ಈಗಾಗಲೇ ಬಾಲಿವುಡ್ನಲ್ಲಿ ನೈಜ ಘಟನೆಗಳನ್ನು ಆಧರಿಸಿ ಸಾಕಷ್ಟು ಸಿನಿಮಾಗಳು ಸಿದ್ಧವಾಗಿವೆ. ಅದರಲ್ಲೂ ಗಡಿ ಕದನದ ಹಿನ್ನೆಲೆಯಲ್ಲಿ ಮೂಡಿಬಂದ ಸಿನಿಮಾಗಳು ವೀಕ್ಷಕರಿಂದಲೂ ಮೆಚ್ಚುಗೆ ಗಿಟ್ಟಿಸಿಕೊಂಡಿವೆ. ಅದಕ್ಕೆ ಇತ್ತೀಚಿನ ಉರಿ; ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ಸಾಕ್ಷಿ. ಇದೀಗ ಅಂಥದ್ದೇ ಮತ್ತೊಂದು ದಾಳಿ ಹಿನ್ನೆಲೆಯನ್ನುಟ್ಟುಕೊಂಡು ಸಿನಿಮಾ ಮಾಡಲು ಬಾಲಿವುಡ್ನಲ್ಲಿ ಪ್ಲ್ಯಾನ್ ನಡೆದಿದ್ದು, ಅದಕ್ಕೆ ಅಜಯ್ ದೇವಗನ್ ಮುಂದಾಳತ್ವ ವಹಿಸಿಕೊಂಡಿದ್ದಾರೆ.
ಹೌದು, ಜೂನ್ 15ರಂದು ಇಂಡಿಯಾ ಚೀನಾ ಗಡಿ ಭಾಗ ಗಲ್ವಾನ್ನಲ್ಲಿ ನಡೆದ ಕಾಳಗವನ್ನೇ ಆಧರಿಸಿ ಸಿನಿಮಾ ಮಾಡುವ ಬಗ್ಗೆ ಅಜಯ್ ದೇವಗನ್ ನಿರ್ಧರಿಸಿದ್ದು, ಘೋಷಣೆ ಸಹ ಮಾಡಿದ್ದಾರೆ. 20 ಸೈನಿಕರ ಜೀವ ಹಾನಿಗೆ ಸೇಡು ತೀರಿಸಿಕೊಳ್ಳುವ ಕಥೆಯನ್ನೇ ಸಿನಿಮಾ ಮಾಡುವ ಯೊಜನೆ ಸಿದ್ಧವಾಗುತ್ತಿದ್ದು, ಪ್ರಮುಖ ಪಾತ್ರದಲ್ಲಿ ಅಜಯ್ ಅವರೇ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲು ಅಸಾಧ್ಯ. ನಿರ್ಮಾಣದಲ್ಲಿ ಕೈ ಜೋಡಿಸಿ ಹೊಸಬರಿಗೆ ನಟಿಸುವ ಅವಕಾಶ ನೀಡಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಜೂ.15ರಂದು ಭಾರತ ಹಾಗೂ ಚೀನಾ ನಡುವೆ ಭಾರೀ ಸಂಘರ್ಷ ನಡೆದಿತ್ತು, ಚೀನಾ ನಡೆಸಿದ್ದ ದಾಳಿಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿದೆ. ಗುಂಡಿನ ದಾಳಿ ಬದಿಗಿಟ್ಟು, ಕಲ್ಲು, ಕಬ್ಬಿಣದ ರಾಡ್ನಿಂದ ಉಭಯ ರಾಷ್ಟ್ರಗಳ ಸೈನಿಕರು ಪರಸ್ಪರ ಹೊಡೆದಾಡಿಕೊಂಡಿದ್ದರು. (ಏಜೆನ್ಸೀಸ್)