5500 ಚದರ ಅಡಿಯ ಲಕ್ಷುರಿ ಪೆಂಟ್​ ಹೌಸ್: ಲಿವಿಂಗ್ ರೂಮ್‌ನಿಂದ ಕಿಚನ್​ವರೆಗೆ...ಮಾಧುರಿ ದೀಕ್ಷಿತ್ ಕನಸಿನ ಮನೆ ಹೀಗಿದೆ ನೋಡಿ!  
ಬಾಲಿವುಡ್

5500 ಚದರ ಅಡಿಯ ಲಕ್ಷುರಿ ಪೆಂಟ್​ ಹೌಸ್: ಲಿವಿಂಗ್ ರೂಮ್‌ನಿಂದ ಕಿಚನ್​ವರೆಗೆ...ಮಾಧುರಿ ದೀಕ್ಷಿತ್ ಕನಸಿನ ಮನೆ ಹೀಗಿದೆ ನೋಡಿ! Madhuri Dixit House Tour

ಮಾಧುರಿ ದೀಕ್ಷಿತ್ ಅವರ ಮನೆಯ ಪ್ರಮುಖ ವಿಶೇಷತೆಗಳಲ್ಲಿ ಅಲ್ಲಿನ ಅದ್ಭುತ ಕಲಾ ಸಂಗ್ರಹವೂ ಒಂದಾಗಿದೆ. ಮನೆಯ ಗೋಡೆಗಳು ಹೆಸರಾಂತ ಭಾರತೀಯ ಕಲಾವಿದ ಎಂ.ಎಫ್. ಹುಸೇನ್ ಅವರ ಕೃತಿಗಳು ಸೇರಿದಂತೆ ಸುಂದರವಾದ ಪೇಂಟಿಂಗ್‌ಗಳಿಂದ ಅಲಂಕರಿಸಲ್ಪಟ್ಟಿವೆ.

ಮುಂಬೈ: ಬಾಲಿವುಡ್‌ ಸಿನಿರಂಗದ 'ಧಕ್-ಧಕ್ ಗರ್ಲ್' ಎಂದೇ ಖ್ಯಾತಿ ಪಡೆದಿರುವ ನಟಿ ಮಾಧುರಿ ದೀಕ್ಷಿತ್ ಅವರು ತಮ್ಮ ಅತ್ಯುತ್ತಮ ನಟನೆ ಮತ್ತು ನೃತ್ಯದ ಮೂಲಕವಷ್ಟೇ ಅಲ್ಲದೆ, ತಮ್ಮ ಐಷರಾಮಿ ಜೀವನಶೈಲಿಗೂ ಹೆಸರುವಾಸಿಯಾಗಿದ್ದಾರೆ. ತಮ್ಮ ಪತಿ ಡಾ. ಶ್ರೀರಾಮ್ ನೆನೆ ಮತ್ತು ಕುಟುಂಬದೊಂದಿಗೆ ಮುಂಬೈನ ಲೋಯರ್ ಪರೇಲ್ ಪ್ರದೇಶದಲ್ಲಿರುವ ಐಷರಾಮಿ ಪೆಂಟ್​ ಹೌಸ್‌ನಲ್ಲಿ ( Madhuri Dixit House Tour ) ವಾಸಿಸುತ್ತಿದ್ದಾರೆ. ಸರಿಸುಮಾರು 5500 ಚದರ ಅಡಿಯಲ್ಲಿ ಹರಡಿರುವ ಈ ಸುಂದರ ಮನೆಯು ಅರೇಬಿಯನ್ ಸಮುದ್ರದ ರಮಣೀಯ ನೋಟವನ್ನು ಹೊಂದಿದೆ. ಕೆಲವು ದಿನಗಳ ಹಿಂದೆ ಚಲನಚಿತ್ರ ನಿರ್ಮಾಪಕಿ ಫರಾ ಖಾನ್ ಅವರು ತಮ್ಮ ಅಡುಗೆಭಟ್ಟ ದಿಲೀಪ್ ಅವರೊಂದಿಗೆ ಮಾಧುರಿ ಅವರ ಮನೆಗೆ ಭೇಟಿ ನೀಡಿ ಸಂಪೂರ್ಣ ಮನೆಯನ್ನು ಸುತ್ತಿ ತೋರಿಸಿದ್ದರು. ಈ ವೇಳೆ ಮನೆಯ ಅದ್ಭುತ ಕಲಾಕೃತಿಗಳು ಮತ್ತು ಸಂಗೀತಕ್ಕಾಗಿ ಮೀಸಲಿಟ್ಟ ವಿಶೇಷ ಸ್ಥಳಗಳು ಎಲ್ಲರ ಗಮನ ಸೆಳೆದಿವೆ.

ಮಾಧುರಿ ದೀಕ್ಷಿತ್ ಅವರ ಮನೆಯ ಲಿವಿಂಗ್ ರೂಮ್ ಅತ್ಯಂತ ವಿಶಾಲವಾಗಿದ್ದು ನೋಡಲು ಆಕರ್ಷಕವಾಗಿದೆ. ಕುಳಿತುಕೊಳ್ಳಲು ದೊಡ್ಡ ನೀಲಿ ಬಣ್ಣದ ಸೋಫಾವನ್ನು ಇರಿಸಲಾಗಿದ್ದು, ಅದರೊಂದಿಗೆ ಆರಾಮದಾಯಕವಾದ ತಿಳಿ ಬಣ್ಣದ ಕುರ್ಚಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಕೋಣೆಯಲ್ಲಿ ವೃತ್ತಾಕಾರದ ಮತ್ತು ಸಣ್ಣ ಕಾಫಿ ಟೇಬಲ್‌ಗಳನ್ನು ಇರಿಸಲಾಗಿದ್ದು, ಇದು ಸಂಪೂರ್ಣ ಜಾಗಕ್ಕೆ ಆಧುನಿಕ ಲುಕ್ ನೀಡುತ್ತದೆ. ಲಿವಿಂಗ್ ರೂಮ್‌ನ ಒಂದು ಗೋಡೆಯು ವಿಶಿಷ್ಟವಾದ ವಿನ್ಯಾಸದೊಂದಿಗೆ ಗಾಢ ಕಂದು ಬಣ್ಣದಿಂದ ಅಲಂಕರಿಸಲ್ಪಟ್ಟಿದೆ. ಕಿಟಕಿಗಳಿಗೆ ಸೂರಿದಿಂದ ನೆಲದವರೆಗೆ ಉದ್ದನೆಯ ಬಿಳಿ ಪರದೆಗಳನ್ನು ಹಾಕಲಾಗಿದ್ದು, ಇವು ಕೋಣೆಯೊಳಗೆ ನೈಸರ್ಗಿಕ ಬೆಳಕು ಬರುವಂತೆ ಮಾಡಿ ಮನೆಯನ್ನು ಮತ್ತಷ್ಟು ವಿಶಾಲವಾಗಿ ಕಾಣುವಂತೆ ಮಾಡುತ್ತವೆ.

ಮಾಧುರಿ ದೀಕ್ಷಿತ್ ಅವರ ಮನೆಯ ಪ್ರಮುಖ ವಿಶೇಷತೆಗಳಲ್ಲಿ ಅಲ್ಲಿನ ಅದ್ಭುತ ಕಲಾ ಸಂಗ್ರಹವೂ ಒಂದಾಗಿದೆ. ಮನೆಯ ಗೋಡೆಗಳು ಹೆಸರಾಂತ ಭಾರತೀಯ ಕಲಾವಿದ ಎಂ.ಎಫ್. ಹುಸೇನ್ ಅವರ ಕೃತಿಗಳು ಸೇರಿದಂತೆ ಸುಂದರವಾದ ಪೇಂಟಿಂಗ್‌ಗಳಿಂದ ಅಲಂಕರಿಸಲ್ಪಟ್ಟಿವೆ. ಈ ಪೇಂಟಿಂಗ್‌ಗಳು ವಿವಿಧ ಬಣ್ಣಗಳ ವೈವಿಧ್ಯತೆಯನ್ನು ಹೊಂದಿದ್ದು, ಮನೆಯ ಸರಳ ಒಳಾಂಗಣ ವಿನ್ಯಾಸಕ್ಕೆ ಹೆಚ್ಚಿನ ಮೆರುಗು ನೀಡಿವೆ. ಆಧುನಿಕ ಪೀಠೋಪಕರಣಗಳ ಜತೆಗೆ ಕಲೆಗೂ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಮನೆಯ ಡೈನಿಂಗ್ ಪ್ರದೇಶವು ಅತ್ಯಂತ ಸ್ಟೈಲಿಶ್ ಆಗಿ ರೂಪುಗೊಂಡಿದೆ. ಇಲ್ಲಿ ಅಂಡಾಕಾರದ ಮಾರ್ಬಲ್-ಟಾಪ್ ಡೈನಿಂಗ್ ಟೇಬಲ್ ಅನ್ನು ಇರಿಸಲಾಗಿದ್ದು, ಇದರ ಸುತ್ತಲೂ ಟೀಲ್ ಬಣ್ಣದ ಸೊಗಸಾದ ಕುರ್ಚಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಟೇಬಲ್ ಮೇಲಿರುವ ವಿಶೇಷ ದೀಪಗಳು ಈ ಜಾಗದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇದರೊಂದಿಗೆ, ಕುಟುಂಬದ ಎಲ್ಲರಿಗೂ ಸಂಗೀತದ ಮೇಲಿರುವ ಒಲವಿನಿಂದಾಗಿ ಮನೆಯಲ್ಲಿ ಒಂದು ಗ್ರ್ಯಾಂಡ್ ಪಿಯಾನೋವನ್ನು ಇರಿಸಲಾಗಿದ್ದು, ಗಿಟಾರ್ ಮತ್ತು ಡ್ರಮ್ಸ್‌ನಂತಹ ವಾದ್ಯಗಳಿಗೂ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ. ಇದರಿಂದ ಈ ಜಾಗವು ಕೇವಲ ಊಟ ಮಾಡಲು ಮಾತ್ರವಲ್ಲದೆ, ಕುಟುಂಬದ ಸದಸ್ಯರೆಲ್ಲರೂ ಸೇರಿ ಸಂಗೀತವನ್ನು ಆನಂದಿಸಲು ಉತ್ತಮ ವೇದಿಕೆಯಾಗಿದೆ.

ಮಾಧುರಿ ಅವರ ಅಡುಗೆಮನೆಯು ಅತ್ಯಂತ ಆಧುನಿಕವಾಗಿದ್ದು, ಸ್ವಚ್ಛತೆ ಮತ್ತು ಬಳಕೆಗೆ ಅತ್ಯಂತ ಅನುಕೂಲಕರವಾಗಿದೆ. ಇಲ್ಲಿ ಮರದ ಮತ್ತು ಗಾಢ ಬೂದು ಬಣ್ಣದ ಕ್ಯಾಬಿನೆಟ್‌ಗಳನ್ನು ಅಳವಡಿಸಲಾಗಿದೆ. ಈ ಕ್ಯಾಬಿನೆಟ್‌ಗಳಿಗೆ ಹೊರಭಾಗದಲ್ಲಿ ಯಾವುದೇ ಹ್ಯಾಂಡ್‌ಲ್‌ಗಳಿಲ್ಲದಿರುವುದು ಅಡುಗೆಮನೆಗೆ ಕ್ಲೀನ್ ಮತ್ತು ಸ್ಲೀಕ್ ಲುಕ್ ನೀಡಿದೆ. ಕೌಂಟರ್‌ಟಾಪ್‌ಗಳು ಕೂಡ ಅತ್ಯಂತ ಸ್ಟೈಲಿಶ್ ಆಗಿವೆ. ಕ್ಯಾಬಿನೆಟ್‌ಗಳ ಕೆಳಗೆ ಮಂದವಾದ ಲೈಟ್‌ಗಳನ್ನು ಅಳವಡಿಸಲಾಗಿದೆ. ಅಡುಗೆಮನೆಯ ಆಧುನಿಕ ಲುಕ್ ಜತೆಗೆ ಹಸಿರಿನ ಅನುಭವ ನೀಡಲು ಹಸಿರು ಸಸ್ಯಗಳನ್ನೊಳಗೊಂಡ ವರ್ಟಿಕಲ್ ಗಾರ್ಡನ್ ಅನ್ನು ಸಹ ನಿರ್ಮಿಸಲಾಗಿದೆ.

ಮಾಧುರಿ ಮತ್ತು ಶ್ರೀರಾಮ್ ನೆನೆ ದಂಪತಿಯು ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು ಮತ್ತು ಮನರಂಜನೆಗಾಗಿ ಮನೆಯಲ್ಲಿಯೇ ಪ್ರತ್ಯೇಕ ಸ್ಥಳವನ್ನು ಹೊಂದಿದ್ದಾರೆ. ದೊಡ್ಡ ಟಿವಿ ಜತೆಗೆ ಅತ್ಯುನ್ನತ ಗುಣಮಟ್ಟದ ಸೌಂಡ್ ಸಿಸ್ಟಮ್ ಮತ್ತು ಸ್ಪೀಕರ್‌ಗಳನ್ನು ಇಲ್ಲಿ ಅಳವಡಿಸಲಾಗಿದೆ. ಇದರಿಂದ ಕುಟುಂಬದವರು ಒಟ್ಟಾಗಿ ಕುಳಿತು ಸಿನಿಮಾಗಳನ್ನು ವೀಕ್ಷಿಸಲು ಮತ್ತು ಸಂಗೀತ ಆನಂದಿಸಲು ಸಾಧ್ಯವಾಗುತ್ತದೆ.

ಕುಟುಂಬದ ಒಟ್ಟು ಆದ್ಯತೆಗಳು ಮತ್ತು ಅಗತ್ಯಗಳಿಗೆ ತಕ್ಕಂತೆ ಮನೆಯ ವಿವಿಧ ಭಾಗಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಮಾಧುರಿ ದೀಕ್ಷಿತ್ ಅವರ ಈ ಐಷರಾಮಿ ಪೆಂಟ್ಸ್‌ಹೌಸ್ ಕೇವಲ ಐಷರಾಮಿ ಎನಿಸದೆ, ಅತ್ಯಂತ ವೈಯಕ್ತಿಕ ಮತ್ತು ಆರಾಮದಾಯಕವಾದ ಮನೆಯ ಅನುಭವವನ್ನು ನೀಡುತ್ತದೆ, (ಏಜೆನ್ಸೀಸ್​).