ಸಿನಿವಾಣಿ

ಬಿಗ್​ಬಾಸ್ ಇತಿಹಾಸದಲ್ಲೇ ಬಿಗ್ಗೆಸ್ಟ್​ ಟ್ವಿಸ್ಟ್​: ಈ ಬಾರಿ ಒಂದಲ್ಲ ಎರಡು ಫೈನಲ್​, ಮಾಸ್​ ಎಲಿಮಿನೇಷನ್! Bigg Boss Kannada 12

Bigg Boss Kannada 12 : ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿಯಾಗಿರುವ ‘ಬಿಗ್​ಬಾಸ್ ಕನ್ನಡ ಸೀಸನ್ 12’ಗೆ ಭಾನುವಾರ ಸಂಜೆ 6ಕ್ಕೆ ಅದ್ದೂರಿ ಚಾಲನೆ ದೊರೆತಿದೆ. ನಟ, ನಿರೂಪಕ ಸುದೀಪ್ 19 ಸ್ಪರ್ಧಿಗಳನ್ನು ಆಹ್ವಾನಿಸಿ, ದೊಡ್ಮನೆ ಒಳಗೆ ಕಳುಹಿಸಿದ್ದಾರೆ. ಶೋ ಶುರುವಾಗಿ ಒಂದು ದಿನ ಕಳೆದಿದೆ. ಆದರೆ, ಎರಡನೇ ದಿನಕ್ಕೆ ಮೆಗಾ ಟ್ವಿಸ್ಟ್​ ಸಿಕ್ಕಿದೆ. ಬಿಗ್​ಬಾಸ್​ ಕನ್ನಡ ಇತಿಹಾಸದಲ್ಲೇ ಇದು ಮೊದಲು ಎಂದು ಹೇಳಬಹುದು.

ಹೌದು, ಈ ಬಾರಿ ಒಂದಲ್ಲ, ಎರಡು ಫೈನಲ್​ಗಳು ಇರಲಿವೆ. ಇದನ್ನು ಅಧಿಕೃತವಾಗಿ ಕಲರ್ಸ್​​ ಕನ್ನಡ ವಾಹಿನಿಯೇ ತಿಳಿಸಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಲಾಗಿದೆ. ಈ ನಡೆ ಕೇವಲ ವೀಕ್ಷಕರಿಗೆ ಮಾತ್ರವಲ್ಲ, ಸ್ಪರ್ಧಿಗಳಿಗೂ ಅಚ್ಚರಿ ತರಿಸಿದೆ.

ಬಿಗ್ಗೆಸ್ಟ್​ ಟ್ವಿಸ್ಟ್​ ಇನ್​ ಬಿಗ್​ಬಾಸ್​ ಎಂಬ ಬರಹದೊಂದಿಗೆ ಆರಂಭವಾಗಿರುವ ಪ್ರೋಮೋದಲ್ಲಿ ಈ ಸೀಸನ್​ ಯಾರು ಗೆಲ್ತಾರೆ ಅಂತ ನೋಡುವುದಕ್ಕೆ 100 ದಿನಗಳು ಬೇಕಾಗಿಲ್ಲ, ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ. ನಿಮ್ಮಲ್ಲಿ ಯಾರು? ಯಾವಾಗ? ಹೇಗೆ ಬೇಕಾದರೂ ಎಲಿಮಿನೇಟ್​ ಆಗಬಹುದು. ಒಬ್ಬೊಬ್ಬರಾಗಿ ಹೋಗಬಹುದು ಅಥವಾ ಗುಂಪು ಗುಂಪಾಗಿ ಎಲಿಮಿನೇಟ್​ ಆಗಬಹುದು. ಎಲಿಮಿನೇಷನ್​ ಭಯದಿಂದ ಮುಕ್ತರಾಗಬೇಕೆಂದರೆ, ಅದಕ್ಕೆ ಒಂದೇ ದಾರಿ ಎನ್ನುವ ಮೂಲಕ ಬಿಗ್​ಬಾಸ್​ ಒಂದು ಮೆಗಾ ಟ್ವಿಸ್ಟ್​ ನೀಡಿದೆ. ಆ ದಾರಿ ಯಾವುದು ಎಂದು ತಿಳಿದುಕೊಳ್ಳಲು ಇಂದಿನ ಎಪಿಸೋಡ್​ ಅನ್ನು ನೋಡಬೇಕಿದೆ. ಆದರೆ, ಬಿಗ್​ಬಾಸ್​ ಮನೆಯಲ್ಲಿ ಎರಡು ಫೈನಲ್​ ಎಂಬುದು ಇದೀಗ ಚರ್ಚೆಯ ವಿಷಯವಾಗಿದೆ.

ಇನ್ನು ಮೊದಲ ದಿನವೇ ರಕ್ಷಿತಾ ಶೆಟ್ಟಿ ಹೊರಹೋಗುವುದರೊಂದಿಗೆ ಈ ಸೀಸನ್ ಅನಿರೀಕ್ಷಿತವಾಗಿ ಆರಂಭವಾಗಿದೆ. ಸಾಮಾನ್ಯವಾಗಿ, ಸ್ಪರ್ಧಿಗಳಿಗೆ ಎಲಿಮಿನೇಷನ್ ಎದುರಿಸುವ ಮೊದಲು ಮನೆಯೊಳಗೆ ನೆಲೆಸಲು ಕೊಂಚ ಸಮಯ ನೀಡಲಾಗುತ್ತದೆ. ಆದರೆ, ಪ್ರೀಮಿಯರ್ ಆದ ಕೆಲವೇ ಗಂಟೆಗಳಲ್ಲಿ ರಕ್ಷಿತಾ ಹೊರನಡೆದಿರುವುದು ಈ ಸೀಸನ್ ತನ್ನ ಹಳೆಕಯ ಸಂಪ್ರದಾಯದಿಂದ ದೂರ ಸರಿದು ಸ್ಪರ್ಧಿಗಳಿಗೆ ಸಾಕಷ್ಟು ಸವಾಲು ಹಾಕುತ್ತದೆ ಎಂಬುದು ಸ್ಪಷ್ಟವಾಗಿದೆ.

ಇನ್ನು ರಕ್ಷಿತಾ ಬೇಗನೆ ಹೊರನಡೆದಿದ್ದರಿಂದ ಈಗಾಗಲೇ ತತ್ತರಿಸಿರುವ ಸ್ಪರ್ಧಿಗಳು ಈಗ ತಮ್ಮ ಆಟ ಎಷ್ಟು ಬೇಗನೆ ಕೊನೆಗೊಳ್ಳಬಹುದು ಎಂಬ ಅನಿಶ್ಚಿತತೆಯೊಂದಿಗೆ ಹೋರಾಡುತ್ತಿದ್ದಾರೆ ಮತ್ತು ಚಿಂತಿಸುತ್ತಿದ್ದಾರೆ. ಅಲ್ಲದೆ, ಮನೆಯೊಳಗೆ ಸ್ಪರ್ಧಿಗಳ ಉತ್ಸಾಹವು ಕೂಡ ತೀವ್ರಗೊಂಡಿದೆ. ಇನ್ನು ಸೀಸನ್ 12 ಹಿಂದೆಂದೂ ನೋಡಿರದ ಅನೇಕ ತಿರುವುಗಳನ್ನು ನೀಡುವ ನಿರೀಕ್ಷೆಗಳು ಇವೆ ಎಂಬುದನ್ನು ಇಂದು ಬಿಡುಗಡೆಯಾಗಿರುವ ಪ್ರೋಮೋ ಮೂಲಕ ಸುಳಿವು ನೀಡಲಾಗಿದೆ.

ಇನ್ನು ಡಬಲ್ ಫಿನಾಲೆ ಘೋಷಣೆಯು ಅಭಿಮಾನಿಗಳಲ್ಲಿ ಕುತೂಹಲ ಮತ್ತು ಉತ್ಸಾಹವನ್ನು ಹೆಚ್ಚಿಸಿದೆ. ವೀಕ್ಷಕರು ಹೆಚ್ಚಿನ ನಾಟಕ ಮತ್ತು ಮನರಂಜನೆಗಾಗಿ ಎದುರು ನೋಡುತ್ತಿರುವಾಗ ಸ್ಪರ್ಧಿಗಳು ಎರಡೆರಡು ಫೈನಲ್‌ಗಳಲ್ಲಿ ಬದುಕುಳಿಯಲು ಎಂದಿಗಿಂತಲೂ ಹೆಚ್ಚು ಕಾರ್ಯತಂತ್ರ ರೂಪಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಈ ಬಾರಿಯ ಶೋ ಆರಂಭದಲ್ಲೇ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.