ಬಾಲಿವುಡ್​ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಹಿಂದಿರುವ ಮಾಸ್ಟರ್‌ಮೈಂಡ್ ಅನಿಲ್ ಪಂಡಿತ್ ಯಾರು? 
ಬಾಲಿವುಡ್

ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಹಿಂದಿರುವ ಮಾಸ್ಟರ್‌ಮೈಂಡ್ ಅನಿಲ್ ಪಂಡಿತ್ ಯಾರು? ಈತನ ಕರಾಳ ಹಿನ್ನೆಲೆ ಇಲ್ಲಿದೆ...Anil Pandit

ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿ ಮುಂಬೈನ ಜನನಿಬಿಡ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ (ಅ.18) ಭೀಕರ ಹತ್ಯೆಯತ್ನ ನಡೆದಿದೆ. ಫುಟ್‌ಬಾಲ್ ಆಡಿ, ಮೈದಾನದಿಂದ ತಮ್ಮ ಬಿಎಂಡಬ್ಲ್ಯು ಕಾರಿನಲ್ಲಿ ವಾಪಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ನಟನ ಕಾರಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಂಬೈ: ಬಾಲಿವುಡ್ ಖ್ಯಾತ ನಟ ಟೈಗರ್ ಶ್ರಾಫ್ ( Tiger Shroff ) ಮೇಲೆ ನಿನ್ನೆ ಸಂಜೆ (ಅ.18) ಮುಂಬೈನ ಜುಹು ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯ ಹೊಣೆಯನ್ನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಇದರ ಬೆನ್ನಲ್ಲೇ, ಈ ಹೀನ ಕೃತ್ಯದ ಹಿಂದೆ ಪ್ರಮುಖ ಪಾತ್ರ ವಹಿಸಿರುವ 'ಅನಿಲ್ ಪಂಡಿತ್' ( Anil Pandit ) ಎಂಬಾತ ಮುನ್ನೆಲೆಗೆ ಬಂದಿದ್ದಾನೆ. ಸಲ್ಮಾನ್ ಖಾನ್ ಜತೆ ನಂಟು ಹೊಂದಿದ್ದಕ್ಕೆ ಟೈಗರ್ ಶ್ರಾಫ್ ಮೇಲೆ ಈ ಹತ್ಯೆ ಯತ್ನ ನಡೆಸಲಾಗಿದೆ ಎಂದು ವಿಡಿಯೋ ಹಾಗೂ ಆಡಿಯೋ ಸಂದೇಶದ ಮೂಲಕ ಬೆದರಿಕೆ ಹಾಕಿರುವ ಈ ಅನಿಲ್ ಪಂಡಿತ್ ಹಿನ್ನೆಲೆ ಏನು? ವಿದೇಶದಲ್ಲಿದ್ದುಕೊಂಡೇ ಭಾರತದಲ್ಲಿ ತನ್ನ ಅಪರಾಧ ಜಾಲವನ್ನು ಹೇಗೆ ನಡೆಸುತ್ತಿದ್ದಾನೆ? ಆತನಿಗೆ ಯಾರೆಲ್ಲ ಸಂಪರ್ಕ ಇದೆ? ಎಂಬುದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿ ಮುಂಬೈನ ಜನನಿಬಿಡ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ (ಅ.18) ಭೀಕರ ಹತ್ಯೆಯತ್ನ ನಡೆದಿದೆ. ಫುಟ್‌ಬಾಲ್ ಆಡಿ, ಮೈದಾನದಿಂದ ತಮ್ಮ ಬಿಎಂಡಬ್ಲ್ಯು ಕಾರಿನಲ್ಲಿ ವಾಪಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ನಟನ ಕಾರಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಬಿಡುಗಡೆಯಾಗಿರುವ ಒಂದು ಆಡಿಯೋ ಸಂದೇಶವು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಅಷ್ಟಕ್ಕೂ ಆ ಆಡಿಯೋದಲ್ಲಿ ಏನಿದೆ ಅಂದರೆ, ಗುಂಡಿನ ದಾಳಿ ನಡೆಸಿದವರು ತಾವು 'ಲಾರೆನ್ಸ್ ಬಿಷ್ಣೋಯ್' ಗ್ಯಾಂಗ್‌ನವರು ಎಂದು ಹೇಳಿಕೊಂಡಿದ್ದಾರೆ. ಆಡಿಯೋದಲ್ಲಿ ತನ್ನನ್ನು ಅನಿಲ್ ಪಂಡಿತ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯು, ಗ್ಯಾಂಗ್‌ನ ಎಚ್ಚರಿಕೆಯನ್ನು ಲೆಕ್ಕಿಸದೆ ಟೈಗರ್ ಶ್ರಾಫ್, ಸಲ್ಮಾನ್ ಖಾನ್ ಜತೆ ಕೆಲಸ ಮಾಡುತ್ತಿದ್ದ ಕಾರಣಕ್ಕೇ ಅವರನ್ನು ಗುರಿಯಾಗಿಸಲಾಗಿತ್ತು ಎಂದು ಹೇಳಿದ್ದಾನೆ. ಸಲ್ಮಾನ್ ಖಾನ್ ಅವರನ್ನು ಬೆಂಬಲಿಸುವವರಿಗೆ ಇದು ಮೊದಲ ಮತ್ತು ಕೊನೆಯ ಎಚ್ಚರಿಕೆ ಎಂದು ಧಮಕಿ ಹಾಕಿರುವ ಆತ, "ಸಲ್ಮಾನ್ ಖಾನ್‌ಗೆ ಸಹಾಯ ಮಾಡುವವರು ತಮ್ಮ ಲೆಕ್ಕಾಚಾರಗಳನ್ನು ಸರಿಯಾಗಿಟ್ಟುಕೊಳ್ಳಿ" ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಸಲ್ಮಾನ್ ಖಾನ್‌ಗೆ ಪಾಕಿಸ್ತಾನಿ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ಜೊತೆ ನಂಟಿದೆ ಎಂಬ ಆರೋಪವನ್ನೂ ಮಾಡಲಾಗಿದೆ.

ಯಾರು ಈ ಅನಿಲ್​ ಪಂಡಿತ್​?

ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರತಿನಿಧಿ ಎನ್ನಲಾದ ಅನಿಲ್ ಪಂಡಿತ್, ಸದ್ಯ ಅಮೆರಿಕದಿಂದಲೇ ತನ್ನ ಅಪರಾಧ ಜಾಲವನ್ನು ಕಾರ್ಯಾಚರಣೆ ಮಾಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈತ ಹರಿಯಾಣದ ಪಾಣಿಪತ್ ಮೂಲದವನು. ವಯಸ್ಸು 32 ವರ್ಷ. ಈತ ತನ್ನ ಕ್ರಿಮಿನಲ್ ಚಟುವಟಿಕೆಗಳ ಹೆಜ್ಜೆಗುರುತನ್ನು ಹರಿಯಾಣ, ದೆಹಲಿ, ಪುಣೆಯನ್ನು ದಾಟಿ ಕೆನಡಾ, ಥಾಯ್ಲೆಂಡ್​ ಮತ್ತು ದುಬೈವರೆಗೆ ವಿಸ್ತರಿಸಿಕೊಂಡು ಕೊನೆಗೆ ಅಮೆರಿಕ ತಲುಪಿದ್ದಾನೆ. ಪಾಸ್‌ಪೋರ್ಟ್ ಹೊಂದಿದ್ದ ಆತ 2023ರಲ್ಲಿ ಭಾರತ ತೊರೆದು ವಿದೇಶಕ್ಕೆ ತೆರಳಿದ್ದನು. ಅಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ನಂಟು ಹೊಂದಿರುವ ರಣದೀಪ್ ಮಲಿಕ್ ಎಂಬಾತನ ಸಂಪರ್ಕಕ್ಕೆ ಬಂದ ಬಳಿಕ, ಅಮೆರಿಕದ ಕ್ಯಾಲಿಫೋರ್ನಿಯಾ ತಲುಪಿ ಅಧಿಕೃತವಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ವಿದೇಶದಲ್ಲಿ ಕುಳಿತುಕೊಂಡೇ ಕಳೆದ ಆರು ತಿಂಗಳಿಂದ ಭಾರತದಲ್ಲಿ ತನ್ನದೇ ಆದ ಶೂಟರ್‌ಗಳ (ಬಂಧೂಕುಧಾರಿಗಳ) ನೆಟ್‌ವರ್ಕ್ ಬಳಸಿ ಸರಣಿ ಅಪರಾಧ ಕೃತ್ಯಗಳನ್ನು ಪಂಡಿತ್ ಎಸೆಗುತ್ತಿದ್ದಾನೆ. ಹರಿಯಾಣದ ಪಾಣಿಪತ್‌ನಲ್ಲಿ ಸುಲಿಗೆಗಾಗಿ ನಡೆದ ಹಲವಾರು ಗುಂಡಿನ ದಾಳಿ ಪ್ರಕರಣಗಳ ಹಿಂದೆ ಈತನ ಕೈವಾಡವಿತ್ತು. ಈ ಕೃತ್ಯಗಳಿಗಾಗಿ ವಿದೇಶಿ ನಿರ್ಮಿತ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿದ್ದು, ಇದು ತನಿಖಾ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹರಿಯಾಣ ಪೊಲೀಸರು ಮತ್ತು ವಿಶೇಷ ಕಾರ್ಯಪಡೆ (STF) ಕಾರ್ಯಾಚರಣೆ ನಡೆಸಿ ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶೂಟರ್‌ಗಳನ್ನು ಬಂಧಿಸಿವೆ. ಹರಿಯಾಣದಲ್ಲಿ ಸಕ್ರಿಯವಾಗಿರುವ ಸ್ಥಳೀಯ ಅಪರಾಧ ಜಾಲಗಳು ಹಾಗೂ ವಿದೇಶದಲ್ಲಿ ತಳವೂರಿರುವ ಭೂಗತ ಗ್ಯಾಂಗ್‌ಗಳ ನಡುವಿನ ಅವಿನಾಭಾವ ಸಂಬಂಧವನ್ನು ಬಯಲು ಮಾಡಲು ಈ ತನಿಖೆಗಳು ಅತ್ಯಂತ ನಿರ್ಣಾಯಕವಾಗಿವೆ. ಪಂಡಿತ್‌ನ ಈ ಕರಾಳ ಜಾಲವು ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ.

ಈ ಅನಿಲ್ ಪಂಡಿತ್ ಹೆಸರು ದೆಹಲಿಯಲ್ಲಿ ನಡೆದ ಮತ್ತೊಂದು ಗುಂಡಿನ ದಾಳಿ ಪ್ರಕರಣದಲ್ಲೂ ಕೇಳಿಬಂದಿತ್ತು. ದೆಹಲಿಯ ಪಶ್ಚಿಮ್ ವಿಹಾರ್ ಪ್ರದೇಶದಲ್ಲಿರುವ, ಪ್ರಸಿದ್ಧ ಗಾಯಕ ಗುರು ರಂಧಾವಾ ಹೆಚ್ಚಾಗಿ ಭೇಟಿ ನೀಡುತ್ತಿದ್ದ ಜಿಮ್ ಒಂದರ ಮೇಲೆ ನಡೆದ ಗುಂಡಿನ ದಾಳಿಯನ್ನು ಈತನೇ ಸಂಚು ರೂಪಿಸಿ ನಡೆಸಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ದೆಹಲಿ ಪೊಲೀಸ್ ಅಪರಾಧ ವಿಭಾಗ ಹಾಗೂ ವಿಶೇಷ ಸೆಲ್ ಕಾರ್ಯಾಚರಣೆ ನಡೆಸಿ, ಪಂಡಿತ್‌ನೊಂದಿಗೆ ಸಿಗ್ನಲ್ (Signal) ಆಪ್ ಮೂಲಕ ಸಂಪರ್ಕದಲ್ಲಿದ್ದ ನಾಲ್ವರು ಶೂಟರ್‌ಗಳನ್ನು ಬಂಧಿಸಿತ್ತು.

ದೆಹಲಿ ಶೂಟಿಂಗ್ ನಡೆದ ಕೇವಲ 15 ದಿನಗಳ ನಂತರ ಪುಣೆಯ ಜ್ಯುವೆಲ್ಲರಿ ಸ್ಟೋರ್ ಒಂದರಲ್ಲೂ ಗುಂಡಿನ ದಾಳಿ ನಡೆದಿತ್ತು. ಈ ಪ್ರಕರಣದಲ್ಲೂ ಅನಿಲ್ ಪಂಡಿತ್ ಹೆಸರು ಮುನ್ನೆಲೆಗೆ ಬಂತು. ಲಾರೆನ್ಸ್ ಬಿಷ್ಣೋಯ್ ಆಪ್ತ ಎನ್ನಲಾದ ಶುಭಮ್ ಲೋಂಕರ್ ಜತೆಗೂಡಿ ಈ ಕೃತ್ಯ ಎಸಗಲಾಗಿದೆ. ರಾಜಸ್ಥಾನದ ಹನುಮಂಗಢದವರಾದ ಮೂವರು ಶೂಟರ್‌ಗಳು ನಿರ್ದಿಷ್ಟವಾಗಿ ಈ ದಾಳಿಯನ್ನು ನಡೆಸಲು ಪುಣೆಗೆ ಬಂದಿದ್ದರು ಎಂಬುದನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಇದಲ್ಲದೆ, ಹರಿಯಾಣದಲ್ಲಿ ಸುಲಿಗೆಯ ಉದ್ದೇಶದಿಂದ ಗಾಯಕ ದಿಲೆರ್ ಖಾರಕಿಯಾ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲೂ ಪಂಡಿತ್ ಹೆಸರು ತಳುಕುಹಾಕಿಕೊಂಡಿದೆ. ಸೋನಿಪತ್‌ನಲ್ಲಿ ದೆಹಲಿ ಪೊಲೀಸರ ಕ್ರ್ರೈಮ್ ಬ್ರಾಂಚ್ ಮತ್ತು ಹರಿಯಾಣ ಎಸ್‌ಟಿಎಫ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ವೇಳೆ ಲಾರೆನ್ಸ್ ಗ್ಯಾಂಗ್‌ನ ಶೂಟರ್ ರೋಹಿತ್ ದಹಿಯಾ ಗಾಯಗೊಂಡಿದ್ದನು. ಒಟ್ಟಾರೆಯಾಗಿ ರಣದೀಪ್ ಮಲಿಕ್, ಹ್ಯಾರಿ ಬಾಕ್ಸರ್, ಹರ್ಮನ್ ಸಂಧು, ಅನಿಲ್ ಪಂಡಿತ್, ಟೈಸನ್ ಬಿಷ್ಣೋಯ್ ಮತ್ತು ಶುಭಮ್ ಲೋಂಕರ್ ಮುಂತಾದವರು ಈ ಜಾಲದ ಪ್ರಮುಖ ಲೀಡರ್​ಗಳಾಗಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮತ್ತೊಬ್ಬ ಕುಖ್ಯಾತ ವ್ಯಕ್ತಿ ಹರ್ಮನ್‌ವೀರ್ ಸಿಂಗ್ ಅಲಿಯಾಸ್ ಹರ್ಮನ್ ಸಂಧು ಕೂಡ ಸುದ್ದಿಯಲ್ಲಿದ್ದಾನೆ. ಪಂಜಾಬ್ ಮೂಲದ ರವೀಂದರ್ ಸಿಂಗ್ ಧಂಡಾ ಎಂಬ ಅಪರಾಧಿಯ ಡ್ರಗ್ಸ್ ಕಳ್ಳಸಾಗಣೆ ಜಾಲದೊಂದಿಗೆ ಈತನಿಗೆ ನಂಟಿದೆ. ಅಮೆರಿಕದ ನ್ಯಾಯಾಲಯವು ಈತನ ವಿರುದ್ಧ ಡ್ರಗ್ಸ್ ಮಾರಾಟ ಮತ್ತು ಕಳ್ಳಸಾಗಣೆ ಆರೋಪದ ಮೇಲೆ ಬಂಧನ ವಾರೆಂಟ್ ಹೊರಡಿಸಿತ್ತು. ಬಳಿಕ ಲಾಸ್ ಏಂಜಲೀಸ್‌ನಲ್ಲಿ ಅಮೆರಿಕದ ಏಜೆನ್ಸಿಗಳು 'ಆಪರೇಷನ್ ಹಾರ್ಡ್ ಬಾಲ್' ಮೂಲಕ ಲಾರೆನ್ಸ್ ಬಿಷ್ಣೋಯ್, ಜಗ್ಗು ಭಗವಾನ್‌ಪುರಿಯಾ ಮತ್ತು ರವೀಂದರ್ ಧಂಡಾ ಗ್ಯಾಂಗ್‌ಗಳ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿವೆ, (ಏಜೆನ್ಸೀಸ್​).