ಸಿನಿವಾಣಿ

ಆ್ಯಕ್ಷನ್​-ಕಟ್ ಹೇಳಲು ರೆಡಿಯಾದ ಬಾಲಿವುಡ್​ ಸುಂದರಿ ; ಬೀಚ್​ನಲ್ಲಿ ಬಿಂದಾಸ್ ದಿಶಾ

ಬಾಲಿವುಡ್​ ನಟಿ ದಿಶಾ ಪಟಾನಿ ನಿರ್ದೇಶನಕ್ಕಿಳಿದಿದ್ದಾರೆ. ಹಾಗಂತ ಪ್ರಾರಂಭದಲ್ಲೇ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳದೇ ಮ್ಯೂಸಿಕ್​ ವಿಡಿಯೋ ನಿರ್ದೇಶಿಸುತ್ತಿದ್ದಾರೆ. ಹೆಸರು "ಕ್ಯೂ ಕರೂ ಫಿಕರ್​'. ವೈಭವ್​ ಪಾನಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿಗೆ ವಾಯು ಸಾಹಿತ್ಯ ಹಾಗೂ ನಿಕಿತಾ ಗಾಂಧಿ ಧ್ವನಿಯಾಗಿದ್ದಾರೆ.

2015ರಲ್ಲಿ ತೆಲುಗಿನ "ಲೋರ್​' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ದಿಶಾ, ನಂತರ ಹೆಸರು ಮಾಡಿದ್ದು ಬಾಲಿವುಡ್​ನಲ್ಲಿ. "ಎಂಎಸ್​ ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ' ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ನಂತರ ಹಿಂತಿರುಗಿ ನೋಡಲಿಲ್ಲ. "ಭಾಗೀ', "ಮಲಂಗ್​', "ರಾಧೇ', "ಏಕ್​ ವಿಲನ್​ ರಿಟರ್ನ್ಸ್​' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಅವರು ಕೆಲವು ಸ್ಪೆಷಲ್​ ಹಾಡುಗಳಲ್ಲು ಮಿಂಚಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಟ ಟೈಗರ್​ ಶ್ರಾಫ್​ ಜತೆಗಿನ ಓಡಾಟದಿಂದ ಹೆಚ್ಚು ಸುದ್ದಿಯಾಗಿದ್ದ ದಿಶಾ, ಸದ್ಯ ಮೂರು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಸಿದ್ಧಾರ್ಥ್​ ಮಲ್ಹೋತ್ರಾಗೆ ನಾಯಕಿಯಾಗಿ "ಯೋಧಾ' ಚಿತ್ರದಲ್ಲಿ ನಟಿಸಿದ್ದು, ಅದರ ಚಿತ್ರೀಕರಣ ಪೂರ್ಣಗೊಂಡಿದೆ. "ಕಂಗುವ' ಮೂಲಕ ತಮಿಳು ನಟ ಸೂರ್ಯನಿಗೆ ಜೋಡಿಯಾಗಿ ಕಾಲಿವುಡ್​ಗೆ ಎಂಟ್ರಿ ಕೊಟ್ಟಿರುವ ಅವರು, "ಕಲ್ಕಿ 2898 ಎಡಿ' ಚಿತ್ರದಲ್ಲಿ ಪ್ರಭಾಸ್​, ದೀಪಿಕಾ, ಅಮಿತಾಭ್​ ಬಚ್ಚನ್​ ಜತೆ ತೆರೆ ಹಂಚಿಕೊಂಡಿದ್ದಾರೆ.
-ಏಜೆನ್ಸೀಸ್