ಸಿನಿವಾಣಿ

ಅಪ್ಪು ಜನ್ಮದಿನದಂದು ರಾಜ್​ ಕುಟುಂಬದ ಅಭಿಮಾನಿಗಳಿಗೆ ಡಬಲ್ ಧಮಕಾ!

ನಟ ಪುನೀತ್ ರಾಜ್​ಕುಮಾರ್ ಜನ್ಮದಿನದಂದು ಅವರು ನಾಯಕನಾಗಿ ಅಭಿನಯಿಸಿದ್ದ ಕೊನೆಯ ಸಿನಿಮಾ ‘ಜೇಮ್ಸ್’ ಬಿಡುಗಡೆಯಾಗಲಿದೆ. ಅಪ್ಪು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಈ ಕೊನೆಯ ಚಿತ್ರವನ್ನು ಸಂಭ್ರಮಿಸಲು ಇಡೀ ಕರುನಾಡಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ, ಇದೀಗ ಅಪ್ಪು ವಿಚಾರಕ್ಕೆ ಅಲ್ಲದೇ ನಟ ಶಿವರಾಜ್​ಕುಮಾರ್ ಅಭಿನಯದ ‘ಬೈರಾಗಿ’ ಚಿತ್ರದ ಟೀಸರ್ ಕೂಡಾ ಅಂದೆ ರಿಲೀಸ್ ಆಗಲಿದ್ದು, ಮಾರ್ಚ್ 17 ರಂದು ರಾಜ್ ​ಕುಟುಂಬದ ಅಭಿಮಾನಿಗಳಿಗೆ ಡಬಲ್ ಧಮಕಾದ ಖುಷಿ ಲಭಿಸಲಿದೆ.
ಹೌದು, ‘ಜೇಮ್ಸ್’ ಸಿನಿಮಾ ತೆರೆಗಪ್ಪಳಿಸಲಿರುವ ಸಮಯದಲ್ಲೇ, ಶಿವಣ್ಣನ ‘ಬೈರಾಗಿ’ ಚಿತ್ರದ ಟೀಸರ್ ಸಹ ಚಿತ್ರಮಂದಿರಗಳಲ್ಲೇ ತೆರೆಕಾಣಲಿದೆ. ಅದು, ಹೇಗೆ ಅಂತೀರಾ...? ‘ಜೇಮ್ಸ್’ ಪ್ರದರ್ಶನದ ವೇಳೆ ‘ಬೈರಾಗಿ’ ಟೀಸರ್ ಕಾಣಿಸಿಕೊಳ್ಳಲಿದೆ. ಪುನೀತ್ ಜನ್ಮದಿನದ ಸಂಭ್ರಮಾಚರಣೆ, ‘ಜೇಮ್ಸ್’ ಚಿತ್ರದ ರಿಲೀಸ್ ಸಂಭ್ರಮಾಚರಣೆಯ ಜತೆಗೆ ಈಗ ‘ಬೈರಾಗಿ’ ಟೀಸರ್ ಬಿಡುಗಡೆಯ ಸಂಭ್ರಮಾಚರಣೆ ಕೂಡಾ ಸೇರಿಕೊಳ್ಳಲಿದೆ ಎಂದು ಸ್ವತಃ ‘ಬೈರಾಗಿ’ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೆ.
‘ಬೈರಾಗಿ’ ಟೀಸರ್ ಬಿಡುಗಡೆಯ ಬಗ್ಗೆ ಚಿತ್ರದ ನಿರ್ದೇಶಕ ವಿಜಯ್ ಮಿಲ್ಟನ್ ಟ್ವೀಟ್ ಮಾಡಿದ್ದು, ‘‘ಪವರ್​ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸಲು ಇಡೀ ಕರ್ನಾಟಕದೊಂದಿಗೆ ‘ಬೈರಾಗಿ’ ತಂಡ ಕೂಡಾ ಸೇರಿಕೊಳ್ಳಲಿದೆ. ಮಾರ್ಚ್ 17ರಿಂದ ಚಿತ್ರಮಂದಿರದಲ್ಲಿ ‘ಬೈರಾಗಿ’ ಟೀಸರ್ ಪ್ರದರ್ಶನವಾಗಲಿದೆ’’ ಎಂದು ತಿಳಿಸಿದ್ದಾರೆ. ಸದ್ಯ, ವಿಜಯ್ ಮಿಲ್ಟನ್ ಅವರ ಈ ಖುಷಿ ಕೊಡುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.