ಸಿನಿವಾಣಿ

ತಮ್ಮ ಗುರುಗಳ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ತಾರಾ

chetannadiger

ಬೆಂಗಳೂರು: ತಾರಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ವೇಮಗಲ್​ ಜಗನ್ನಾಥರಾವ್ ನಿರ್ದೇಶನದ 'ತುಳಸಿದಳ' ಚಿತ್ರದ ಮೂಲಕ. ಈ ಚಿತ್ರ ದೊಡ್ಡ ಹಿಟ್​​ ಆಗಿದ್ದಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಮಾಟ-ಮಂತ್ರ ಹಾರರ್​ ಚಿತ್ರಗಳಿಗೆ ಹೊಸ ಟ್ರೆಂಡ್​ ಹುಟ್ಟುಹಾಕಿತು. ಆ ಚಿತ್ರದ ನಂತರ ವೇಮಗಲ್​ ನಿರ್ದೇಶನದ ಯಾವ ಚಿತ್ರದಲ್ಲೂ ತಾರಾ ನಟಿಸಿರಲಿಲ್ಲ. ಈಗ ಅವರ ಹೊಸ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಗುರುಕಾಣಿಕೆ ಕೊಟ್ಟಿದ್ದಾರೆ.

ವೇಮಗಲ್​ ನಿರ್ದೇಶನದ ಹೊಸ ಚಿತ್ರ 'ಆವರ್ತ'. ಈ ಚಿತ್ರದ ಹಾಡುಗಳನ್ನು ತಾರಾ ಅನುರಾಧ ಇತ್ತೀಚೆಗೆ ಬಿಡುಗಡೆ ಮಾಡಿದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟ್ರೇಲರ್ ಅನಾವರಣಗೊಳಿಸಿದರು.

ಹಾಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ತಾರಾ, 'ನನ್ನ ಮೊದಲ ಚಿತ್ರ 'ತುಳಸಿದಳ'. ಆ ಚಿತ್ರದಲ್ಲಿ ವೇಮಗಲ್ ಜಗನ್ನಾಥ್ ರಾವ್ ಅವರು ನನ್ನನ್ನು ಗುರುತಿಸಿ ಅವಕಾಶ ನೀಡಿದ್ದರು. ನನ್ನ ಗುರುಗಳು ನಿರ್ದೇಶಿಸಿರುವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿರುವುದಕ್ಕೆ ಬಹಳ ಖುಷಿಯಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ' ಎಂದು ತಾರಾ ಅನುರಾಧ ಶುಭ ಕೋರಿದರು.

ಯುವಕನೊಬ್ಬನಿಗೆ ಕಥೆ ಬರೆಯುವ ಹವ್ಯಾಸ. ಕಾಲ್ಪನಿಕ ಕಥೆ ಬರೆಯುವ ಬಯಕೆಯಿಲ್ಲದ ಆತನಿಗೆ ನೈಜಘಟನೆ ಕುರಿತು ಕಥೆ ಬರೆಯುವ ಆಸಕ್ತಿ. ಆ ಸಮಯದಲ್ಲಿ ಆತನಿಗೊಂದು ಮೆಸೇಜ್ ಬರುತ್ತದೆ. ಆತ ಆ ಸ್ಥಳಕ್ಕೆ ಹೋದಾಗ ಏನೆಲ್ಲಾ ಆಗುತ್ತದೆ? ಎಂಬುದು ಈ ಚಿತ್ರದ ಕಥೆ ಎನ್ನುವ ನಿರ್ದೇಶಕ ವೇಮಗಲ್ ಜಗನ್ನಾಥರಾವ್, ನವೆಂಬರ್ 18 ರಂದು ಚಿತ್ರವನ್ನು ತೆರೆಗೆ ತರುವುದಾಗಿ ಹೇಳುತ್ತಾರೆ.

ಕಥೆಗಾರನ ಪಾತ್ರದಲ್ಲಿ ಜಯಚಂದ್ರ ಕಾಣಿಸಿಕೊಂಡರೆ, ಸಿಓಡಿ ಅಧಿಕಾರಿಯಾಗಿ ಧನ್ವಿತ್​ ಇದ್ದಾರೆ. ನಯನ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಶಿವರಾಮಣ್ಣ ಸಹ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಥ್ರಿಲ್ಲರ್​ ಮಂಜು ಸಾಹಸ, ಅತಿಶಯ್​ ಜೈನ್​ ಅವರ ಸಂಗೀತ ಮತ್ತು ಮಲ್ಲಿಕಾರ್ಜುನ್​ ಅವರ ಛಾಯಾಗ್ರಹಣವಿದೆ.