'ಭಜರಂಗಿ 2' ಚಿತ್ರದ ಬಾಕಿ ಉಳಿದಿರುವ ದೃಶ್ಯಗಳ ಚಿತ್ರೀಕರಣ ಮತ್ತೆ ಪ್ರಾರಂಭವಾಗಿದೆ. ನೆಲಮಂಗಲ ಬಳಿ ಇರುವ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿರುವ ಸೆಟ್ನಲ್ಲಿ ಚಿತ್ರೀಕರಣ ಇದೀಗ ಶುರುವಾಗಿದೆ.
ಈ ಕುರಿತು ಜಯಣ್ಣ ಫಿಲಂಸ್ ಟ್ವೀಟ್ ಮಾಡಿದೆ. 'ಮತ್ತೆ ಭರ್ಜರಿಯಾಗಿ ಸಾಗುತ್ತಿದೆ 'ಕರುನಾಡ ಚಕ್ರವರ್ತಿ' ಶಿವಣ್ಣ ಅಭಿನಯದ 'ಭಜರಂಗಿ 2' ಚಿತ್ರದ ಚಿತ್ರೀಕರಣ' ಎಂದು ಬರೆಯುವುದರ ಜತೆಗೆ ಒಂದು ಫೋಟೋ ಸಹ ಶೇರ್ ಮಾಡಲಾಗಿದೆ. ಈ ಬ್ಲಾಕ್ ಅಂಡ್ ವೈಟ್ ಫೋಟೋದಲ್ಲಿ ಯಾರೋ ಮೇಲಿನಿಂದ ನೇತಾಡುತ್ತಿರುವ ಹಾಗೆ ಕಾಣುತ್ತಿದ್ದು, ಯಾರು? ಯಾಕೆ? ಏನು? ಎಂಬ ಯಾವ ವಿಷಯವನ್ನೂ ಬಹಿರಂಗ ಮಾಡಲಾಗಿಲ್ಲ.
ಅಂದಹಾಗೆ, 'ಭಜರಂಗಿ 2' ಚಿತ್ರದ ಚಿತ್ರೀಕರಣ ಮಾರ್ಚ್ನಲ್ಲೇ ಮುಗಿಯಬೇಕಿತ್ತು. ಕೇವಲ ಏಳೆಂಟು ದಿನಗಳ ಮಾತ್ರ ಚಿತ್ರೀಕರಣ ಬಾಕಿ ಇದ್ದು, ಇನ್ನೆಲ್ಲವನ್ನೂ ಮುಗಿಸಲಾಗಿತ್ತು. ಆದರೆ, ಇನ್ನೇನು ಚಿತ್ರತಂಡದವರು ಬಾಕಿ ಇರುವ ಚಿತ್ರೀಕರಣ ಮುಗಿಸಬೇಕು ಎನ್ನುವುಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಯಿತು.
ಈಗ ಲಾಕ್ಡೌನ್ ಮುಗಿದು, ಕರೊನಾ ಹಾವಳಿ ಕಡಿಮೆಯಾಗುತ್ತಿದೆ. ಇನ್ನೊಂದು ಕಡೆ ಹಲವು ಚಿತ್ರತಂಡಗಳು ಚಿತ್ರೀಕರಣ ಪ್ರಾರಂಭಿಸಿವೆ. ಈ ಮಧ್ಯೆ, 'ಭಜರಂಗಿ 2' ಚಿತ್ರದ ಚಿತ್ರೀಕರಣ ಸಹ ಪ್ರಾರಂಭವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕುಂಬಳಕಾಯಿ ಒಡೆಯಲಾಗುತ್ತದೆ.
'ಭಜರಂಗಿ 2' ಚಿತ್ರದಲ್ಲಿ ಶಿವರಾಜಕುಮಾರ್, ಭಾವನಾ ಮೆನನ್, ಶ್ರುತಿ, ಶಿವರಾಜ್ ಕೆ.ಆರ್. ಪೇಟೆ, 'ಭಜರಂಗಿ' ಲೋಕಿ ಮುಂತಾದವರು ಅಭಿನಯಿಸಿದ್ದಾರೆ. ಇನ್ನು ಹರ್ಷ ಈ ಚಿತ್ರಕ್ಕೆ ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿರುವ ಈ ಚಿತ್ರದ ಟೀಸರ್, ಶಿವರಾಜಕುಮಾರ್ ಅವರ ಹುಟ್ಟುಹಬ್ಬದಂದು ಕಳೆದ ತಿಂಗಳು ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯವಾಗಿದೆ.