ಮುಂಬೈ: ಮುಂಬೈನ ಜನಪ್ರಿಯ ತಾಣಗಳ ಪೈಕಿ ಅಮಿತಾಭ್ ಬಚ್ಚನ್ ನಿವಾಸ 'ಪ್ರತೀಕ್ಷ' ಸಹ ಒಂದು. ಈಗ ಆ ಮನೆಯ ಒಂದು ಭಾಗವನ್ನು ಕೆಡವಲು ಬೃಹತ್ ಮುಂಬೈ ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
2017ರಲ್ಲಿ ಪಾಲಿಕೆಯು ರಸ್ತೆ ಅಗಲೀಕರಣ ಮಾಡುವ ನಿಟ್ಟಿನಲ್ಲಿ ತಯಾರಿ ನಡೆಸಿದಾಗ, ಅಮಿತಾಭ್ ಸೇರಿದಂತೆ ಏಳು ಮಂದಿ, ಅನಿಧಿಕೃತ ನಿರ್ಮಾಣ ಮಾಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಈ ಸಂಬಂಧ, ಬೃಹತ್ ಮುಂಬೈ ಮಹಾನಗರ ಪಾಲಿಕೆಯು ಅನಧಿಕೃತವಾಗಿ ಮನೆ ನಿರ್ಮಿಸಿದ್ದಕ್ಕಾಗಿ ನೋಟೀಸ್ ನೀಡಿತ್ತು.
ಆದರೆ, ಆ ನಂತರ ಈ ಪ್ರಕ್ರಿಯೆ ಕಾರಣಾಂತರಗಳಿಂದ ಮುಂದುವರೆದಿರಲಿಲ್ಲ. ಈಗ ಪಾಲಿಕೆ ಸದಸ್ಯರಾದ ಟುಲಿಪ್ ಬ್ರಿಯಾನ್ ಮಿರಾಂಡಾ ಅವರು, ಅಮಿತಾಭ್ ಸೇರಿದಂತೆ ಏಳು ಮಂದಿಯ ಮೇಲೆ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಆದಷ್ಟು ಬೇಗ ಅನಧಿಕೃತ ನಿರ್ಮಾಣವನ್ನು ಕೆಡವಿ, ರಸ್ತೆ ಅಗಲೀಕರಣ ಮಾಡಬೇಕು ಎಂದು ಹೋರಾಟ ನಡೆಸಿದ್ದಾರೆ. ಇದರಿಂದಾಗಿ, ಅಮಿತಾಭ್ ಅವರ ಮನೆಯ ಒಂದು ಭಾಗವನ್ನು ಕೆಡವಬೇಕಾಗುತ್ತದೆ.
ಈ ಸಂಬಂಧ ಪಾಲಿಕೆಯು ಪ್ರಕ್ರಿಯೆ ಪ್ರಾರಂಭಿಸಿದ್ದು, ಮುಂಬೈ ಸಬ್ಅರ್ಬನ್ ಕಲೆಕ್ಟರ್ ಸಿಟಿ ಸರ್ವೆ ಇಲಾಖೆಗೆ ಗಡಿರೇಖೆಯನ್ನು ನಿಗದಿಪಡಿಸುವುದಕ್ಕೆ ಸೂಚಿಸಿದೆ. ಗಡಿರೇಖೆ ತೀರ್ಮಾನವಾದ ನಂತರ, ಅಮಿತಾಭ್ ಅವರ ಪ್ರತೀಕ್ಷಾ ಮನೆಯ ಒಂದು ಭಾಗವನ್ನು ಕೆಡವಬೇಕಾಗುತ್ತದೆ. ಈ ಪ್ರಕ್ರಿಯೆಗೆ ಇನ್ನಷ್ಟು ದಿವಸ ಆಗಲಿದ್ದು, ಅಷ್ಟರಲ್ಲಿ ಅಮಿತಾಭ್ ಏನಾದರೂ ಮಾಡಿ, ತಮ್ಮ ಮನೆಯನ್ನು ಉಳಿಸಿಕೊಳ್ಳುತ್ತಾರಾ ಎಂಬ ಕುತೂಹಲ ಎಲ್ಲರಿಗೂ ಇದೆ.