ಸಿನಿವಾಣಿ

ಅದು ನನ್ನ ಅತ್ಯಂತ ದುಃಖಮಯ ದಿನ; ಬಿಗ್​ಬಾಸ್ ವಿನ್ನರ್ ಪಾವಗಡ ಮಂಜು ಹೇಳಿದ್ದು ಯಾವುದರ ಬಗ್ಗೆ?

ಬೆಂಗಳೂರು: ಬಿಗ್​ಬಾಸ್​ ಕನ್ನಡ ಸೀಸನ್​-8ರ ವಿನ್ನರ್ ಪಾವಗಡ ಮಂಜು ಇದೀಗ ವಿಜಯವಾಣಿ-ದಿಗ್ವಿಜಯ ನ್ಯೂಸ್ ಕ್ಲಬ್​ಹೌಸ್ ಸಂವಾದದಲ್ಲಿ ಮಾತನಾಡುತ್ತಿದ್ದು, ಹಲವಾರು ವಿಷಯಗಳ ಕುರಿತು ಮಾತನಾಡುತ್ತಿದ್ದಾರೆ.

ಬಿಗ್​​ಬಾಸ್​ನಲ್ಲಿನ ಅನುಭವ-ಅನಿಸಿಕೆಗಳನ್ನು ಹೇಳಿಕೊಂಡಿರುವ ಅವರು ಸಾಕಷ್ಟು ವಿಚಾರಗಳನ್ನು ವಿಜಯವಾಣಿ ಕ್ಲಬ್​ನಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ. ಕರೊನಾ-ಲಾಕ್​ಡೌನ್​ ಕಾರಣದಿಂದಾಗಿ ಬಿಗ್​ಬಾಸ್​ ಅರ್ಧಕ್ಕೇ ನಿಂತುಹೋದ ಆ 72ನೇ ದಿನ ನನ್ನ ಜೀವಮಾನದ ಅತ್ಯಂತ ದುಃಖದ ದಿನ. ಯಾರಿಗೂ ಸಿಕ್ಕದ ಅವಕಾಶ ಸಿಕ್ಕಿದೆ. ಸಾವಿರ ಕನಸು ಕಟ್ಟಿಕೊಂಡು ಬಂದಿರುವಾಗ ಹೀಗಾಗಬೇಕಾ, ಭಗವಂತ ನನಗೆ ಏಕೆ ಹೀಗೆ ಮಾಡಿದ ಎಂದು ತುಂಬಾ ಬೇಜಾರಾಗಿತ್ತು ಎಂದು ಹೇಳಿದ್ದಾರೆ.

ಇನ್ನು ಬಿಗ್​ಬಾಸ್ ಮನೆಯಿಂದ ಹೊರಬಂದಾಗ ನನ್ನ ಸ್ನೇಹಿತರೇ 2-3 ಜನ ತೀರಿಹೋಗಿದ್ದರು. ಆಗ ಇಂಥ ಸಮಸ್ಯೆಗಳ ನಡುವೆಯೇ ಶೋ ನಡೆಯಬೇಕಾ ಅಂತನೂ ಅನಿಸಿತ್ತು. ನಂತರ ಅದು ಪುನಃ ಆರಂಭವಾದಾಗ ಭಗವಂತ ನನ್ನ ಗೋಳು ನೋಡಲಾಗದೆ ಮತ್ತೆ ಅದು ಶುರು ಆಗುವ ಹಾಗೆ ಮಾಡಿದ ಅಂತ ತುಂಬಾ ಸಂತೋಷವಾಗಿತ್ತು ಎಂದು ಮಂಜು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಇನ್ನು ದಿವ್ಯಾ ಸುರೇಶ್ ಅವರನ್ನು ಮದುವೆ ಆಗುವ ಯೋಚನೆ ಇದೆಯಾ ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಅಂಥ ಯೋಚನೆ ಏನಿಲ್ಲ. ಅವರೊಂದಿಗೆ ಫ್ರೆಂಡ್​ ಆಗಿಯೇ ಇರಲು ಇಚ್ಛೆ ಪಡುತ್ತೇನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ಕ್ಲಬ್​ಹೌಸ್​ ಸಂವಾದದಲ್ಲಿ ಪಾವಗಡ ಮಂಜು ಜತೆ ಮಾತನಾಡಲು ಈ ಕೆಳಗಿನ ಲಿಂಕ್ ಕ್ಲಿಕ್​ ಮಾಡಿ. https://www.clubhouse.com/room/xB3ebrpd