ಸಿನಿವಾಣಿ

ಟಾಲಿವುಡ್​ ನಿರ್ಮಾಪಕನ ಕಾಲ್​ ಲೀಸ್ಟ್​ ರಹಸ್ಯ: ನಟಿ ಆಶು ರೆಡ್ಡಿಗೆ ಎದುರಾಯ್ತು ಭಾರೀ ಸಂಕಷ್ಟ

ಹೈದರಾಬಾದ್​: ಚಲ್​ ಮೋಹನ್​ ರಂಗ ಚಿತ್ರದ ಮೂಲಕ ಟಾಲಿವುಡ್​ನಲ್ಲಿ ಸಿನಿ ಜರ್ನಿ ಆರಂಭಿಸಿದ ನಟಿ ಆಶು ರೆಡ್ಡಿ (Ashu reddy), ಬಿಗ್​ಬಾಸ್​ ಸಿಸನ್​ 3ರಲ್ಲಿ ಭಾಗವಹಿಸುವ ಮೂಲಕ ತುಂಬಾ ಖ್ಯಾತಿಯನ್ನು ಪಡೆದಿದ್ದಾರೆ. ನೋಡಲು ಸ್ವಲ್ಪ ಸಮಂತಾರನ್ನೇ ಹೋಲುವ ಆಶು ರೆಡ್ಡಿಯನ್ನು ಟಾಲಿವುಡ್ (Tollywood)​ನಲ್ಲಿ ಜೂನಿಯರ್​ ಸಮಂತಾ ಅಂತಾನೇ ಕರೆಯುತ್ತಾರೆ. ಅಲ್ಲದೆ, ಆಗಾಗ ವಿವಾದಗಳಿಂದಲೂ ಆಶು ರೆಡ್ಡಿ ಸುದ್ದಿಯಾಗುತ್ತಿರುತ್ತಾರೆ.

ಯಾರೊಂದಿಗೂ ಯಾವುದೇ ಸಂಬಂಧವಿಲ್ಲ

ಇದೀಗ ತಮ್ಮ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಆಶು ರೆಡ್ಡಿ ಗುಡುಗಿದ್ದಾರೆ. ಟಾಲಿವುಡ್​ ಡ್ರಗ್​ ಕೇಸ್​ನಲ್ಲಿ ತಮ್ಮ ವಿರುದ್ಧ ಮಾಡಿರುವ ಎಲ್ಲ ಆರೋಪಗಳನ್ನು ನಟಿ ತಳ್ಳಿಹಾಕಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಆಶು ರೆಡ್ಡಿ, ಕೆಲವು ಮಾಧ್ಯಮಗಳಲ್ಲಿ ನನ್ನ ಸಂಬಂಧಗಳ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ, ವಾಸ್ತವವಾಗಿ ನನಗೆ ಯಾರೊಂದಿಗೂ ಯಾವುದೇ ಸಂಬಂಧವಿಲ್ಲ. ಇವೆಲ್ಲವೂ ಸುಳ್ಳು ಸುದ್ದಿ. ಅಗತ್ಯ ಬಿದ್ದರೆ ಸಮಯ ಬಂದಾಗ ಸಂಬಂಧಪಟ್ಟವರಿಗೆ ಸತ್ಯಾಸತ್ಯತೆ ವಿವರಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಲ್ಲದೆ, ತಮ್ಮ ಫೋನ್​ ನಂಬರ್​ ಅನ್ನು ಸಾರ್ವಜನಿಕ ಪ್ರದೇಶದಲ್ಲಿ ತನ್ನ ಅನುಮತಿ ಇಲ್ಲದೆ ಪ್ರದರ್ಶಿಸುತ್ತಿರುವವರಿಗೂ ಆಶು ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಇದನೆಲ್ಲ ಸಹಿಸಿ ಕೂರುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.

ನಿರ್ಮಾಪಕನ ಬಂಧನ

ಇತ್ತೀಚೆಗಷ್ಟೇ ಡ್ರಗ್ಸ್​ ಕೇಸ್​ನಲ್ಲಿ ಕಬಾಲಿ ನಿರ್ಮಾಪಕ ಕೆ.ಪಿ. ಚೌಧರಿ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣ ಟಾಲಿವುಡ್​ನಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದ್ದು, ಆಶು ರೆಡ್ಡಿ ಹೆಸರು ಸಹ ಡ್ರಗ್ಸ್​ ಕೇಸ್​ನಲ್ಲಿ ಕೇಳಿಬರುತ್ತಿದೆ. ಹೀಗಾಗಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಊಹಾಪೋಹಗಳಿಗೆ ಇನ್​ಸ್ಟಾಗ್ರಾಂನಲ್ಲಿ ಆಶು ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಡ್ರಗ್ಸ್​ ಪೂರೈಕೆ

ನಿರ್ಮಾಪಕ ಕೆ.ಪಿ. ಚೌಧರಿ, ಅನೇಕ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಪುತ್ರರಿಗೆ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಕೆಪಿ ಚೌಧರಿ ಅವರ ಕಾಲ್​ ಲೀಸ್ಟ್​ ಅನ್ನು ಡಿಕೋಡ್ ಮಾಡಿದ್ದಾರೆ. ಇದರೊಂದಿಗೆ ಬಿಗ್ ಬಾಸ್ ಸ್ಪರ್ಧಿ ಅಶುರೆಡ್ಡಿ ಹೆಸರು ಅಹ ಮುನ್ನೆಲೆಗೆ ಬಂದಿದೆ. ಕೆ.ಪಿ.ಚೌಧರಿ ನೂರಾರು ಸಲ ಆಶು ರೆಡ್ಡಿಗೆ ಫೋನ್ ಮಾಡಿ ಮಾತಾಡಿದ್ದಾರೆ. ಅಶುರೆಡ್ಡಿ ಅಲ್ಲದೆ, ತೆಲುಗು ಸಿನಿಮಾಗಳಲ್ಲಿ ಕೆಲ ಐಟಂ ಸಾಂಗ್ ಮಾಡಿರುವ ನಟಿ ಸೇರಿದಂತೆ 12 ಮಂದಿಯ ಹೆಸರನ್ನು ಕೆ.ಪಿ.ಚೌಧರಿ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.

ಈ ಪ್ರಕರಣದ ಮುಂದಿನ ತನಿಖೆಯ ಭಾಗವಾಗಿ ಅಶುರೆಡ್ಡಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಬಹುದು ಎಂದು ಮಾಧ್ಯಮಗಳಲ್ಲಿ ಉಲ್ಲೇಖಿಸಲಾಗಿದೆ. ಇಂಡಸ್ಟ್ರಿಯಲ್ಲಿಯೂ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಈ ವಿಚಾರವಾಗಿ ಆಶುರೆಡ್ಡಿ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)