ಸಿನಿವಾಣಿ

ಫಿಕ್ಸ್​ ಆಯ್ತು 'ಬೆಲ್​ ಬಾಟಮ್​' ರಿಲೀಸ್​ ಡೇಟ್​ ... ಬಿಡುಗಡೆ ಯಾವಾಗ ಗೊತ್ತಾ?

manjunathktgns

ಮುಂಬೈ: ಕರೊನಾ ಮತ್ತು ಲಾಕ್​ಡೌನ್​ನ ನೆಪವೊಡ್ಡಿ, ಚಿತ್ರೀಕರಣ ಶುರು ಮಾಡುವುದಕ್ಕೆ ಇನ್ನೂ ಮೀನಾ-ಮೇಷ ಎಣಿಸುತ್ತಿದ್ದಾರೆ. ಆದರೆ, ಅಕ್ಷಯ್​ ಕುಮಾರ್​ ಮಾತ್ರ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಗುತ್ತಿದ್ದಂತೆಯೇ, 'ಬೆಲ್​ ಬಾಟಮ್​' ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದ ಬಿಡುಗಡೆಯ ದಿನಾಂಕ ಸಹ ಫಿಕ್ಸ್​ ಆಗಿದೆ.

ಹೌದು, 'ಬೆಲ್​ ಬಾಟಮ್​' ಚಿತ್ರದ ಚಿತ್ರೀಕರಣ ಇದೀಗ ಮುಗಿದಿದ್ದು, ರಿಲೀಸ್​ ಡೇಟ್​ ಫಿಕ್ಸ್​ ಆಗಿದೆ. ಚಿತ್ರವನ್ನು 2021ರ ಏಪ್ರಿಲ್​ 02ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ಮಾನಿಸಿದ್ದು, ಈಗಾಗಲೇ ಅಕ್ಷಯ್​ ಕುಮಾರ್​ ಅವರೇ ಚಿತ್ರ ಬಿಡುಗಡೆಯ ಘೋಷಿಸುವ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.

'ಬೆಲ್​ ಬಾಟಮ್​' ಚಿತ್ರದ ಶೂಟಿಂಗ್​ ಶುರುವಾಗಿದ್ದು ಆಗಸ್ಟ್​ ಎರಡನೆಯ ವಾರದಲ್ಲಿ. ಭಾರತದಲ್ಲಿ ಕರೊನಾ ಹಾವಳಿ ಹೆಚ್ಚಿರುವ ಕಾರಣ, ಚಿತ್ರತಂಡದವರು ಆಗಸ್ಟ್​ 5ರಂದು ಚಾರ್ಟರ್ಡ್​ ಫ್ಲೈಟ್​ನಲ್ಲಿ ಸ್ಕಾಟ್​ಲ್ಯಾಂಡ್​ಗೆ ಪ್ರಯಾಣ ಮಾಡಿತ್ತು. ಅಲ್ಲೇ ಚಿತ್ರೀಕರಣ ಪ್ರಾರಂಭಿಸಿತ್ತು. ಇದೀಗ 50 ದಿನಗಳ ಆ ಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿದ್ದು, ಬುಧವಾರ ಚಿತ್ರೀಕರಣ ಅಂತಿಮವಾಗಿದೆ.

ಚಿತ್ರೀಕರಣ ಮುಗಿದಿರುವ ಖುಷಿಯನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿರುವ ಅಕ್ಷಯ್​ ಕುಮಾರ್, 'ಒಬ್ಬಂಟಿಯಾಗಿ ನಾವೇನೂ ಮಾಡುವುದಕ್ಕೆ ಸಾಧ್ಯವಿಲ್ಲ. ಜತೆಯಾಗಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆ 'ಬೆಲ್​ ಬಾಟಮ್​' ಚಿತ್ರದ ಚಿತ್ರೀಕರಣ ಮುಗಿದಿರುವುದು. ಟೀಮ್​ವರ್ಕ್​ನಿಂದ ಇದು ಸಾಧ್ಯವಾಗಿದ್ದು, ಕಡಿಮೆ ಸಮಯದಲ್ಲಿ ಚಿತ್ರವನ್ನು ಮುಗಿಸುವುದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು' ಎಂದು ಅಕ್ಷಯ್​ ಕುಮಾರ್​ ಹೇಳಿಕೊಂಡಿದ್ದಾರೆ.

'ಬೆಲ್​ ಬಾಟಮ್​' ಚಿತ್ರವನ್ನು ರಂಜಿತ್​ ತಿವಾರಿ ಎನ್ನುವವರು ನಿರ್ದೇಶಿಸಿದ್ದು, ಪೂಜಾ ಎಂಟರ್​ಟೈನ್​ಮೆಂಟ್​ ಸಂಸ್ಥೆಯಡಿ ವಾಶು ಭಾಗ್ನಾನಿ ಮತ್ತು ಜಾಕಿ ಭಾಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್​ ಆಗಿದ್ದು ಅಕ್ಷಯ್​ ಕುಮಾರ್ ಜತೆಗೆ ವಾಣಿ ಕಪೂರ್​, ಲಾರಾ ದತ್ತ, ಹ್ಯೂಮಾ ಖುರೇಷಿ ಸೇರಿದಂತೆ ಹಲವರು ನಟಿಸಿದ್ದಾರೆ.