ನವದೆಹಲಿ: ಭಾರೀ ನಿರೀಕ್ಷೆ ಹುಟ್ಟಿಸಿದ್ದ ರಾಮಾಯಣ ಸಿನಿಮಾ ಈಗ ಕಾನೂನು ಸಮರಕ್ಕೆ ನಾಂದಿ ಹಾಡಿದೆ ಚಿತ್ರದಲ್ಲಿ ಮಹಾಕಾವ್ಯದ ಸಂಗತಿಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಿಗೆ ಭಾರಿ ಮುಖಭಂಗವಾಗಿದೆ. ಈ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಖಡಾಖಂಡಿತವಾಗಿ ನಿರಾಕರಿಸಿದೆ. ಸಿನಿಮಾ ಈಗಾಗಲೇ ತೆರೆಕಂಡು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಹೀಗಿರುವಾಗ ತಕ್ಷಣದ ಮಧ್ಯಪ್ರವೇಶದ ಅಗತ್ಯವೇನಿದೆ? ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇರವಾಗಿ ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ನಿಲ್ಲದ ನ್ಯಾಯಪೀಠ, ರಾಮಾಯಣದ ಬಗ್ಗೆ ನಿಮಗೆ ಭಿನ್ನ ಅಭಿಪ್ರಾಯವಿದ್ದರೆ ನೀವೇ ಒಂದು ಸಿನಿಮಾ ಮಾಡಿ ಎಂದು ಅರ್ಜಿದಾರರ ಪರ ವಕೀಲರಿಗೆ ಖಡಕ್ ಟಾಂಗ್ ನೀಡಿದೆ.
ನವೆಂಬರ್ 27ರ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠ ಅರ್ಜಿಯನ್ನು ಆಲಿಸಿತು. ಅರ್ಜಿದಾರರ ಪರ ವಕೀಲರು ನವೆಂಬರ್ 23ರಂದೇ ಅರ್ಜಿ ನೋಂದಣಿಯಾಗಿದ್ದರೂ ವಿಚಾರಣೆಗೆ ಪಟ್ಟಿ ಮಾಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಚಿತ್ರದಲ್ಲಿ ಮಹಾಕಾವ್ಯದ ಹಲವು ಪ್ರಮುಖ ಸಂಗತಿಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ವಕೀಲರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಚಿತ್ರ ಈಗಾಗಲೇ ಬಿಡುಗಡೆಯಾಗಿದೆ ಮತ್ತು ನೋಡಲು ಆಸಕ್ತಿ ಹೊಂದಿರುವವರು ಅದನ್ನು ವೀಕ್ಷಿಸಿದ್ದಾರೆ. ಚಿತ್ರತಂಡಕ್ಕೆ ತಮ್ಮ ತಿಳಿವಳಿಕೆಯಂತೆ ಸಿನಿಮಾ ಮಾಡುವ ಸ್ವಾತಂತ್ರ್ಯವಿದೆ. ನಿಮಗೆ ರಾಮಾಯಣದ ಬಗ್ಗೆ ಭಿನ್ನ ಅಭಿಪ್ರಾಯವಿದ್ದರೆ ನಿಮ್ಮ ದೃಷ್ಟಿಕೋನದಲ್ಲಿ ನೀವೇ ಸಿನಿಮಾ ನಿರ್ಮಿಸಿ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಖಡಕ್ ಆಗಿ ಹೇಳಿದರು.
ಪೀಠದಲ್ಲಿದ್ದ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಕೂಡ ಅರ್ಜಿಯ ತುರ್ತು ವಿಚಾರಣೆಯ ಅಗತ್ಯವನ್ನು ಪ್ರಶ್ನಿಸಿದರು. ರಾಮಾಯಣದ ಬಗ್ಗೆ ವಿಭಿನ್ನ ವ್ಯಾಖ್ಯಾನ ಅಥವಾ ಅಭಿಪ್ರಾಯ ಹೊಂದಿರುವವರು ತಮ್ಮ ತಿಳಿವಳಿಕೆಯ ಆಧಾರದ ಮೇಲೆ ಸಿನಿಮಾ ನಿರ್ಮಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ವಕೀಲರು ಶೀಘ್ರ ವಿಚಾರಣೆ ನಡೆಸುವಂತೆ ಮತ್ತೆ ಮನವಿ ಮಾಡಿದರೂ ಪೀಠ ಅದಕ್ಕೆ ಒಪ್ಪಲಿಲ್ಲ. ಅರ್ಜಿಯನ್ನು ನಿಯಮಾನುಸಾರ ಸೂಕ್ತ ಸಮಯದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು. ಆದರೆ ತುರ್ತು ವಿಚಾರಣೆಯ ಮನವಿಯನ್ನು ತಿರಸ್ಕರಿಸಿತು. ರಾಮಾಯಣ ಚಿತ್ರದ ಕಥನ ಮತ್ತು ಮಹಾಕಾವ್ಯದ ಚಿತ್ರಣದ ಕುರಿತು ಎದ್ದಿರುವ ವಿವಾದಕ್ಕೆ ಸುಪ್ರೀಂ ಕೋರ್ಟ್‌ನ ಈ ಪ್ರತಿಕ್ರಿಯೆ ಈಗ ಚರ್ಚೆಗೆ ಗ್ರಾಸವಾಗಿದೆ. ಚಿತ್ರತಂಡದ ಸೃಜನಶೀಲ ಸ್ವಾತಂತ್ರ್ಯ ಮತ್ತು ಮಹಾಕಾವ್ಯದ ವ್ಯಾಖ್ಯಾನದ ನಡುವಿನ ಚರ್ಚೆಗೆ ನ್ಯಾಯಾಲಯದ ಈ ಹೇಳಿಕೆ ಹೊಸ ಆಯಾಮ ನೀಡಿದೆ.