ಸಿನಿವಾಣಿ

ಡ್ರಗ್ಸ್​ನಿಂದಾಗಿ ಕೆಲಸ ಕಳೆದುಕೊಳ್ಳುತ್ತಾರಾ ಭಾರತಿ ಸಿಂಗ್​?

ಮುಂಬೈ: 'ದಿ ಕಪಿಲ್​ ಶರ್ಮ ಶೋ' ಕಾರ್ಯಕ್ರಮದಿಂದ ಜನಪ್ರಿಯ ನಟಿ ಭಾರತಿ ಸಿಂಗ್​ ಅವರನ್ನು ಕಿತ್ತು ಹಾಕಲಾಯ್ತಾ?

ಇಂಥದ್ದೊಂದು ಪ್ರಶ್ನೆ ಬರುವುದಕ್ಕೂ ಕಾರಣವಿದೆ. ಅದೇನೆಂದರೆ, ಕಾಮಿಡಿಗೆ ಹೆಸರುವಾಸಿಯಾಗಿರುವ ಭಾರತಿ ಸಿಂಗ್​ ಅವರಿಗೆ ಡ್ರಗ್ಸ್​ ಜಾಲದೊಂದಿಗೆ ನಂಟಿದೆ ಎಂಬ ಕಾರಣಕ್ಕೆ ನಾಕೋರ್ಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು ಇತ್ತೀಚೆಗಷ್ಟೇ ಅರೆಸ್ಟ್​ ಮಾಡಿದ್ದರು. ಆದರೆ, ಒಂದೇ ದಿನಕ್ಕೆ ಭಾರತಿ ಮತ್ತು ಆಕೆಯ ಪತಿ ಹರ್ಷ್​​ಗೆ ಬೇಲ್​ ಸಿಕ್ಕಿದ್ದರಿಂದ ಇಬ್ಬರೂ ಹೊರಗೆ ಬಂದಿದ್ದರು.

ಆದರೆ, ಡ್ರಗ್ಸ್​ ವಿಷಯದಲ್ಲಿ ಕಳಂಕಿತರಾಗಿರುವ ಭಾರತಿ ಸಿಂಗ್​ ಅವರನ್ನು ಕಾರ್ಯಕ್ರಮದಿಂದ ಹೊರಗೆ ಕಳುಹಿಸಲಾಗಿದೆ ಎಂಬಂಥ ಸುದ್ದಿಯೊಂದು ಒಂದೆರೆಡು ದಿನಗಳಿಂದ ವಿಪರೀತವಾಗಿ ಕೇಳಿ ಬರುತ್ತಿದೆ. ಹಾಗಾದರೆ, ಭಾರತಿ ಕೆಲಸ ಕಳೆದುಕೊಂಡರಾ ಎಂಬ ಪ್ರಶ್ನೆ ಬರಬಹುದು.

ಖಂಡಿತಾ ಇಲ್ಲ ಎಂಬ ಉತ್ತರ 'ದಿ ಕಪಿಲ್​ ಶರ್ಮ ಶೋ'ನಲ್ಲಿ ಭಾರತಿ ಜತೆಗೆ ನಟಿಸುತ್ತಿರುವ ಕೃಷ್ಣ ಅವರಿಂದ ಬರುತ್ತದೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಆ ತರಹ ಸುದ್ದಿ ನಾನು ಇದುವರೆಗೂ ಕೇಳಿಲ್ಲ. ಹಾಗೆಯೇ ಪ್ರೊಡಕ್ಷನ್​ ಹೌಸ್​ ಆಗಲೀ, ಚಾನಲ್​ ಕಡೆಯಿಂದಾಗಲೀ ಭಾರತಿ ಅವರನ್ನು ಕಿತ್ತು ಹಾಕಬೇಕು ಎಂಬ ಯಾವುದೇ ಆದೇಶ ಬಂದಿಲ್ಲ' ಎನ್ನುತ್ತಾರೆ.

ಈ ಕುರಿತು ಮಾತನಾಡಿರುವ ಮತ್ತೊಬ್ಬ ನಟ ಕಿಕು ಶಾರ್ದಾ, 'ನಿನ್ನೆಯಷ್ಟೇ ಚಿತ್ರೀಕರಣ ಮಾಡಿದ್ದೇವೆ ಮತ್ತು ನಿನ್ನೆಯ ಚಿತ್ರೀಕರಣದಲ್ಲಿ ಭಾರತಿ ಸಹ ಇದ್ದರು. ಹಾಗಾಗಿ ಅವರನ್ನು ಕಾರ್ಯಕ್ರಮದಿಂದ ಕಿತ್ತು ಹಾಕಲಾಗಿದೆ ಎಂಬ ಸುದ್ದಿಗಳೆಲ್ಲಾ ಅಪ್ಪಟ ಸುಳ್ಳು' ಎಂದು ಅವರು ಹೇಳಿದ್ದಾರೆ.