಉನ್ನತ ಮಟ್ಟದ ದೃಶ್ಯ ವೈಭವ ಹಾಗೂ ಅದ್ಭುತ ವಿಎಫ್‌ಎಕ್ಸ್ (VFX) ತಂತ್ರಜ್ಞಾನವನ್ನು ಬಳಸಿದರೂ ಸಹ, ಅದು ಮಹಾಕಾವ್ಯದ ಮೂಲ ಮೌಲ್ಯಗಳು, ತಾತ್ವಿಕ ಆಳ ಮತ್ತು ಆಧ್ಯಾತ್ಮಿಕ ಸಾರಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ. ಭಾರತದ ಇತಿಹಾಸ, ಸಂಪ್ರದಾಯ ಹಾಗೂ ನೈತಿಕ ಮೌಲ್ಯಗಳನ್ನು ತಪ್ಪು ದಾರಿಗೆ ಎಳೆಯುವ ಇಂತಹ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಿನಿಮಾರಂಗವನ್ನು ಪ್ರತಿನಿಧಿಸುವ ಯಾವುದೇ ಹಕ್ಕಿಲ್ಲ ಎಂದು ಭಾರಧ್ವಜ್​ ಅವರು ನೇರವಾಗಿ ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದಲ್ಲಿನ ನಿರ್ದಿಷ್ಟ ದೃಶ್ಯಗಳ ವೈಪರೀತ್ಯವನ್ನು ಎತ್ತಿಹಿಡಿದಿರುವ ಭಾರದ್ವಾಜ್, ರಾವಣನು ಸೀತಾದೇವಿಯನ್ನು ಬಲವಂತವಾಗಿ ವಶಪಡಿಸಿಕೊಂಡ ಸತ್ಯವನ್ನು ತೋರಿಸಲು ಚಿತ್ರತಂಡ ಸಿದ್ಧವಿರಲಿಲ್ಲ, ಬದಲಿಗೆ ರಾವಣನನ್ನು ಮಹಿಳೆಯರ ಮಾನ ರಕ್ಷಕನಂತೆ ಚಿತ್ರಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ, ಪುರಾಣಗಳ ಪ್ರಕಾರ ಇಂದ್ರನು ರಾವಣನನ್ನು ಸೋಲಿಸಿ ಬಂದಿಸಿದಾಗ, ರಾವಣನ ಮಗ ಮೇಘನಾದನು ಇಂದ್ರನನ್ನು ಸೋಲಿಸಿ ತನ್ನ ತಂದೆಯನ್ನು ಬಿಡಿಸಿಕೊಂಡು ಬರುತ್ತಾನೆ. ಆದರೆ ಈ ಸಿನಿಮಾದಲ್ಲಿ ರಾವಣನನ್ನು ಜಗತ್ತಿನ ಅತಿದೊಡ್ಡ ಯೋಧ ಎಂದು ತೋರಿಸುವ ಅಂಧಾನುಕರಣೆಯಲ್ಲಿ, ಇಂದ್ರ ಆತನಿಂದಲೇ ಸೋಲಿಸಲ್ಪಟ್ಟಂತೆ ಚಿತ್ರಿಸಿ ಇತಿಹಾಸವನ್ನೇ ಬದಲಾಯಿಸಲಾಗಿದೆ. ಶ್ರೀರಾಮನ ಆದರ್ಶಗಳು ಅಥವಾ ಅಯೋಧ್ಯೆಯ ಪವಿತ್ರತೆಗೆ ಯಾವುದೇ ಆದ್ಯತೆ ನೀಡದೆ, ಲಂಕೆಯಲ್ಲಿನ ಅರ್ಥಹೀನ ಆಚರಣೆಗಳು ಮತ್ತು ವಿಜೃಂಭಣೆಗಷ್ಟೇ ಪ್ರಾಮುಖ್ಯತೆ ನೀಡಲಾಗಿದೆ ಎಂದು ಅವರು ದೂರಿದ್ದಾರೆ.

ಬಿ.ಆರ್. ಚೋಪ್ರಾ ಅವರ ಐತಿಹಾಸಿಕ 'ಮಹಾಭಾರತ' ಧಾರಾವಾಹಿಯಲ್ಲಿ ಭಗವಾನ್ ಶ್ರೀಕೃಷ್ಣನ ಪಾತ್ರದ ಮೂಲಕ ಹಾಗೂ 'ರಾಮಾಯಣ' ಸರಣಿಯಲ್ಲಿ ಶ್ರೀರಾಮನ ಪಾತ್ರದ ಮೂಲಕ ಭಾರತದಾದ್ಯಂತ ಮನೆಮಾತಾಗಿದ್ದ ನಿತೀಶ್ ಭಾರದ್ವಾಜ್, ಮಲಯಾಳಂನ ಖ್ಯಾತ ನಿರ್ದೇಶಕ ಪದ್ಮರಾಜನ್ ಅವರ 'ಜ್ಞಾನ್ ಗಂಧರ್ವನ್' ಚಿತ್ರದ ಮೂಲಕ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ಪ್ರೇಕ್ಷಕರಿಗೂ ಅತ್ಯಂತ ಪ್ರಿಯ ನಟರಾಗಿದ್ದಾರೆ. ಅಂತಹ ಹಿರಿಯ ಹಾಗೂ ಅನುಭವ ನಟರಿಂದ ಬಂದಿರುವ ಈ ಸಾಲುಗಳು ಇದೀಗ ಚಲನಚಿತ್ರ ರಂಗದಲ್ಲಿ ಹಾಗೂ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿವೆ, (ಏಜೆನ್ಸೀಸ್​).