ಬೆಂಗಳೂರು: ರಿಷಬ್ ಶೆಟ್ಟಿ, ಹರಿಪ್ರಿಯಾ ನಟನೆಯ ’ಬೆಲ್ ಬಾಟಂ‘ ಸಿನಿಮಾ ಕಳೆದ ವರ್ಷ ತೆರೆಕಂಡು ಭರ್ಜರಿ ಶತದಿನೋತ್ಸವ ಆಚರಿಸಿದೆ. 2019ರ ಟಾಪ್ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗೊತ್ತಿರುವ ವಿಚಾರ. ಇದೀಗ ಇದೇ ಚಿತ್ರ ಮತ್ತೆ ಸುದ್ದಿಯಲ್ಲಿದೆ ಎಂದರೆ ನೀವು ನಂಬಲೇಬೇಕು.
ಹೌದು, ಅದು 2019 ಮಾರ್ಚ್ 10ರ ಭಾನುವಾರ ರಾತ್ರಿ 9 ಗಂಟೆ ಶೋ. ಬೆಂಗಳೂರಿನ ವೀರೇಶ ಚಿತ್ರಮಂದಿರದಲ್ಲಿ ಬೆಲ್ಬಾಟಂ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿತ್ತು. ಅದೇ ವೇಳೆ ಕುಟುಂಬದೊಟ್ಟಿಗೆ ಸಿನಿಮಾ ನೋಡೋಕೆ ಸ್ವತಃ ನಿರ್ದೇಶಕ ಜಯತೀರ್ಥ ತೆರಳಿದ್ದರು. ನೇರವಾಗಿ ಬ್ಲಾಕ್ ಟಿಕೆಟ್ ಮಾರುತ್ತಿದ್ದ ವ್ಯಕ್ತಿ ಬಳಿ ಹೋಗಿ ಸಿನಿಮಾ ಬಗ್ಗೆ ಮಾತಿಗಿಳಿಸಿದರು. ಆತ ಬಾಲ್ಕನಿ 200, ಬಾಲ್ಕನಿ 200.. ಎಂದು ಮಾತು ಶುರುವಿಟ್ಟುಕೊಂಡ..
‘ಸಿನಿಮಾ ಹೆಂಗೆ ಕಿತ್ಕೊಂಡ್ ಹೋಗ್ತಿದೆ ಗೊತ್ತ.. ಹೌಸ್ಫುಲ್.. ಹೋದವಾರ ಏನೂ ಇರಲಿಲ್ಲ. ಈ ವಾರ ಡಬಲ್ ಆಗಿದೆ.. ಸುಮ್ಮನೆ ಕೊಚ್ಚು ಕೊಚ್ಚು ಸಿನಿಮಾ ಯಾರ್ ನೋಡ್ತಾರೆ. ಬಾಲ್ಕಿನಿ 200 ರೂ. ಬೇಕಾದ್ರೆ ತಗೊಳಿ.. ಇಲ್ಲಾಂದ್ರೆ ಇಲ್ಲ.. ಇನ್ನು 10 ನಿಮಿಷದಲ್ಲಿ ಎಲ್ಲ ಟಿಕೆಟ್ ಖಾಲಿ ಮಾಡ್ತಿನಿ ನೋಡಿ..‘ಎಂಬ ಮಾತು ಆತನ ಬಾಯಿಂದ ಹೊರಡುತ್ತಲೇ ಇತ್ತು. ಅದನ್ನು ಅಷ್ಟೇ ಸೌಮ್ಯದಿಂದಲೇ ಆಸ್ವಾದಿಸುತ್ತಿದ್ದರು ಜಯತೀರ್ಥ.
ಅಂದಹಾಗೆ ಈ ವಿಡಿಯೋ ಹಂಚಿಕೊಂಡ ಜಯತೀರ್ಥ, ಅದರ ಆಶಯವನ್ನೂ ಹೇಳಿಕೊಂಡಿದ್ದಾರೆ. ’ಕನ್ನಡದ ಸಿನಿಮಾಗಳಿಗೆ ಮತ್ತೆ ಈ ಥರಹದ ಸಂಭ್ರಮದ ದಿನಗಳು ಬೇಗ ಬರಲಿ ಎಂದು ಆಶಿಸುತ್ತೇನೆ‘ ಎಂದಿದ್ದಾರೆ.