ಸಿನಿವಾಣಿ

ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

ಬೆಂಗಳೂರು: ಕೆಲವು ದಿನಗಳ ಹಿಂದೆ ನಟಿ ನಿಧಿ ಸುಬ್ಬಯ್ಯಗೆ ಆಗಿದ್ದಂಥದ್ದೇ ಬೇಸರ ಆವಂತಿಕಾ ಶೆಟ್ಟಿಗೂ ಆಗಿದ್ದು, ಇವರೂ ಆಕೆಯಂತೆಯೇ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ನಟಿ ನಿಧಿ ಸುಬ್ಬಯ್ಯ ಬೆಡ್​ ಕೇಳಿ ಕಂಪನಿಯೊಂದಕ್ಕೆ ಆರ್ಡರ್ ಮಾಡಿದ್ದರು. ಆದರೆ ಆ ಕಂಪನಿಯವರು ಮೊದಲಿಗೆ ಅರ್ಧಮಂಚವನ್ನಷ್ಟೇ ಕಳಿಸಿದ್ದರು. ನಂತರ ಒಂದು ವಾರಕ್ಕೂ ಅಧಿಕ ಕಾಲ ಇ-ಮೇಲ್ ಹಾಗೂ ಮೇಲಿಂದ ಮೇಲೆ ಫೋನ್​ ಕರೆಗಳನ್ನು ಮಾಡಿ ವಿಚಾರಿಸಿಕೊಂಡ ಬಳಿಕವಷ್ಟೇ ಇನ್ನೊಂದು ಭಾಗ ಕಳಿಸಿದ್ದರಂತೆ.

ಅಷ್ಟೇ ಅಲ್ಲದೆ ಮಂಚದ ಉಳಿದ ಭಾಗ ಕಳಿಸಿದ ಅವರು ನಂತರ ಕಾರ್ಪೆಂಟರನ್ನು ಕಳಿಸಿರಲಿಲ್ಲ. ಬೆಂಗಳೂರು ಮೂಲದ ಕಂಪನಿಯಿಂದ ತುಂಬಾ ಹೆಚ್ಚಿನದ್ದನ್ನೇ ನಿರೀಕ್ಷಿಸಿದ್ದೆ ಎಂದು ನಿಧಿ ತಮಗಾದ ನೋವನ್ನು ಬಹಿರಂಗವಾಗಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದರು.

ಇದೀಗ ನಟಿ ಆವಂತಿಕಾ ಶೆಟ್ಟಿ ಕೂಡ ಹಾಗೇ ಮಾಡಿದ್ದಾರೆ. ವೈಮಾನಿಕ ಪ್ರಯಾಣದ ಸಂಸ್ಥೆಯೊಂದು ಸಮರ್ಪಕ ಸೇವೆ ಕೊಡದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ನನ್ನ ಫಾಲೋವರ್ಸ್ ಹಾಗೂ ಈ ಟ್ವೀಟ್ ನೋಡಿದವರು ಇವರಲ್ಲಿ ಫ್ಲೈಟ್​ ಬುಕ್ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಹಿಂಪಾವತಿ ಅವಕಾಶ ಇವರು 7 ಸಾವಿರ ರೂ. ಮೊತ್ತದ ಟಿಕೆಟ್ ಕಾಯ್ದಿರಿಸಿದರೆ, ಟಿಕೆಟ್ ರದ್ದು ಮಾಡಿದಾಗ ಬರೀ 700 ರೂ. ಮಾತ್ರ ಹಿಂದಕ್ಕೆ ಕೊಡುತ್ತಾರೆ ಎಂಬುದಾಗಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.