ರಾವಣನನ್ನು ವೈಭವೀಕರಿಸಿಲ್ಲ, ಜನಕ್ಕೆ ಇಷ್ಟವಾಗಿದ್ದು ಯಶ್ ಸ್ಟೈಲ್ WEB
ಬಾಲಿವುಡ್

ರಾವಣನನ್ನು ವೈಭವೀಕರಿಸಿಲ್ಲ, ಜನಕ್ಕೆ ಇಷ್ಟವಾಗಿದ್ದು ಯಶ್ ಸ್ಟೈಲ್ ! ನಮಿತ್ ಮಲ್ಹೋತ್ರಾ ಬಿಗ್ ಸ್ಟೇಟ್‌ಮೆಂಟ್ | Ramayana part 1

ರಾಮಾಯಣ ಪಾರ್ಟ್ 1 ಸಿನಿಮಾ ತೆರೆಗೆ ಅಪ್ಪಳಿಸಿದ ಬೆನ್ನಲ್ಲೇ, ಚಿತ್ರದ ಕಥೆಗಿಂತಲೂ ಹೆಚ್ಚಾಗಿ ರಾವಣನ ಪಾತ್ರದ ಚಿತ್ರಣದ ಬಗ್ಗೆಯೇ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ರಾಕಿಂಗ್ ಸ್ಟಾರ್ ಯಶ್ ಜೀವ ತುಂಬಿರುವ ರಾವಣನ ಪಾತ್ರವನ್ನು ಕೇವಲ ಕ್ರೂರ ರಾಕ್ಷಸ ರಾಜನಂತೆ ತೋರಿಸದೆ, ವಿಭಿನ್ನ ಆಯಾಮಗಳು ಮತ್ತು ಆಳವಾದ ವ್ಯಕ್ತಿತ್ವವಿರುವ ಪಾತ್ರವಾಗಿ ಕಟ್ಟಿಕೊಡಲಾಗಿದೆ. ಆದರೆ, ಈ ಹೊಸ ಪ್ರಯೋಗಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದ್ದು, ಸಿನಿಮಾದಲ್ಲಿ ರಾವಣನನ್ನು ಅನಗತ್ಯವಾಗಿ ವೈಭವೀಕರಿಸಲಾಗುತ್ತಿದೆ ಎಂಬ ಟೀಕೆಗಳೂ ಕೇಳಿಬಂದಿವೆ. Ramayana part 1

Ramayana part 1 : ರಾಮಾಯಣ ಪಾರ್ಟ್ 1 ಸಿನಿಮಾ ತೆರೆಗೆ ಅಪ್ಪಳಿಸಿದ ಬೆನ್ನಲ್ಲೇ, ಚಿತ್ರದ ಕಥೆಗಿಂತಲೂ ಹೆಚ್ಚಾಗಿ ರಾವಣನ ಪಾತ್ರದ ಚಿತ್ರಣದ ಬಗ್ಗೆಯೇ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ರಾಕಿಂಗ್ ಸ್ಟಾರ್ ಯಶ್ ಜೀವ ತುಂಬಿರುವ ರಾವಣನ ಪಾತ್ರವನ್ನು ಕೇವಲ ಕ್ರೂರ ರಾಕ್ಷಸ ರಾಜನಂತೆ ತೋರಿಸದೆ, ವಿಭಿನ್ನ ಆಯಾಮಗಳು ಮತ್ತು ಆಳವಾದ ವ್ಯಕ್ತಿತ್ವವಿರುವ ಪಾತ್ರವಾಗಿ ಕಟ್ಟಿಕೊಡಲಾಗಿದೆ. ಆದರೆ, ಈ ಹೊಸ ಪ್ರಯೋಗಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದ್ದು, ಸಿನಿಮಾದಲ್ಲಿ ರಾವಣನನ್ನು ಅನಗತ್ಯವಾಗಿ ವೈಭವೀಕರಿಸಲಾಗುತ್ತಿದೆ ಎಂಬ ಟೀಕೆಗಳೂ ಕೇಳಿಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ, ಇದೀಗ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಮೌನ ಮುರಿದಿದ್ದು, ಈ ಎಲ್ಲಾ ಆರೋಪಗಳಿಗೆ ಖಡಕ್ ಸ್ಪಷ್ಟನೆ ನೀಡಿದ್ದಾರೆ.

ನ.5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಪಾರ್ಟ್ 1 ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರವಿ ದುಬೆ ಲಕ್ಷ್ಮಣನಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಯಶ್ ಅವರ ರಾವಣನ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿದೆ.

ರಾವಣನನ್ನು ಒಳ್ಳೆಯವನೆಂದು ತೋರಿಸಿಲ್ಲ

ಡಿಡಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ರಾವಣನ ಪಾತ್ರವನ್ನು ವೈಭವೀಕರಿಸಲಾಗಿದೆ ಎಂಬ ಆರೋಪದ ಕುರಿತು ನಮಿತ್ ಮಾಲ್ಹೋತ್ರಾ ಮಾತನಾಡಿದ್ದಾರೆ. ಚಿತ್ರದಲ್ಲಿ ರಾವಣನನ್ನು ಒಳ್ಳೆಯ ವ್ಯಕ್ತಿಯೆಂದು ಎಲ್ಲಿಯೂ ತೋರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾವು ರಾವಣ ಒಳ್ಳೆಯವನು ಎಂದು ತೋರಿಸಿಲ್ಲ. ಪ್ರೇಕ್ಷಕರು ಮೆಚ್ಚಿಕೊಂಡಿರುವುದು ಯಶ್ ಅವರ ಅಭಿನಯವನ್ನು. ರಾವಣ ಚಿತ್ರದಲ್ಲಿ ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡಿಲ್ಲ. ಆತ ಅನೇಕ ಜನರ ಬದುಕಿನಲ್ಲಿ ಭಯ ಮತ್ತು ಅಶಾಂತಿಯನ್ನು ಸೃಷ್ಟಿಸಿದ್ದಾನೆ. ಅವನ ದೌರ್ಜನ್ಯವನ್ನು ತಡೆಯಲು ಕೊನೆಗೆ ಶ್ರೀರಾಮನೇ ಮಧ್ಯಪ್ರವೇಶಿಸಬೇಕಾಯಿತು. ನಾವು ರಾವಣನ ಬಾಲ್ಯದ ದಶಾನನನಿಂದ ಹಿಡಿದು ಶಕ್ತಿಶಾಲಿ ರಾವಣನಾಗುವವರೆಗಿನ ಪಯಣವನ್ನು ತೋರಿಸಿದ್ದೇವೆ. ಎಲ್ಲಿಯೂ ಆತನನ್ನು ಹೊಗಳಿಲ್ಲ' ಎಂದು ನಿರ್ಮಾಪಕರು ಹೇಳಿದ್ದಾರೆ.

ದೇವರ ವರಗಳೇ ರಾವಣನನ್ನು ಉಳಿಸಲಿಲ್ಲವೇಕೆ?

ರಾವಣನ ಕಥೆಯಲ್ಲಿ ಅಡಗಿರುವ ಮತ್ತೊಂದು ಪ್ರಮುಖ ಅಂಶವನ್ನು ನಮಿತ್ ಪ್ರಸ್ತಾಪಿಸಿದ್ದಾರೆ. ಬ್ರಹ್ಮ ಮತ್ತು ಶಿವನಿಂದ ವರಗಳನ್ನು ಪಡೆದಿದ್ದ ರಾವಣನಿಗೆ ಅಂತಿಮವಾಗಿ ಸೋಲು ಎದುರಾಗಿದ್ದು ಏಕೆ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.

ರಾವಣ ಕೆಟ್ಟ ವ್ಯಕ್ತಿಯಾಗಿದ್ದರೆ ಬ್ರಹ್ಮ ಮತ್ತು ಶಿವ ಆತನಿಗೆ ವರಗಳನ್ನು ಏಕೆ ನೀಡಿದರು? ದೇವರೇ ಆಶೀರ್ವದಿಸಿದ್ದಾನೆ ಎಂದರೆ ಅದಕ್ಕೆ ತಕ್ಕಂತಹ ಯಾವುದೋ ಸಾಧನೆಯನ್ನು ಆತ ಮಾಡಿರಬೇಕು. ಆದರೆ ಇಲ್ಲಿ ಮುಖ್ಯವಾದ ವಿಷಯ ಬೇರೆಯೇ ಇದೆ. ದೇವರು ನಿಮಗೆ ಎಲ್ಲವನ್ನೂ ನೀಡಿದಾಗ, ನಿಮ್ಮ ಅಹಂಕಾರವೇ ಉತ್ತುಂಗಕ್ಕೇರಿ ನೀವು ಮಾಡುವುದೆಲ್ಲ ಸರಿ ಎಂದು ಭಾವಿಸಲು ಆರಂಭಿಸುತ್ತೀರಿ. ಆಗಲೇ ನಿಮ್ಮ ಪತನ ಶುರುವಾಗುತ್ತದೆ. ರಾವಣನ ಅಂತ್ಯಕ್ಕೆ ಕಾರಣವಾಗಿದ್ದು ಆತನ ಅಹಂಕಾರವೇ ಹೊರತು ಬೇರೇನಲ್ಲ ಎಂದು ನಮಿತ್ ವಿವರಿಸಿದ್ದಾರೆ.

ಯಶ್ ರಾವಣನ ಪಾತ್ರದ ಹಿಂದಿನ ಕಥೆಯೇನು?

ಈ ಹಿಂದಿನ ಹಲವು ರಾಮಾಯಣ ರೂಪಾಂತರಗಳಲ್ಲಿ ರಾವಣನನ್ನು ದುರಾಸೆ, ಕಾಮ ಮತ್ತು ಅಧಿಕಾರದ ವ್ಯಾಮೋಹ ಹೊಂದಿರುವ ರಾಜನಾಗಿ ಚಿತ್ರಿಸಲಾಗಿದೆ. ಆದರೆ ಈ ಸಿನಿಮಾದಲ್ಲಿ ಆತನ ಬಾಲ್ಯ ಮತ್ತು ವ್ಯಕ್ತಿತ್ವದ ಬೆಳವಣಿಗೆಗೂ ಹೆಚ್ಚಿನ ಮಹತ್ವ ನೀಡಲಾಗಿದೆ. ಚಿತ್ರದ ಪ್ರಕಾರ, ದಶಾನನ ಬಾಲ್ಯದಲ್ಲೇ ಸಂಗೀತದಲ್ಲಿ ಅಪಾರ ಪ್ರತಿಭೆ ಹೊಂದಿದ್ದ ವ್ಯಕ್ತಿ. ತನ್ನ ಜನರ ಒಳಿತಿಗಾಗಿ ಶಕ್ತಿಶಾಲಿಯಾಗಬೇಕೆಂದು ಆತನ ತಾಯಿ ಪ್ರೇರೇಪಿಸುತ್ತಾಳೆ. ಬಳಿಕ ಹಲವು ವರ್ಷಗಳ ಕಠಿಣ ತಪಸ್ಸು ಮತ್ತು ಯುದ್ಧಗಳ ಮೂಲಕ ಆತ ಬಲಿಷ್ಠ ರಾವಣನಾಗಿ ರೂಪುಗೊಳ್ಳುತ್ತಾನೆ.

ತನ್ನ ಭಾವನೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡಾಗ ಆತನನ್ನು ಪ್ರಶ್ನಿಸುವ ದೃಶ್ಯವೂ ಚಿತ್ರದಲ್ಲಿದೆ. ತನ್ನ ಪ್ರಜೆಗಳು ತನ್ನಂತೆಯೇ ಸಮಾನವಾಗಿ ಬದುಕಬೇಕು ಎಂದು ಬಯಸುವ ರಾಜನಾಗಿಯೂ ರಾವಣನನ್ನು ತೋರಿಸಲಾಗಿದೆ. ಇಂತಹ ವಿಭಿನ್ನ ಆಯಾಮಗಳು ರಾವಣನ ಪಾತ್ರದ ಕುರಿತು ಹೊಸ ಚರ್ಚೆಗೆ ಕಾರಣವಾಗಿವೆ.

ಸೀತಾಪಹರಣದೊಂದಿಗೆ ಮೊದಲ ಭಾಗ ಅಂತ್ಯ

ಲಕ್ಷ್ಮಣನಿಂದ ತನ್ನ ಸಹೋದರಿ ಶೂರ್ಪನಖಿಯ ಮೂಗು ಕತ್ತರಿಸಲ್ಪಟ್ಟ ಘಟನೆಯ ಬಳಿಕ ರಾವಣ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಇದರ ಪರಿಣಾಮವಾಗಿ ಸೀತೆಯನ್ನು ಅಪಹರಿಸುವ ನಿರ್ಧಾರ ಕೈಗೊಳ್ಳುತ್ತಾನೆ. ಈ ಪ್ರಮುಖ ಘಟನೆಯೊಂದಿಗೆ ರಾಮಾಯಣ: ಪಾರ್ಟ್ 1 ಮುಕ್ತಾಯವಾಗುತ್ತದೆ.

ಇನ್ನು ಚಿತ್ರದ ಎರಡನೇ ಭಾಗವು 2028ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಮೊದಲ ಭಾಗದಲ್ಲಿ ರಾವಣನ ವ್ಯಕ್ತಿತ್ವದ ಹಲವು ಆಯಾಮಗಳನ್ನು ಪರಿಚಯಿಸಿರುವ ಚಿತ್ರತಂಡ, ಮುಂದಿನ ಭಾಗದಲ್ಲಿ ರಾಮ-ರಾವಣರ ನಡುವಿನ ಸಂಘರ್ಷವನ್ನು ಹೇಗೆ ತೆರೆಗೆ ತರಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ.